ಸಾರಾಂಶ
ಹಿರೇಕೆರೂರು: ತಾಲೂಕಿನ ದೂದಿಹಳ್ಳಿಯ ಮೊರಾರ್ಜಿ ವಸತಿ ಶಾಲೆ ಹಾಗೂ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಸ್ವಂತ ಗ್ರಾಮವಾದ ಆಲದಕಟ್ಟಿ ಗ್ರಾಮಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ್ ಭೇಟಿ ನೀಡಿ ಸಮಾಲೋಚನೆ ನಡೆಸಿದರು.
ಮೃತ ವಿದ್ಯಾರ್ಥಿನಿ ತಾಲೂಕಿನ ದೂದಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದಳು. ಆರೋಗ್ಯ ಸರಿ ಇಲ್ಲದ ಕಾರಣ ಮೇ ೨೮ರಂದು ತಮ್ಮ ಊರಾದ ಆಲದಕಟ್ಟಿಗೆ ಬಂದು ಜು. ೨ನೇ ಮಂಗಳವಾರ ಮನೆಯಲ್ಲಿ ಯಾರು ಇಲ್ಲದೇ ವೇಳೆ ನೇಣಿಗೆ ಶರಣಾಗಿದ್ದಳು. ಸಾವಿಗೆ ಡೆತ್ ನೋಟ್ ಬರೆದಿದ್ದು, ಬಾಲಕಿ ಬರೆದಿದ್ದ ಡೆತ್‌ನೋಟ್ ವೈರಲ್ ಆಗುತ್ತಿದ್ದಂತೆ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದರು. ತನಿಖೆಯ ಭಾಗವಾಗಿ ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ಮಾಡಿ ಪೋಷಕರೊಂದಿಗೆ ಸಮಾಲೋಚನೆ ನಡೆಸಿ, ಆನಂತರ ದೂದಿಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸಿದರು.ನಂತರ ಮಾತನಾಡಿದ ಅವರು ವಿದ್ಯಾರ್ಥಿನಿ ಅರ್ಚನಾ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್ ಆಧಾರವಾಗಿ ಇಂದು ವಿದ್ಯಾರ್ಥಿನಿಯ ಪಾಲಕರು ಹಾಗೂ ಶಾಲೆಯ ಶಿಕ್ಷಕರ ಹಾಗೂ ವಿದ್ಯಾರ್ಥಿನಿಯ ತರಗತಿ ಮಕ್ಕಳ ಜೊತೆ ಸಮಾಲೋಚನೆ ನಡೆಸಲಾಯಿತು. ವಿದ್ಯಾರ್ಥಿಯ ಪಾಲಕರು ಸಹ ಶಾಲೆಯ ಶಿಕ್ಷಕರ ಮೇಲೆ ಯಾವುದೇ ರೀತಿಯ ಅನುಮಾನವನ್ನು ವ್ಯಕ್ತಪಡಿಸಿಲ್ಲ. ಇನ್ನು ಶಾಲೆಯಲ್ಲಿ ಸಮಾಲೋಚನೆ ವೇಳೆ ಡೆತ್‌ನೋಟ್ ನಲ್ಲಿ ನಮೂದಾಗಿರುವ ವಿಷಯಕ್ಕೆ ಪೂರಕವಾದ ಅಂಶಗಳು ಕಂಡು ಬಂದಿಲ್ಲ. ಶಾಲೆಯ ಮಕ್ಕಳು ಶಿಕ್ಷಕನ ಕುಟುಂಬದ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಮಕ್ಕಳ ಮೇಲೆ ಯಾವುದೇ ಒತ್ತಡ ಹಾಕದ ಹಾಗೇ ವಿಚಾರಣೆ ನಡೆಸಲಾಯಿತು. ಆದರೂ ಮಕ್ಕಳು ಈ ವಿಷಯದಲ್ಲಿ ಸ್ವಲ್ಪಮಟ್ಟಿಗೆ ವಿಚಲತರಾದರು. ಶಿಕ್ಷಕರೂ ಈ ಘಟನೆಗೆ ಸಂಬಂಧಿಸದಂತೆ ಸ್ಪಷ್ಟತೆ ನೀಡಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿನಿಯ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಜತೆಗೆ ಆರ್ಥಿಕ ಸಹಾಯಕ್ಕಾಗಿ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಸಹಾಯ, ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲು ತಹಸೀಲ್ದಾರ್ ಅವರಿಗೆ ಹಾಗೂ ವಿದ್ಯಾರ್ಥಿನಿಯ ಸಹೋದರಿಯ ಮುಂದಿನ ವ್ಯಾಸಂಗಕ್ಕಾಗಿ ಶಿಕ್ಷಣ ಇಲಾಖೆಯಿಂದ ಪ್ರೊತ್ಸಾಹಧನ ಕೊಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.ಸಮಾಲೋಚನೆ ಸಂದರ್ಭದಲ್ಲಿ ತಹಸೀಲ್ದಾರ್ ಎಚ್. ಪ್ರಭಾಕರಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಸಿಪಿಐ ಬಸವರಾಜ ಪಿ.ಎಸ್., ಪಿಎಸ್‌ಐ ನೀಲಪ್ಪ ನರೇನಾಲ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಾಥ್ ನೀಡಿದರು.