ಗಣಿತ ಕ್ಷೇತ್ರದಲ್ಲಿ ರಾಮಾನುಜಮ್ ಸಾಧನೆಗಳು ಅಗಣಿತ; ಎಚ್. ಸತ್ಯಪ್ರಸಾದ್

| Published : Dec 23 2024, 01:05 AM IST

ಸಾರಾಂಶ

ಅಂದಿನ ಬ್ರಿಟಿಷ್ ಸಾಮ್ರಾಜ್ಯದ ವಿಜ್ಞಾನ ಪ್ರಪಂಚದಲ್ಲಿ ಅತ್ಯುನ್ನತ ಗೌರವವಾದ ರಾಯಲ್ ಸೊಸೈಟಿಯ ಫೆಲೋ ಆಗಿ ರಾಮಾನುಜಮ್ ಆಯ್ಕೆಯಾಗಿದ್ದರು. ಈ ಗೌರವ ಪಡೆದ ಮೊದಲ ಭಾರತೀಯರಾಗಿ ಗುರುತಿಸಿಕೊಂಡಿದ್ದಾರೆ. ಅವರ ಗಣಿತ ಕ್ಷೇತ್ರದ ಸಾಧನೆ ಭಾರತ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಪ್ರಖ್ಯಾತಿಯನ್ನು ಗಳಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಗಣಿತ ಕ್ಷೇತ್ರದಲ್ಲಿ ಶ್ರೀನಿವಾಸ ರಾಮಾನುಜಮ್ ಅವರ ಸಾಧನೆಗಳು ಅಗಣಿತ ಎಂದು ವಿಜಯ ವಿಠಲ ಪಿಯು ಕಾಲೇಜು ಪ್ರಾಂಶುಪಾಲ ಹಾಗೂ ಗಣಿತಶಾಸ್ತ್ರ ಉಪನ್ಯಾಸಕ ಎಚ್. ಸತ್ಯಪ್ರಸಾದ್ ತಿಳಿಸಿದರು.

ಸರಸ್ವತಿಪುರಂನ ವಿಜಯ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ್ ರಾಮಾನುಜಮ್ ಅವರ ಜನ್ಮ ದಿನದ ನಿಮಿತ್ತ ರಾಷ್ಟ್ರೀಯ ಗಣಿತ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗಣಿತಶಾಸ್ತ್ರದ ಬಗ್ಗೆ ಅಪರಿಮಿತ ಪ್ರೀತಿಯನ್ನು ಹೊಂದಿದ್ದ ಅವರು, ಗಣಿತದಲ್ಲಿ ಅನೇಕ ಮಹತ್ವದ ಮತ್ತು ವಿಶಿಷ್ಟ ಸಂಶೋಧನೆಗಳನ್ನು ಮಾಡಿದರು. ಅವರ ಸಂಖ್ಯಾ ಪ್ರೇಮ ಲೋಕವಿದಿತ ಎಂದರು.

ಗಣಿತಶಾಸ್ತ್ರದಲ್ಲಿ ಅನೇಕ ಸೂತ್ರಗಳನ್ನು ಕಂಡು ಹಿಡಿದು ಅನೇಕ ಸಿದ್ಧಾಂತಗಳನ್ನು, ಸಮೀಕರಣಗಳನ್ನು, ಪ್ರಮೇಯಗಳನ್ನು ನೀಡಿದ್ದಾರೆ. ಅವರಿಗೆ ಸಂಖ್ಯೆಗಳ ಲಕ್ಷಣಗಳನ್ನು ನಂಬಲು ಅಸಾಧ್ಯವಾದಂತಹ ರೀತಿಯಲ್ಲಿ ನೆನಪಿಡುವ ಅಪೂರ್ವ ಸಾಮರ್ಥ್ಯವಿತ್ತು. ಗಣಿತ ಕ್ಷೇತ್ರದ ಸಂಶೋಧನೆ ಅವರಿಗೆ ಉನ್ನತ ಪ್ರಶಂಸೆ ಮತ್ತು ಪ್ರತಿಷ್ಠೆಗಳನ್ನು ತಂದು ಕೊಟ್ಟಿತ್ತು ಎಂದು ಅವರು ಹೇಳಿದರು.

ಅಂದಿನ ಬ್ರಿಟಿಷ್ ಸಾಮ್ರಾಜ್ಯದ ವಿಜ್ಞಾನ ಪ್ರಪಂಚದಲ್ಲಿ ಅತ್ಯುನ್ನತ ಗೌರವವಾದ ರಾಯಲ್ ಸೊಸೈಟಿಯ ಫೆಲೋ ಆಗಿ ರಾಮಾನುಜಮ್ ಆಯ್ಕೆಯಾಗಿದ್ದರು. ಈ ಗೌರವ ಪಡೆದ ಮೊದಲ ಭಾರತೀಯರಾಗಿ ಗುರುತಿಸಿಕೊಂಡಿದ್ದಾರೆ. ಅವರ ಗಣಿತ ಕ್ಷೇತ್ರದ ಸಾಧನೆ ಭಾರತ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಪ್ರಖ್ಯಾತಿಯನ್ನು ಗಳಿಸಿದೆ. ಅವರ ಸಂಖ್ಯಾ ಸಿದ್ಧಾಂತ ಮತ್ತು ವಿಭಜನೆಯ ಕೊಡುಗೆಯನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ. ಈ ಕಾರಣಕ್ಕೆ ಅವರನ್ನು ಅನಂತವನ್ನು ಅರಿತ ಮನುಷ್ಯ ಎಂದು ಕರೆಯಲಾಗುತ್ತಿತ್ತು ಎಂದರು.

ಗಣಿತಶಾಸ್ತ್ರದ ಅಧ್ಯಯನದಿಂದ ತಾರ್ಕಿಕ ಕೌಶಲ್ಯ, ಗ್ರಹಣಶಕ್ತಿ ಮತ್ತು ಏಕಾಗ್ರತೆಯ ಮಟ್ಟ ಹೆಚ್ಚಾಗುತ್ತದೆ. ಗಣಿತ ವಿಷಯದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯನ್ನು ಹೊಂದಿ ವಿಶೇಷವಾದ ಸಾಧನೆ ಮಾಡಿದಾಗ ಇಂತಹ ಆಚರಣೆಗಳು ಸಾರ್ಥಕವಾಗುತ್ತದೆ ಎಂದು ಅವರು ತಿಳಿಸಿದರು.

ಕಾಲೇಜಿನ ಉಪನ್ಯಾಸಕರಾದ ಎಸ್.ಎಸ್. ರಮೇಶ್, ಕೆ.ಎಸ್. ಪ್ರದೀಪ್, ಎನ್. ಅನಿತಾ, ಡಾ.ಆರ್.ಎಂ. ನವೀನ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಇದ್ದರು.