ಯಡಿಯೂರಪ್ಪ ಸಿಎಂ ಆಗೋಕೆ ರಮೇಶ ಜಾರಕಿಹೊಳಿ ಕಾರಣ: ಯತ್ನಾಳ ಹೇಳಿಕೆ

| Published : Nov 22 2025, 01:30 AM IST

ಸಾರಾಂಶ

ರಮೇಶ ಜಾರಕಿಹೊಳಿ ಈ ಹಿಂದೆ 17 ಶಾಸಕರನ್ನು ಕರೆ ತರದೇ ಇದ್ದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ ಎಂದು ವಿಜಯಪುರದ ಬಿಜೆಪಿ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಬೆಂಗಳೂರಿನಲ್ಲಿ ಕುಮಾರ ಬಂಗಾರಪ್ಪ ನಿವಾಸದಲ್ಲಿ ಗುರುವಾರ ನಡೆದ ರೆಬೆಲ್ಸ್ ಬಿಜೆಪಿ ನಾಯಕರ ಸಭೆ ವಿಚಾರದ ಕುರಿತಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

- ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಾತ್ರ ಬಹುದೊಡ್ಡದು: ಆರೋಪ - ದಾವಣಗೆರೆಗೆ ಬಂದು ಹೇಳಿದವರಿಗೆ ಟಿಕೆಟ್ ಕೊಡಿಸ್ತಾನಂತೆ ಪ್ರೀತಂ ಗೌಡ: ಲೇವಡಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಮೇಶ ಜಾರಕಿಹೊಳಿ ಈ ಹಿಂದೆ 17 ಶಾಸಕರನ್ನು ಕರೆ ತರದೇ ಇದ್ದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ ಎಂದು ವಿಜಯಪುರದ ಬಿಜೆಪಿ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಬೆಂಗಳೂರಿನಲ್ಲಿ ಕುಮಾರ ಬಂಗಾರಪ್ಪ ನಿವಾಸದಲ್ಲಿ ಗುರುವಾರ ನಡೆದ ರೆಬೆಲ್ಸ್ ಬಿಜೆಪಿ ನಾಯಕರ ಸಭೆ ವಿಚಾರದ ಕುರಿತಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಮುಖಂಡರ ಜೊತೆಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕುಮಾರ ಬಂಗಾರಪ್ಪ ನಿವಾಸದಲ್ಲಿ ಸೇರಿದವರೆಲ್ಲಾ ಪಕ್ಷ ಕಟ್ಟಿದ್ದವರು. ಅಂತಹವರಿಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ ಎಂದರು.

ಇದೇ ರಮೇಶ ಜಾರಕಿಹೊಳಿಗೆ ಯಾವ ರೀತಿ ಅವಮಾನ ಮಾಡಿದರು ಎಂಬುದನ್ನು ಇಡೀ ಜಗತ್ತು ನೋಡಿದೆ. ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ವಿಜಯೇಂದ್ರದ್ದು ಬಹುದೊಡ್ಡ ಪಾತ್ರ ಇದ್ದಿದ್ದು ಸುದ್ದಿ ಇದೆ. ಇಂತಹ ಹಲ್ಕಾ ಕೆಲಸ ಮಾಡುವವರು ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದು ದುರಂತ, ದುರ್ದೈವ ಎಂದು ಕಿಡಿಕಾರಿದರು.

ಡಿ.ಕೆ.ಶಿವಕುಮಾರ ಸೂತ್ರಧಾರಿ ವಿಜಯೇಂದ್ರ ಇದ್ದಾರೆ. ಡಿಕೆಶಿ ಜೊತೆಗೆ 50-60 ಶಾಸಕರು ಬಿಜೆಪಿಗೆ ಬರುತ್ತಾರೆಂದು ಹೇಳಿದ್ದಾರೆ. ಆ ಭ್ರಷ್ಟರ ಜೊತೆಗೆ ಸರ್ಕಾರ ಮಾಡುತ್ತೇವೆ. ನನಗೆ ಇನ್ನೊಂದು ಅವಧಿ ಮುಂದುವರಿಸಿ ಎಂದಿದ್ದಾರೆ. ಮೊನ್ನೆ ಯಡಿಯೂರಪ್ಪ ದೆಹಲಿಗೆ ಹೋಗಿ ಬಂದಿದ್ದಾನೆ. ಹೇಗಾದರೂ ಮಾಡಿ ನನ್ನ ಮಗನ್ನ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿ. ನನಗೆ ಬಿಪಿ, ಶುಗರ್ ಹೆಚ್ಚಾಗಿದೆ ಅಂತೆಲ್ಲಾ ನಾಟಕ ಮಾಡಿ ಬಂದಿದ್ದಾರೆ ಎಂದು ಟೀಕಿಸಿದರು.

