ರಾಮಾಯಣ ಮಹಾಕಾವ್ಯ ಇಂದಿಗೂ ಪ್ರಸ್ತುತ: ಡಾ.ಕುಮಾರ

| Published : Oct 18 2024, 12:21 AM IST

ಸಾರಾಂಶ

ಡೊಳ್ಳುಕುಣಿತ, ತಮಟೆ, ನಗಾರಿ, ಪೂಜಾ ಕುಣಿತ ಮೆರವಣಿಗೆ ಸೇರಿದಂತೆ ವಿವಿಧ ಕಲಾ ತಂಡಗಳು ಹಾಗೂ ಪೂರ್ಣ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಗೆ ವಿಶೇಷ ಮೆರಗು ನೀಡಿದರು. ಮೆರವಣಿಗೆಯು ಜ್ಯುಬಿಲಿ ಪಾರ್ಕ್ ನಿಂದ ಹೊರಟು ಮಹಾವೀರ ವೃತ್ತ, ಸಂಜಯ ವೃತ್ತ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಮಾವೇಶಗೊಂಡಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಯಾವುದೇ ಒಂದು ಸಾಹಿತ್ಯ ರಚನೆಯಾದರೆ ಆ ಸಾಹಿತ್ಯವು ಕೇವಲ ಆ ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗುತ್ತದೆ. ಆದರೆ ಸಾವಿರಾರು ವರ್ಷಗಳ ಹಿಂದೆ ಬರೆದಂತಹ ರಾಮಾಯಣ ಮಹಾಕಾವ್ಯವು ಇಂದಿಗೂ ಕೂಡ ಪ್ರಸ್ತುತವಾಗಿದ್ದು, ಮುಂದೆ ಸೂರ್ಯ ಚಂದ್ರರಿರುವವರೆಗೂ ಪ್ರಸ್ತುತವಾಗಿರುತ್ತದೆ. ಏಕೆಂದರೆ ಅಷ್ಟೊಂದು ನೈತಿಕ ಮೌಲ್ಯಗಳು ಈ ಕಾವ್ಯದಲ್ಲಿ ಅಡಗಿವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಗುರುವಾರ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭರತ ಖಂಡಕ್ಕೆ ರಾಮಾಯಣವೆಂಬ ಗ್ರಂಥವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರ ವ್ಯಕ್ತಿತ್ವದಲ್ಲಿ ಅಡಗಿರುವ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ತಮ್ಮ ಮಕ್ಕಳಿಗೂ ತಿಳಿಸಬೇಕು ಎಂದು ಹೇಳಿದರು.

ಪ್ರಪಂಚದ ಮೊದಲ ಮಹಾಕಾವ್ಯ ರಾಮಾಯಣ ಎಂಬ ಮಾತಿದ್ದು, ರಾಮಾಯಣವನ್ನು ರಚಿಸಿದ ವಾಲ್ಮೀಕಿಯವರನ್ನು ಆದಿಕವಿ, ಮೊದಲ ಕವಿ ಎಂದು ಕರೆಯಲಾಗುತ್ತದೆ. ರಾಮಾಯಣ ಮಹಾಕಾವ್ಯವು ಸುಮಾರು 24,000 ಶ್ಲೋಕಗಳನ್ನು ಒಳಗೊಂಡಿದ್ದು, ಈ ಮಹಾಕಾವ್ಯದ ನೆಲೆಗಟ್ಟಿನಲ್ಲಿ ದೇಶದ ಎಲ್ಲಾ ಭಾಷೆಯಲ್ಲಿಯೂ ರಾಮಾಯಣ ಕಾವ್ಯವು ರಚಿತವಾಗಲು ಮಹರ್ಷಿ ವಾಲ್ಮೀಕಿ ಅವರು ಕಾರಣರಾಗಿದ್ದಾರೆ. ಕುವೆಂಪು ಹಾಗೂ ಪಂಪ ಕವಿಗಳು ಸೇರಿದಂತೆ ಇನ್ನಿತರೆ ಕವಿಗಳು ರಾಮಾಯಣವನ್ನು ಬರೆಯಲು ವಾಲ್ಮೀಕಿಯ ಸಂಸ್ಕೃತ ಭಾಷೆಯ ರಾಮಾಯಣ ಮೂಲಾಧಾರವಾಗಿದೆ ಎಂದು ಹೇಳಿದರು.

