ಸಾರಾಂಶ
ರಾಜ್ಯ ಅಪೆಕ್ಸ್ ಸಹಕಾರಿ ಬ್ಯಾಂಕ್‌ಗೆ 233 ಕೋಟಿ ರು. ವಂಚನೆ ಮಾಡಿರುವ ಪ್ರಕರಣದ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅವರ ಮಾಲಿಕತ್ವದ ಸಕ್ಕರೆ ಕಂಪನಿಯ ಅಧಿಕಾರಿಗಳಿಗೆ ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಪೊಲೀಸರಿಂದ ಬಂಧನ ಭೀತಿ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಅಪೆಕ್ಸ್ ಸಹಕಾರಿ ಬ್ಯಾಂಕ್‌ಗೆ 233 ಕೋಟಿ ರು. ವಂಚನೆ ಮಾಡಿರುವ ಪ್ರಕರಣದ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅವರ ಮಾಲಿಕತ್ವದ ಸಕ್ಕರೆ ಕಂಪನಿಯ ಅಧಿಕಾರಿಗಳಿಗೆ ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಪೊಲೀಸರಿಂದ ಬಂಧನ ಭೀತಿ ಎದುರಾಗಿದೆ.
ಮಾಜಿ ಸಚಿವರ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣದ ಎಫ್ಐಆರ್‌ಗೆ ತಕ್ಷಣವೇ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೆ ತನಿಖೆ ಚುರುಕುಗೊಳಿಸಲು ಸಿಐಡಿ ಮುಂದಾಗಿದೆ.
ಮೊದಲ ಹಂತದಲ್ಲಿ ಆರೋಪಿಗಳ ವಿಚಾರಣೆಗೆ ಸಿಐಡಿ ನೋಟಿಸ್ ನೀಡಲಿದ್ದು, ಇದಕ್ಕೆ ಆರೋಪಿಗಳ ಪ್ರತಿಕ್ರಿಯೆ ಬಳಿಕ ಕಠಿಣ ಕ್ರಮಕ್ಕೆ ನಿರ್ಧರಿಸಿದೆ ಎನ್ನಲಾಗಿದೆ. ಈ ವಂಚನೆ ಸಂಬಂಧ ಬೆಂಗಳೂರಿನ ವಿವಿ ಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿತ್ತು.
ಆದರೆ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ರಮೇಶ್ ಜಾರಕಿಹೊಳಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ತಕ್ಷಣವೇ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿತು.
ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಪೊಲೀಸರಿಗೆ ನ್ಯಾಯಾಲಯವು ನೋಟಿಸ್ ಜಾರಿಗೊಳಿಸಿದೆ. ಕಾನೂನು ಹೋರಾಟದ ಹಿನ್ನಡೆ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಏನಿದು ಪ್ರಕರಣ?
2013-17 ಅವಧಿಯಲ್ಲಿ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿಮಿಟೆಡ್ ಕಂಪನಿ ಸ್ಥಾಪನೆ ಸಲುವಾಗಿ 233 ಕೋಟಿ ರು ಹಣವನ್ನು ಆಪೆಕ್ಸ್ ಬ್ಯಾಂಕ್‌ನಲ್ಲಿ ಕಂಪನಿ ಪಡೆದಿತ್ತು.
ಆದರೆ ಸಕಾಲಕ್ಕೆ ಸಾಲ ಪಾವತಿಸದೆ ಅಸಲು ಮತ್ತು ಬಡ್ಡಿ ಸೇರಿ ಸುಮಾರು 439 ಕೋಟಿ ರು ನಷ್ಟವಾಗಿದೆ ಎಂಬ ಆರೋಪ ಬಂದಿತ್ತು.
ಈ ಸಂಬಂಧ ವಿ.ವಿ.ಪುರ ಪೊಲೀಸ್ ಠಾಣೆಯಲ್ಲಿ ಅಪೆಕ್ಸ್ ಬ್ಯಾಂಕ್ ಕೇಂದ್ರ ಕಚೇರಿಯ ಪ್ರಧಾನ ವ್ಯವಸ್ಥಾಪಕ ರಾಜಣ್ಣರವರ ದೂರು ಆಧರಿಸಿ ಶುಗರ್ಸ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ರಮೇಶ್ ಜಾರಕಿಹೊಳಿ, ನಿರ್ದೇಶಕರಾದ ವಸಂತ್ ವಿ.ಪಾಟೀಲ್ ಮತ್ತು ಶಂಕರ್ ಎ. ಪಾವಡೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಬಹುಕೋಟಿ ವಂಚನೆ ಪ್ರಕರಣ ಕಾರಣಕ್ಕೆ ಸಿಐಡಿ ತನಿಖೆಗೆ ಸರ್ಕಾರ ಆದೇಶಿಸಿತ್ತು.
ಎಸ್‌ಐ ಹಗರಣದ ತನಿಖಾಧಿಕಾರಿಗೆ ಕೇಸ್ : ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸಿದ್ದ ಸಿಐಡಿ ಆರ್ಥಿಕ ಗುಪ್ತದಳದ ಎಸ್ಪಿ ರಾಘವೇಂದ್ರ ಹೆಗಡೆ ಅವರಿಗೆ ರಮೇಶ್ ಜಾರಕಿಹೊಳಿ ವಿರುದ್ಧ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿ ಡಿಜಿಪಿ ವಹಿಸಿದ್ದಾರೆ.
ಇನ್ನು ಪಿಎಸ್‌ಐ ಕೇಸ್‌ನಲ್ಲಿ ಯಾರ ಮುಲಾಜಿಗೂ ಬಗ್ಗದೆ ತನಿಖೆ ನಡೆಸಿ ಎಸ್ಪಿ ರಾಘವೇಂದ್ರ ಹೆಗಡೆ ಸದ್ದು ಮಾಡಿದ್ದರು. ಈಗ ಜಾರಕಿಹೊಳಿ ಅವರಿಗೂ ಹೆಗಡೆ ನೇಮಕ ತಲೆಬಿಸಿ ತಂದಿದೆ ಎನ್ನಲಾಗಿದೆ.