ಸಾರಾಂಶ
ಬಾಗಲಕೋಟೆ: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಸಂಸದ, ಕೇಂದ್ರದ ಮಾಜಿ ಸಚಿವ ರಮೇಶ ಜಿಗಜಿಣಗಿ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅವರೀಗ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಜಯಪುರದಿಂದ ಬೆಳಗಾವಿ ಮೂಲಕ ದೆಹಲಿಗೆ ಅವರು ತೆರಳುತ್ತಿದ್ದರು. ದಾರಿ ಮಧ್ಯೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಆಸ್ಪತ್ರೆಗೆ ಭೇಟಿ ನೀಡಿ, ಸಂಸದರ ಯೋಗಕ್ಷೇಮ ವಿಚಾರಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಅವರಿಗೆ ಒಂದು ವಾರದಿಂದ ಉಸಿರಾಟದ (ನ್ಯೂಮೋನಿಯಾ) ಸಮಸ್ಯೆ ಕಾಣಿಸಿಕೊಂಡಿದ್ದು, ದೆಹಲಿಗೆ ತೆರಳಬೇಡಿ ಎಂದು ಕುಟುಂಬ ಸದಸ್ಯರು ಸಲಹೆ ನೀಡಿದ್ದರು ಎಂದರು. ವೈದ್ಯ ಡಾ.ಸುಭಾಸ ಪಾಟೀಲ ಮಾತನಾಡಿ, ಅವರಿಗೆ ಹೃದಯಾಘಾತವಾಗಿಲ್ಲ. ಉಸಿರಾಟದಲ್ಲಿನ ಏರುಪೇರಿನಿಂದ ಅಸ್ಪಸ್ಥರಾಗಿದ್ದಾರೆ. ಹೃದಯಬಡಿತದಲ್ಲಿ ಏರುಪೇರಾಗಿದ್ದು, ಪುಪ್ಪುಸದಲ್ಲಿ ನೀರಿನ ಅಂಶ ಇದ್ದಿದ್ದರಿಂದ ಉಸಿರಾಟದ ತೊಂದರೆಯಾಗಿದೆ. ಅವರಿಗೆ ಮೊದಲಿನಿಂದಲೂ ಉಸಿರಾಟದ ಸಮಸ್ಯೆ ಇದೆ. ಸದ್ಯ ಅವರಿಗೆ ತೊಂದರೆ ಇಲ್ಲ ಎಂದು ಹೇಳಿದರು.