ಶಾಸಕ ಪಿ.ರವಿಕುಮಾರ್‌ ಮಾತನಾಡಿ, ವಾಲ್ಮೀಕಿ ಎಂದಾಕ್ಷಣ ನಮಗೆಲ್ಲ ನೆನಪಾಗುವುದೇ ರಾಮಾಯಣ ಕಾವ್ಯ. ವಾಲ್ಮೀಕಿಯವರು ಯಾವುದೇ ಗುರುಕುಲಕ್ಕೆ ಹೋಗಿ ಗುರುಗಳಿಂದ ಪಾಠ ಕಲಿತವರಲ್ಲ. ಏಕೆಂದರೆ ಹಿಂದಿನ ಕಾಲದಲ್ಲಿ ಶೂದ್ರರಿಗೆ ಯಾವುದೇ ವೈದಿಕರು ವಿದ್ಯೆ ನೀಡುತ್ತಿರಲಿಲ್ಲ. ಶೂದ್ರರಾಗಿ ಹುಟ್ಟಿದ ವಾಲ್ಮೀಕಿ ಅವರು ಯಾವುದೇ ಗುರುವಿನ ಸಹಾಯ ಪಡೆಯದೆ ರಾಮಾಯಣವೆಂಬ ಮಹಾಗ್ರಂಥವನ್ನು ರಚಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸಿಫ್‌, ಅಪರ ಜಿಲ್ಲಾಧಿಕಾರಿ ಡಾ. ಎಚ್. ಎಲ್. ನಾಗರಾಜು, ಉಪ ವಿಭಾಗಾಧಿಕಾರಿ ಶಿವಮೂರ್ತಿ, ನಗರಸಭೆ ಪೌರಾಯುಕ್ತ ಎಂ ಪಿ ಕೃಷ್ಣಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಸೂರು ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷ ಸಿ.ಡಿ.ಗಂಗಾಧರ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಯೀಮ್, ನಗರಸಭೆ ಅಧ್ಯಕ್ಷ ಎಂ. ವಿ ಪ್ರಕಾಶ್ (ನಾಗೇಶ್), ಉಪಾಧ್ಯಕ್ಷ ಅರುಣ್ ಕುಮಾರ್, ಸದಸ್ಯರಾದ ಶ್ರೀಧರ್, ಶಿವಲಿಂಗು, ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ ಸಿದ್ದಲಿಂಗೇಶ್ ಇತರರಿದ್ದರು.

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಮೆರವಣಿಗೆಗೆ ಚಾಲನೆ:

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಆಚರಣೆಯ ಅಂಗವಾಗಿ ಇಂದು ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನೊಳಗೊಂಡ ಮೆರವಣಿಗೆಗೆ ನಗರದ ಜ್ಯುಬಿಲಿ ಪಾರ್ಕ್ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,ಅಪರ ಜಿಲ್ಲಾಧಿಕಾರಿ ಡಾ. ಎಚ್. ಎಲ್. ನಾಗರಾಜು ಅವರು ಚಾಲನೆ ನೀಡಿದರು.

ಡೊಳ್ಳುಕುಣಿತ, ತಮಟೆ, ನಗಾರಿ, ಪೂಜಾ ಕುಣಿತ ಮೆರವಣಿಗೆ ಸೇರಿದಂತೆ ವಿವಿಧ ಕಲಾ ತಂಡಗಳು ಹಾಗೂ ಪೂರ್ಣ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಗೆ ವಿಶೇಷ ಮೆರಗು ನೀಡಿದರು. ಮೆರವಣಿಗೆಯು ಜ್ಯುಬಿಲಿ ಪಾರ್ಕ್ ನಿಂದ ಹೊರಟು ಮಹಾವೀರ ವೃತ್ತ, ಸಂಜಯ ವೃತ್ತ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಮಾವೇಶಗೊಂಡಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮೋಹನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷೆ ಮೀರಾಶಿವಲಿಂಗಯ್ಯ ಇತರರಿದ್ದರು.