ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಾಣ ಪ್ರತಿಷ್ಠಾಪನೆಯ ನೇರ ವೀಕ್ಷಣೆ ಮಾಡುತ್ತ ರಾಮತಾರಕ ಮಂತ್ರ ಪಠಣ, ಚಿಣ್ಣರಿಗೆ ಶ್ರೀರಾಮ, ಮಾರುತಿಯ ವೇಷ ತೊಡಿಸಿ ಸಂಭ್ರಮ, ರಾಮಾಯಣ ಗ್ರಂಥದ ಮೆರವಣಿಗೆ, ಪಾನಕ ಕೋಸಂಬರಿ ವಿತರಣೆ, ಅನೇಕ ಕಡೆ ಅನ್ನಸಂತರ್ಪಣೆ, ಸಂಜೆ ಬೆಳಗಿದ ಲಕ್ಷದೀಪಗಳು...
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ರಾಮಮಯವಾಗಿತ್ತು. ಬೆಳಗ್ಗೆಯಿಂದಲೇ ಪ್ರತಿಷ್ಠಾಪನೆ ಕ್ಷಣವನ್ನು ಸಂಭ್ರಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಪ್ರತಿಷ್ಠಾಪನೆ ನಂತರ ಭಕ್ತರ ಸಂಭ್ರಮಾಚರಣೆ, ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಪ್ರಮುಖ ದೇವಾಲಯದಲ್ಲಿ ಹೋಮ ಹವನಾದಿಗಳು, ದಿನವಿಡೀ ರಾಮನಾಮ ಜಪದ ಜೊತೆಗೆ ವಿಶೇಷ ಪೂಜೆ ನಡೆಯಿತು.
ಪ್ರಮುಖ ರಸ್ತೆ, ಗಲ್ಲಿಗಳು ರಸ್ತೆಗಳೆಲ್ಲ ಕೇಸರಿ ಧ್ವಜಗಳು, ರಂಗೋಲಿಗಳು ರಾರಾಜಿಸಿದವು. ಎಲ್ಲೆಡೆ ಪಾನಕ, ಕೋಸಂಬರಿಯನ್ನು ವಿತರಣೆ ಮಾಡಲಾಯಿತು.
ರಾಜಾಜಿನಗರ, ಬಸವನಗುಡಿ, ಜೆ.ಪಿ.ನಗರದಲ್ಲಿನ ಶ್ರೀರಾಮ ದೇವಸ್ಥಾನ, ಇಂದಿರಾನಗರದ ಧೂಪನಹಳ್ಳಿಯ ಕೋದಂಡರಾಮ, ಈಜಿಪುರದ ಶ್ರೀರಾಮ ದೇವಸ್ಥಾನ, ವಿದ್ಯಾರಣ್ಯಪುರ ಎಚ್‌ಎಂಟಿ ಲೇಔಟ್‌ನ ಶ್ರೀರಾಮ ಮಂದಿರ ಸೇರಿದಂತೆ ನಾನಾ ರಾಮ, ಆಂಜನೇಯ ಹಾಗೂ ಇತರೆ ದೇವಸ್ಥಾನಗಳಲ್ಲಿ ಭಕ್ತರು ದಿನವಿಡೀ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ರಾಮನಾಮ ಜಪಿಸಿದರು.
ಹನುಮಂತ ನಗರದಲ್ಲಿರುವ ಶ್ರೀರಾಮಾಂಜನೇಯ ಗುಡ್ಡದ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ನಾಗರಬಾವಿ, ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್‌ಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಬೃಹತ್ ರಂಗೋಲಿ, ರಾಮಮಂದಿರದ ಚಿತ್ರ ಬರೆಯಲಾಗಿತ್ತು.
ಮಲ್ಲೇಶ್ವರದ ಲಕ್ಷೀನರಸಿಂಹಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ, ರಾಮತಾರಾಕ ಹೋಮ, ಶ್ರೀರಾಮ ಪಟ್ಟಾಭಿಷೇಕ ಹಾಗೂ ಆಂಜನೇಯರ ಉತ್ಸವ ನಡೆಯಿತು.
