ಕನ್ನಡಪ್ರಭ ವಾರ್ತೆ ಗೋಕಾಕ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗೋಕಾಕ ಶೈಕ್ಷಣಿಕ ವಲಯದ ವಿನೂತನ ಕಾರ್ಯಕ್ರಮದಲ್ಲಿ ಒಂದಾದ ಪತ್ರದಿಂದ ಹತ್ರ ಕಾರ್ಯಕ್ರಮಕ್ಕೆ ಶಾಸಕ ರಮೇಶ ಜಾರಕಿಹೊಳಿ ಬುಧವಾರ ನಗರದ ತಮ್ಮ ಗೃಹ ಕಚೇರಿಯಲ್ಲಿ ಪತ್ರಗಳನ್ನು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗೋಕಾಕ ಶೈಕ್ಷಣಿಕ ವಲಯದ ವಿನೂತನ ಕಾರ್ಯಕ್ರಮದಲ್ಲಿ ಒಂದಾದ ಪತ್ರದಿಂದ ಹತ್ರ ಕಾರ್ಯಕ್ರಮಕ್ಕೆ ಶಾಸಕ ರಮೇಶ ಜಾರಕಿಹೊಳಿ ಬುಧವಾರ ನಗರದ ತಮ್ಮ ಗೃಹ ಕಚೇರಿಯಲ್ಲಿ ಪತ್ರಗಳನ್ನು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ಕಳೇದ ಒಂದೆರಡು ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಂತ ಹೀನಾಯ ಫಲಿತಾಂಶ ಬಂದರೂ ಸಹ ಎದೆಗುಂದದೆ ಮತ್ತೆ ಪುಟಿದೇಳುವ ದಿಸೆಯಲ್ಲಿ ತಮ್ಮ ವಿಶಿಷ್ಟ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅವಿರತ ಶ್ರಮ ಪಡುತ್ತಿದ್ದಾರೆ. ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರ ಈ ಅವಿರತ ಕಾರ್ಯಕ್ಕೆ ವಲಯದ ಎಲ್ಲಾ ಶಿಕ್ಷಕರು ಹೆಗಲಿಗೆ ಹೆಗಲುಕೊಟ್ಟು ಕಾರ್ಯಮಾಡಿ ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮತ್ತೆ ರಾಜ್ಯದ ಗಮನ ಸೆಳೆಯುವ ತವಕದಲ್ಲಿರುವುದು ಮಕ್ಕಳಲ್ಲಿಯ ಉತ್ಸಾಹ ಹೆಚ್ಚಿಸಿದೆ.

ಶಾಸಕರ ಪತ್ರದಲ್ಲಿ ಏನಿದೆ:

ಗೋಕಾಕ ಶೈಕ್ಷಣಿಕ ವಲಯದ ಆತ್ಮೀಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೇ, ವಿದ್ಯಾರ್ಥಿ ಜೀವನದ ಅತ್ಯಂತ ಮಹತ್ವದ ಘಟ್ಟ. ಹತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ನಮ್ಮ ಗೋಕಾಕ ಶೈಕ್ಷಣಿಕ ವಲಯದ ನಿಮ್ಮೆಲ್ಲರಿಗೂ ಹಾರ್ಧಿಕ ಶುಭಾಶಯಗಳೊಂದಿಗೆ ಮುಂದಿನ ಶೈಕ್ಷಣಿಕ ಯಶಸ್ಸಿಗಾಗಿ ಶುಭಾಶೀರ್ವಾದಗಳು.

ಕಳೆದ ಹತ್ತು ವರ್ಷಗಳಿಂದ ಶಾಲಾ ಶಿಕ್ಷಣ ಪಡೆಯುತ್ತಿರುವ ನೀವು ಈ ವರ್ಷ ಎಸ್.ಎಸ್.ಎಲ್.ಸಿ ತರಗತಿಯಲ್ಲಿ ಓದುತ್ತಿರುವಿರಿ. ಅಂದ ಹಾಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಈ ಹಿಂದಿನ ಪರೀಕ್ಷೆಗಳಂತೆಯೇ ಒಂದು ಪರೀಕ್ಷೆ, ಅಂದರೆ ಭಯ ಅಲ್ಲ, ಅದು ಒಂದು ಸಂಭ್ರಮ. ಇದು ನಿಮ್ಮ ಮುಂದಿನ ಭವಿಷ್ಯ ದಿಕ್ಕೂಚಿಯಾಗುತ್ತದೆ. ಕಳೆದ ಅನೇಕ ವರ್ಷರ್ಗಳಿಂದ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ನಮ್ಮ ವಲಯದ ನುರಿತ ಉತ್ಸಾಹಿ ಗುರುಬಳಗ ಅತ್ಯಂತ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಅವರು ನಿಮಗಾಗಿ ವರ್ಷವಿಡಿ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅವುಗಳನ್ನು ಇತರೆ ಜಿಲ್ಲೆ ಮತ್ತು ತಾಲೂಕಿನವರು ಕೂಡ ಅನುಸರಿಸುತ್ತಿದ್ದಾರೆ. ನೀವು ಅವುಗಳನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಸಾಧನೆ ಮಾಡಬೇಕು. ಅಪ್ಪ-ಅಮ್ಮನ ಕನಸನ್ನು ನನಸು ಮಾಡಬೇಕು.ಈಗಾಗಲೇ ನಿಮ್ಮ ವಾರ್ಷಿಕ ಪರೀಕ್ಷೆಯ ವೇಳಾಪತ್ರಿಕೆ ಪ್ರಕಟವಾಗಿದೆ. ಈಗ ಇರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಚೆನ್ನಾಗಿ ಅಭ್ಯಾಸ ಮಾಡಿರಿ, ಒಳ್ಳೆಯ ಅಂಕಗಳೊಂದಿಗೆ ಉತ್ತೀರ್ಣರಾಗಿ ನಿಮ್ಮ ಪಾಲಕರಿಗೆ, ಗುರುಗಳಿಗೆ ಮತ್ತು ತಾಲೂಕಿಗೆ ಕೀರ್ತಿ ತರುವಂತಹ ಸಾಧನೆ ಮಾಡುತ್ತೀರೆಂಬ ವಿಶ್ವಾಸ ನನಗಿದೆ.ದಿನ ನಿತ್ಯದ ಅಭ್ಯಾಸದ ಜೊತೆಗೆ ಆರೋಗ್ಯದ ಕಡೆಗೂ ಗಮನವಿರಲಿ. ಉತ್ತಮ ಸಾಧನೆಗಾಗಿ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿರಿ. ನಿಮ್ಮ ಭವಿಷ್ಯ ಉಜ್ವಲವಾಗಲಿ. ಮನೆಯಲ್ಲಿ ಅಪ್ಪ, ಅಮ್ಮ, ಹಾಗೂ ಹಿರಿಯರಿಗೆ ಹಾರ್ದಿಕ ಶುಭಾಶಯಗಳೊಂದಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ. ನಿಮಗೆ ಶುಭವಾಗಲಿ. - ರಮೇಶ.ಲ.ಜಾರಕಿಹೊಳಿ.ಶಾಸಕರು, ಗೋಕಾಕ