ಎಚ್ಡಿಕೆ ಆಪರೇಷನ್‌ ಬಗ್ಗೆ ಟೀಕೆ : ಬಿಜೆಪಿ, ಜೆಡಿಎಸ್‌ ತೀವ್ರ ಆಕ್ರೋಶ

| Published : Mar 31 2024, 02:02 AM IST / Updated: Mar 31 2024, 07:56 AM IST

HD Kumaraswamy
ಎಚ್ಡಿಕೆ ಆಪರೇಷನ್‌ ಬಗ್ಗೆ ಟೀಕೆ : ಬಿಜೆಪಿ, ಜೆಡಿಎಸ್‌ ತೀವ್ರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಆಪರೇಷನ್ ಕುರಿತು ಕಾಂಗ್ರೆಸ್‌ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ನೀಡಿದ ಹೇಳಿಕೆಗೆ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

 ಬೆಂಗಳೂರು :  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಆಪರೇಷನ್ ಕುರಿತು ಕಾಂಗ್ರೆಸ್‌ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ನೀಡಿದ ಹೇಳಿಕೆಗೆ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. 

ತಂದೆಯ ಆರೋಗ್ಯದ ಕುರಿತು ಈ ರೀತಿಯ ಕೀಳು ಹೇಳಿಕೆಗಳನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರೆ, ಅನಾರೋಗ್ಯದ ವಿಚಾರಗಳನ್ನು ರಾಜಕೀಯ ಎಳೆದು ತರೋದು, ಮಾನವೀಯತೆ ಮೀರಿ ವರ್ತಿಸುವುದು ಸರಿಯಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರ ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ.

ಚುನಾವಣೆ ಬಂದರೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆಸ್ಪತ್ರೆ ಸೇರ್ತಾರೆ, ಮೂರೇ ದಿನದಲ್ಲಿ ವಾಪಸ್ ಬರುತ್ತಾರೆಂದು ಶ್ರೀರಂಗಪಟ್ಟಣ ಕಾಂಗ್ರೆಸ್‌ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ವ್ಯಂಗ್ಯವಾಡಿದ್ದರು.

ಈ ಕುರಿತು ತೀವ್ರ ಕಿಡಿಕಾರಿರುವ ನಿಖಿಲ್‌, ತಮ್ಮ ತಂದೆಯ ಆರೋಗ್ಯದ ಕುರಿತು ಬಂಡಿಸಿದ್ದೇಗೌಡರಿಂದ ಕೀಳುಮಟ್ಟದ ಟೀಕೆಗಳನ್ನು ನಿರೀಕ್ಷಿರಲಿಲ್ಲ. ಆಧುನಿಕ ತಂತ್ರಜ್ಞಾನದ ಮೂಲಕ ನಡೆದಿರುವ ಶಸ್ತ್ರ ಚಿಕಿತ್ಸೆಯಿಂದಾಗಿ ನಮ್ಮ ತಂದೆ ಮೂರೇ ದಿನದಲ್ಲಿ ಜನರ ಮುಂದೆ ಬಂದು ನಿಲ್ಲುವಂತಾಗಿದೆ. ಆರು ವರ್ಷಗಳಲ್ಲಿ ಕುಮಾರಸ್ವಾಮಿ ಅವರಿಗೆ 3 ಬಾರಿ ಹೃದಯ ಶಸ್ತ್ರ ಚಿಕಿತ್ಸೆಯಾಗಿದೆ ಎಂದು ಹೇಳಿದ್ದಾರೆ.