ಜೆಡಿಎಸ್ ಜೊತೆಗೆ ಮೈತ್ರಿ ಮುಂದುವರಿದರೆ ಹಾಸನದಲ್ಲಿ ಪ್ರೀತಂ ಗೌಡಗೆ ಟಿಕೆಟ್ ಸಿಗುವುದಿಲ್ಲ. ಹಾಗಾದರೆ ಬಿಜೆಪಿಯಲ್ಲಿ ಪ್ರೀತಂ ಗೌಡ ಉಳಿಯುತ್ತಾರಾ? ಈಗಾಗಲೇ ಕಾಂಗ್ರೆಸ್ ಜೊತೆಗೆ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿದ್ದಾರೆ. ಇಲ್ಲಿ ದಾವಣಗೆರೆಗೆ ಬಂದು ನೀವು ಹೇಳಿದವರಿಗೆ ಟಿಕೆಟ್ ಕೊಡಿಸುವೆ ಅಂತಾರಂತೆ. ಇಂತಹವರು ಬಿಜೆಪಿ ಪ್ರಧಾನ ಕಾರ್ಯದರ್ಶಿ. ಇಂತಹವರನ್ನು ತಗೊಂಡು ಬಿಜೆಪಿ ಎಲ್ಲಿ ಉದ್ಧಾರ ಆಗ್ತೈತ್ರಿ ಎಂದು ಯತ್ನಾಳ್‌ ಪ್ರಶ್ನಿಸಿದರು.

ವಿಜಯೇಂದ್ರ ಬದಲಾವಣೆ ಆಗದಿದ್ದರೆ ನಾವೇನೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ನಾವು ಏನೆಂದು ಶಕ್ತಿ ತೋರಿಸುತ್ತೇವಷ್ಟೇ. ಜೆಸಿಬಿ ಪಕ್ಷವನ್ನು ಕಟುತ್ತೇವೆ ಅಂತಾ ಹೇಳಿದ್ದೇವಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾರು ನಿಷ್ಟಾವಂತರಿದ್ದಾರೆ ಅಂತಹವರನ್ನು ಕರೆದುಕೊಳ್ಳುತ್ತೇವೆ. ಬಿಜೆಪಿಯಲ್ಲಿ ಒಳ್ಳೊಳ್ಳೆಯ ಕ್ಯಾಂಡಿಡೇಟ್‌ಗಳಿಗೆ ಅನ್ಯಾಯವಾದರೆ, ಅಂತಹವರನ್ನೂ ಕರೆದುಕೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಯತ್ನಾಳ್‌ ಪ್ರತಿಕ್ರಿಯಿಸಿದರು.

ಯತ್ನಾಳ್ ಜೊತೆಗೆ ನಾವು ಬರೊಲ್ಲವೆಂದು ಕುಮಾರ ಬಂಗಾರಪ್ಪ, ರಮೇಶ ಜಾರಕಿಹೊಳಿ, ಜಿ.ಎಂ. ಸಿದ್ದೇಶ್ವರ ಹೇಳಿಕೆ ಕೊಟ್ಟಿದ್ದಾರೆ. ಅಂತಹವರಿಗೆ ನಾನು ಒತ್ತಾಯ ಮಾಡುವುದೂ ಇಲ್ಲ. ನನ್ನ ಸಂಘಟನೆಗೆ ಹಿಂದೂಪರ ಸಂಘಟನೆ ಅಲೆ ಎದ್ದಿದೆ. ಯಾರೂ ನಿರೀಕ್ಷೆ ಮಾಡದ ಫಲಿತಾಂಶ‍ ಈ ರಾಜ್ಯದಲ್ಲಿ ಬರುತ್ತದೆ. ನಾವು ಪ್ರಧಾನಿ ನರೇಂದ್ರ ಮೋದಿ ಪರವಾಗಿದ್ದೇವೆ. ನಿಷ್ಟಾವಂತ ರಾಷ್ಟ್ರೀಯ ನಾಯಕರ ಪರವಾಗಿದ್ದೇವೆ. ಇದೆಲ್ಲದರ ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಪರವಾಗಿದ್ದೇವೆ ಎಂದು ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರು.

- - -

(ಬಾಕ್ಸ್‌)

* ವಿಜಯೇಂದ್ರ 2 ವರ್ಷಗಳ ಸಾಧನೆ ಹೀನಾಯ ಸೋಲು: ಯತ್ನಾಳ

- ನಕಲಿ ಸಹಿ ವಿಚಾರ ಹೊರತರಬೇಡಿ, ನನ್ನ ಅಪ್ಪಂಗೆ ಪೋಕ್ಸೋ ಕೇಸಲ್ಲಿ ಬಚಾವು ಮಾಡ್ರಿ ಅಂತಾನೆ!

ಕನ್ನಡಪ್ರಭ ವಾರ್ತೆ ದಾವಣಗೆರೆ ವಿಜಯೇಂದ್ರ ಎರಡು ವರ್ಷಗಳ ಸಾಧನೆ ಎಂದರೆ ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದು. ಪಕ್ಷ ಸಂಘಟನೆ ಎಲ್ಲಿಯೂ ಇಲ್ಲ. ತನ್ನ ಚೇಲಾಗಳನ್ನು ಜಿಲ್ಲಾಧ್ಯಕ್ಷರಾಗಿ ಮಾಡಿದ್ದಾರೆ ಎಂದು ವಿಜಯಪುರದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದರು.

ನಗರದ ಜಿಎಂಐಟಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹವರೇ ಲಾಲ್‌ ಬಾಗ್‌ನಿಂದ ತಂದ ಹೂವು, ಹಣ್ಣು, ಶಾಲು ಹಿಡಿದು ನಾಯಕರ ಮನೆಗಳಿಗೆ ಭೇಟಿ ನೀಡುತ್ತಾರೆ. ಬೊಮ್ಮಾಯಿ, ಸುನೀಲಕುಮಾರ ಸೇರಿದಂತೆ ಇತರೇ ನಾಯಕರ ಮನೆಗೆ ಭೇಟಿ ನೀಡುತ್ತಾನೆ ಎಂದರು.

ಹಿರಿಯ ನಾಯಕರ ಭೇಟಿಯಾಗಿ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ಅಂತಾ ಹಾಕ್ತಾರೆ. ರಾಜ್ಯ ಬಿಜೆಪಿಯಲ್ಲಿ ಸಂಘಟನೆಯೇ ಇಲ್ಲ. ಕಾರ್ಯಕರ್ತರನ್ನು ರಕ್ಷಣೆ ಮಾಡುವವರೂ ಇಲ್ಲ. ಹಿಂದೂಗಳ ಮೇಲಾಗುವ ದೌರ್ಜನ್ಯ ಕೇಳುವವರೂ ಇಲ್ಲ. ಎಲ್ಲರೂ ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಜೊತೆಗೆ ಅಡ್ಜಸ್ಟ್‌ಮೆಂಟ್ ಮಾಡಿಕೊಡು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೋಟ್ಯಂತರ ರು. ಕೆಲಸ ಮಾಡಿಕೊಂಡಿದ್ದಾರೆ ಎಂದು ಯತ್ನಾಳ್‌ ಆರೋಪಿಸಿದರು.

ನಾನು ನಮ್ಮಪ್ಪನ ನಕಲಿ ಸಹಿ ಮಾಡಿದ್ದನ್ನು ಹೊರತರಬೇಡಿ, ನಮ್ಮಪ್ಪನನ್ನು ಪೋಕ್ಸೋ ಕೇಸ್‌ನಿಂದ ಬಚಾವು ಮಾಡ್ರಿ ಅಂತಿದ್ದಾನೆ. ಇಷ್ಟು ಬಿಟ್ಟರೆ ಬಿಜೆಪಿಯಲ್ಲಿ ಏನೂ ಉಳಿದಿಲ್ಲ. ಬಿಹಾರದಲ್ಲಿ ಗೆದ್ದ ಮೇಲೆ ಇಲ್ಲಿ ಇಂತಹವರು ಅಧಿಕಾರಕ್ಕೆ ಬಂದೇ ಬಿಡುತ್ತೇವೆ ಎಂದುಕೊಂಡಿದ್ದಾರೆ. ಬಿಹಾರದಲ್ಲಿ ಸಿಎಂ ನಿತೀಶಕುಮಾರ ಕುಟುಂಬ ರಾಜಕಾರಣ ಮಾಡಲಿಲ್ಲ. ಅದಕ್ಕೆ ಅಲ್ಲಿ ನಿತಿಶ್‌ ಕುಮಾರ್‌ಗೆ ಜನರ ವಿಶ್ವಾಸ ಸಿಕ್ಕಿತು ಎಂದು ತಿಳಿಸಿದರು.

ಯಡಿಯೂರಪ್ಪ ಬೆಳೆಯಲು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ತಂದೆ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಕಾರಣ. ವಿಜಯೇಂದ್ರ, ಯಡಿಯೂರಪ್ಪ ಇಬ್ಬರೂ ಶಾಮನೂರು ಶಿವಶಂಕರಪ್ಪ ಜೊತೆಗೆ ಒಪ್ಪಂದ ಮಾಡಿಕೊಂಡರು. ಶಿವಮೊಗ್ಗದಲ್ಲಿ ಶಾಮನೂರು ಹೋಗಿ, ಯಡಿಯೂರಪ್ಪ ಪರವಾಗಿ ಹೇಳಿದರು. ಇಲ್ಲಿ ಯಡಿಯೂರಪ್ಪ ಬಂದು ಸಿದ್ದೇಶ್ವರಗೆ ಸೋಲಿಸಿ, ಶಾಮನೂರು ಸೊಸೆಗೆ ಗೆಲ್ಲಿಸಿದ್ರು ಎಂದು ಯತ್ನಾಳ್‌ ಆಕ್ರೋಶ ವ್ಯಕ್ತಪಡಿಸಿದರು.

- - -

-(ಫೋಟೋ ಬರಲಿವೆ)