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಾದ್ಯಗೋಷ್ಠಿಯೊಂದಿಗೆ ನಡೆದ ರಾಮಯಣ ಗ್ರಂಥ ಮೆರವಣಿಗೆಯಲ್ಲಿ ಭಕ್ತರು, ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಮೊಳಗಿಸುತ್ತ ಸಾಗಿದರು. ಡಾ। ಅರುಣ್ ಪ್ರಕಾಶ್ ಆಚಾರ್ಯ ನೇತೃತ್ವದಲ್ಲಿ ರಾಮತಾರಕ ಹೋಮ, ಕಳಶಾರಾಧನೆ, ಮಂಡಲಾರಾಧನೆ ನೆರವೇರಿತು.
ಮೈಸೂರು ಬ್ಯಾಂಕ್ ಸರ್ಕಲ್ ಬಳಿಯ ಓಣಿ ಆಂಜನೇಯ ದೇವಸ್ಥಾನದ ಪಟ್ಟಾಭಿರಾಮಚಂದ್ರನಿಗೆ ವಿಶೇಷ ಪೂಜೆ, ಬಂಗಾರದ ಕಳಸವನ್ನಿಟ್ಟು ವಿಶೇಷ ಅಲಂಕಾರ ಮಾಡಲಾಗಿತ್ತು.
ಸೀತೆ, ಲಕ್ಷ್ಮಣ ಹನುಮಂತನಿಗೂ ವಿಶೇಷ ಪೂಜೆ ನೆರವೇರಿತು. ಗೋಮಾತಾ ಭಜನ ಮಂಡಳಿಯವರು ಬೆಳಗ್ಗೆ 8 ರಾತ್ರಿ 8ರವರೆಗೆ ನಿರಂತರ ಭಜನೆ ಮಾಡಿದರು. ಸರ್ಕಲ್ ನಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಸಮಯಕ್ಕೆ ಆಂಜನೇಯ ದೇವಸ್ಥಾನದಲ್ಲಿ ರಾಮತಾರಕ ಹೋಮ ನಡೆಯಿತು. ಭಕ್ತರಿಗೆ ಅನ್ನ ಪ್ರಸಾದ, ಲಡ್ಡು ವಿತರಿಸಿದರು. ಸರ್ಕಲ್‌ನಲ್ಲಿ ಶ್ರೀರಾಮನ ಪ್ರತಿಮೆಯನ್ನಿಟ್ಟು ಸ್ಮರಣೆ ಮಾಡಲಾಯಿತು.
ಚಿಕ್ಕಪೇಟೆ ವರ್ತಕರು ಭಕ್ತರಿಗೆ ಅನ್ನಪ್ರಸಾದ ವಿತರಣೆ ಮಾಡಿದರು. ಸಮೀಪದ ಮಾಮುಲ್‌ಪೇಟೆ ವ್ಯಾಪಾರಿಗಳು ಅಂಗಡಿ ಮುಂಗಟ್ಟು ಬಂದ್ ಮಾಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಜಾಜಿನಗರ ರಾಘವೇಂದ್ರ ಮಠದಿಂದ ರಾಮಮಂತ್ರ ಸ್ತೋತ್ರ ಪಾರಾಯಣ ಮೂಲಕ ಭಕ್ತರು ಮುಖ್ಯ ರಸ್ತೆಯಲ್ಲಿ ರಾಮ ರಥಯಾತ್ರೆ ನಡೆಸಿದರು. ಹೆಬ್ಬಾಳದ ಕೊಡಿಗೆಹಳ್ಳಿ ಗಣಪತಿ ದೇವಾಲಯದಲ್ಲಿ ಧಾರ್ಮಿಕ ಕೈಂಕರ್ಯ ಜರುಗಿದವು.
