ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಜರುಗಲಿರುವ ದಸರಾ ಧರ್ಮ ಸಮ್ಮೇಳನಕ್ಕೆ ತೆರಳುವ ಮುನ್ನ ರಂಭಾಪುರಿ ಜ. ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಭಗವತ್ಪಾದರು ಶುಕ್ರವಾರ ತಾಲೂಕಿನ ಶ್ರೀಮದ್ ರಂಭಾಪುರಿ ಶಾಖಾ ಮುಕ್ತಿಮಂದಿರ ಕ್ಷೇತ್ರಕ್ಕೆ ಭೇಟಿ ನೀಡಿ, ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಿದರು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಮುಕ್ತಿಮಂದಿರ ಕ್ಷೇತ್ರದಲ್ಲಿರುವ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಜಗದ್ಗುರುಗಳು, ಗುರುಪರಂಪರೆಯ ಸ್ಮರಣೆಯೊಂದಿಗೆ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ರಂಭಾಪುರಿ ಪೀಠದ ಗುರುಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಮುಕ್ತಿಮಂದಿರ ಕ್ಷೇತ್ರದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮವು ಭಕ್ತಿಭಾವದ ವಾತಾವರಣಕ್ಕೆ ಸಾಕ್ಷಿಯಾಯಿತು.

ಈ ವೇಳೆ ಮಾತನಾಡಿದ ರಂಭಾಪುರಿ ಜಗದ್ಗುರುಗಳು ಅವರು, ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಧಾರ್ಮಿಕ ಚಿಂತನೆ, ಸಮಾಜಮುಖಿ ಕಾರ್ಯಗಳು ಹಾಗೂ ಗುರುಪರಂಪರೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, ಗುರುಗಳ ಸ್ಮರಣೆ ಮತ್ತು ಆದರ್ಶಗಳು ಸದಾ ಪ್ರೇರಣಾದಾಯಕವಾಗಿವೆ. ಗುರುಪರಂಪರೆ ಧಾರ್ಮಿಕ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಕೊಂಡಿಯಾಗಿದೆ. ಗುರುಗಳು ತೋರಿದ ಮಾರ್ಗದಲ್ಲಿ ಸಾಗುವುದು, ಅವರು ಬೋಧಿಸಿದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದಸರಾ ಹಬ್ಬವು ಧರ್ಮ, ಸತ್ಯ ಮತ್ತು ಸದಾಚಾರಗಳ ಮಹತ್ವವನ್ನು ಸಾರುವ ಪರ್ವವಾಗಿದೆ. ಧಾರ್ಮಿಕ ಸಮ್ಮೇಳನಗಳು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದರ ಜತೆಗೆ, ನೈತಿಕ ಮೌಲ್ಯಗಳು ಹಾಗೂ ಸೌಹಾರ್ದತೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಮುಕ್ತಿಮಂದಿರ ಕ್ಷೇತ್ರ ಪಟ್ಟಾಧ್ಯಕ್ಷ ಶ್ರೀವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಲಿಂ.ಜ.ವೀರಗಂಗಾಧರ ಕೃಪಾಶೀರ್ವಾದದಿಂದ ಹಾಗೂ ಈಗೀನ ರಂಭಾಪುರಿ ಜ.ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರ ದಿವ್ಯದೃಷ್ಟಿಯಿಂದ ನಾಡಿನ ಎಲ್ಲೇಡೆ ದಸರಾ ಧರ್ಮ ಸಮ್ಮೇಳನಗಳು ಧಾರ್ಮಿಕ ಸೆಲೆಯನ್ನು ಬಿತ್ತುತ್ತಿವೆ. ಜಮಖಂಡಿಯಲ್ಲಿ ನಡೆಯುವ ಸಮ್ಮೇಳನವು ಸಹ ಜಗದ್ಗುರುಗಳ ಆಶೀರ್ವಾದದಿಂದ ಅದ್ಧೂರಿಯಾಗಿ ನಡೆಯಲಿದೆ ಎಂದರು.

ಈ ವೇಳೆ ಯಡೆಯೂರ ಶ್ರೀಗಳು ಉಪಸ್ಥಿತರಿದ್ದರು.