ಇನ್ನು ಮಾಜಿ ಸಚಿವ ಸಿ.ಎಸ್‌. ಪುಟ್ಟರಾಜು ಅವರಂತು ಬಂಡಿಸಿದ್ದೇಗೌಡ ಅವರ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ., ಬಂಡಿಸಿದ್ದೇಗೌಡರನ್ನು ನಾಯಕನನ್ನಾಗಿ ಮಾಡಲು ಹೋಗಿಯೇ ಕುಮಾರಣ್ಣನ ಆರೋಗ್ಯ ಈ ಸ್ಥಿತಿಗೆ ಬಂದಿದ್ದು. ಅಂಬರೀಶ್ ಸೋಲಿಸಿ ತಾನು ಗೆಲ್ಲಲು ಕುಮಾರಣ್ಣ ಅವರನ್ನು ಹಳ್ಳಿ ಹಳ್ಳಿ ಸುತ್ತಿಸಿದರು. ಅಂದಿನಿಂದಲೇ ಕುಮಾರಸ್ವಾಮಿ ಆರೋಗ್ಯ ಕ್ಷೀಣಿಸಿತು. ಕುಮಾರಣ್ಣನ ಬಗ್ಗೆ ಮಾತನಾಡಿದ್ದು ತಪ್ಪು ಎಂದು ಅವರ ತಾಯಿ ಮುಂದೆ ಕ್ಷಮೆ ಕೋರಲಿ ಎಂದು ಕಿಡಿಕಾರಿದರು.

ಬಿಜೆಪಿ ಮುಖಂಡರಿಂದಲೂ ಕಿಡಿ: ರಮೇಶ್‌ ಬಂಡಿಸಿದ್ದೇಗೌಡ ಹೇಳಿಕೆ ಕುರಿತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಮಾಜಿ ಸಿಎಂ ಬೊಮ್ಮಾಯಿ, ಸಂಸದ ಬಿ.ವೈ.ರಾಘವೇಂದ್ರ ಕೂಡ ಕಿಡಿಕಾರಿದ್ದಾರೆ. ರಾಜಕೀಯದಲ್ಲಿ ಮಾನವೀಯತೆ ಮೀರಿ ವರ್ತಿಸುವುದು ಸರಿಯಲ್ಲ. ನಮ್ಮ ವಿರೋಧಿಗೇ ತೊಂದರೆಯಾದರೂ ಸಹಾನುಭೂತಿ ಇರಬೇಕು. ನಾಳೆ ಕಾಂಗ್ರೆಸ್ ನವರಿಗೂ ಏನಾದರೂ ತೊಂದರೆ ಆಗಬಹುದು. ಯಾರಾದರೂ ಚೆನ್ನೈ ಆಸ್ಪತ್ರೆಯಲ್ಲಿ ಸುಳ್ಳು ಆಪರೇಷನ್ ಮಾಡಿಸಲು ಸಾಧ್ಯನಾ? ಕ್ಷುಲ್ಲಕ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಶ್ರೀರಂಗಪಟ್ಟಣದ ಶಾಸಕರೇನು ಡಾಕ್ಟರ್ ಅಲ್ಲ, ರಾಜಕಾರಣದಲ್ಲಿ ರಾಜಕೀಯ ನೆಲೆಗಟ್ಟಿನಲ್ಲಿ ಹೋರಾಟ ಮಾಡಬೇಕೇ ಹೊರತು ವೈಯಕ್ತಿಕ ನೆಲೆಗಟ್ಟಿನಲ್ಲಿ ಅಲ್ಲ ಎಂದು ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರೆ, ಕುಮಾರಸ್ವಾಮಿ ಕುರಿತ ವೈಯಕ್ತಿಕ ಟೀಕೆ ಸರಿಯಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕಾಂಗ ಸಭೆಗೆ ನಾವು ಇಂಥವರನ್ನು ಆಯ್ಕೆ ಮಾಡಿ ಕಳುಹಿಸುತ್ತಿದ್ದೇವೆ. ಚುನಾವಣಾ ಪ್ರಚಾರಕ್ಕೋಸ್ಕರ ಮನುಷ್ಯತ್ವ ಬಿಟ್ಟು ಮಾತನಾಡುತ್ತಿದ್ದೇವೆ. ಕುಮಾರಣ್ಣ ಕುರಿತ ಹೇಳಿಕೆ ಅತ್ಯಂತ ಬೇಸರ ತರಿಸಿದೆ. 

 ಸಾ.ರಾ.ಮಹೇಶ್, ಮಾಜಿ ಸಚಿವ