ವಿದ್ಯಾರಣ್ಯಪುರ ಎಚ್‌ಎಂಟಿ ಲೇಔಟ್‌ನ ಶ್ರೀರಾಮ ಮಂದಿರ, ಕೋರಮಂಗಲದ ಶಶಿಕಲಾ ಅಪಾರ್ಟ್‌ಮೆಂಟ್ ಬಳಿಯಿರುವ ಶ್ರೀರಾಮ ದೇವಸ್ಥಾನ, ಸಿಬಿಐ ಸಮೀಪದಲ್ಲಿರುವ ಆಂಜನೇಯ ದೇವಾಲಯ, ಜಯನಗರ 9ನೇ ಬ್ಲಾಕ್‌ನ ಆಂಜನೇಯ ಸೇರಿದಂತೆ ನಾನಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.ಬಾಕ್ಸ್...
ನೇರಪ್ರಸಾರ ವೀಕ್ಷಣೆ
ಬಸವನಗುಡಿ ಶಂಕರಮಠದಲ್ಲಿ ದೊಡ್ಡ ಪರದೆ ಮೂಲಕ ಬಾಲರಾಮನ ಪ್ರಾಣ ಪ್ರತಿಷ್ಠಾನೆ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಹಲಸೂರು ಸೇಂಟ್ ಜೋನ್ಸ್ ರಸ್ತೆ, ವಿಜಯನಗರ ಮಾರುತಿ ಮಂದಿರ, ಮಲ್ಲೇಶ್ವರ ಸೇರಿ ನೂರಾರು ದೇವಸ್ಥಾನಗಳಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿತ್ತು.
ರಾಜಾಜಿನಗರದ ಬ್ರಿಗೇಡ್ ಗೇಟ್‌ವೇನಲ್ಲಿನ ಓರಿಯನ್ ಮಾಲ್ ನಲ್ಲಿ ನೇರ ಪ್ರಸಾರ ಆಯೋಜಿಸಲಾಗಿತ್ತು. ಮನೆಗಳಲ್ಲಿ ಟಿವಿ, ಟ್ಯಾಬ್, ಮೊಬೈಲ್‌ಗಳಲ್ಲಿ ಬಾಲರಾಮನ ದರ್ಶನ ಆದಾಗ ಹಲವರು ಹೂವು, ಮಂಗಳಾರತಿ ಬೆಳಗಿ ಪೂಜಿಸಿದ್ದು ವಿಶೇಷವಾಗಿತ್ತು.
ಸಚಿವರು, ಶಾಸಕರಿಂದ ಪೂಜೆ
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಬಾಲಬ್ರೂಯಿ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ಸೇರಿ ಹಲವರು ಸಚಿವರಿಗೆ ಸಾಥ್ ನೀಡಿದರು.
ಗಿರಿನಗರದ ವಾಸವಿ ದೇವಸ್ಥಾನದಲ್ಲಿ ರೂಪಿಸಿದ ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿಯನ್ನು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಉದ್ಘಾಟಿಸಿದರು.
ಜೆ.ಪಿ.ನಗರದ ಸಾರಕ್ಕಿ ಮುಖ್ಯರಸ್ತೆ ಶ್ರೀರಾಮ ಮಂದಿರದಲ್ಲಿ ನಡೆದ ಹೋಮ, ಹವನ, ಪೂಜೆಯಲ್ಲಿ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಪೂಜಾ ಕೈಂಕರ್ಯಕ್ಕೆ ಸಾಕ್ಷಿಯಾದರು.
ಬೆಂಗಳೂರು ದಕ್ಷಿಣದ ಚೆನ್ನಕೇಶವನಗರದ ವೃತ್ತದಲ್ಲಿ ವಿಶೇಷ ಪೂಜೆಯಲ್ಲಿ ಶಾಸಕ ಎಂ.ಕೃಷ್ಣಪ್ಪ ಭಾಗಿಯಾಗಿದ್ದರು. ಪಾಲಿಕೆ ಮಾಜಿ ಸದಸ್ಯ ಶಾಂತಬಾಬು ನೇತೃತ್ವದಲ್ಲಿ ಅಯೋಜನೆಗೊಂಡಿದ್ದ ವಿಶೇಷ ಪೂಜೆಯಲ್ಲಿ ಅವರು ಪಾಲ್ಗೊಂಡಿದ್ದರು.