ಬೇಡ ನಾಯಕ ಸಮಾಜಕ್ಕೆ ನಿಂದಿಸಿದ ರಮೇಶ ಕತ್ತಿ ಬಂಧಿಸಿ

| Published : Oct 21 2025, 01:00 AM IST

ಸಾರಾಂಶ

ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣಾ ಮತದಾನ ವೇಳೆ ಬೇಡ ನಾಯಕ ಸಮಾಜದ ಬಗ್ಗೆ ಅವಹೇಳನ, ಅವಾಚ್ಯವಾಗಿ ನಿಂದಿಸಿ, ಜಾತಿನಿಂದನೆ ಮಾಡಿರುವ ರಮೇಶ ಕತ್ತಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ ನೇತೃತ್ವದಲ್ಲಿ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಲಾಗಿದೆ.

- ಬಿ.ವೀರಣ್ಣ, ಪ್ರೊ. ಎ.ಬಿ.ರಾಮಚಂದ್ರಪ್ಪ ನೇತೃತ್ವದಲ್ಲಿ ಆಗ್ರಹ । ಜಾತಿನಿಂದನೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣಾ ಮತದಾನ ವೇಳೆ ಬೇಡ ನಾಯಕ ಸಮಾಜದ ಬಗ್ಗೆ ಅವಹೇಳನ, ಅವಾಚ್ಯವಾಗಿ ನಿಂದಿಸಿ, ಜಾತಿನಿಂದನೆ ಮಾಡಿರುವ ರಮೇಶ ಕತ್ತಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ ನೇತೃತ್ವದಲ್ಲಿ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಲಾಗಿದೆ.

ನಗರದ ಬಡಾವಣೆ ಪೊಲೀಸ್ ಠಾಣೆ ಆವರಣದಲ್ಲಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ, ಮಾನವ ಬಂಧುತ್ವ ವೇದಿಕೆಯ ಪ್ರೊ.ಎ.ಬಿ.ರಾಮಚಂದ್ರಪ್ಪ, ಹಿರಿಯ ವಕೀಲ ನೀಲಾನಹಳ್ಳಿ ಎನ್.ಎಂ.ಆಂಜನೇಯ, ಲಿಂಗರಾಜ ಫಣಿಯಾಪುರ, ಮಲ್ಲಾಪುರ ದೇವರಾಜ, ಇತರರ ನೇತೃತ್ವದಲ್ಲಿ ರಮೇಶ ಕತ್ತಿ ವಿರುದ್ಧ ಘೋಷಣೆ ಕೂಗಿ, ಕಾನೂನು ಕ್ರಮಕ್ಕೆ ಒತ್ತಾಯಿಸಿ ಡಿವೈಎಸ್ಪಿ ಗಾಯತ್ರಿ ರೊಡ್ಡ ಅವರಿಗೆ ದೂರು ನೀಡಲಾಯಿತು.

ಇದೇ ವೇಳೆ ಬಿ.ವೀರಣ್ಣ ಮಾತನಾಡಿ, ಬೆಳಗಾವಿಯಲ್ಲಿ ಭಾನುವಾರ ಮಧ್ಯಾಹ್ನ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ಬೆಲ್ಲದ ಬಾಗೇವಾಡಿಯ ರಮೇಶ ಕತ್ತಿ ಪರಿಶಿಷ್ಟ ಪಂಗಡವಾದ ಬೇಡ, ನಾಯಕ ಸಮಾಜದ ಬಗ್ಗೆ ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ. ಸಮಾಜಕ್ಕೆ ಅವಮಾನಿಸಿರುವುದು ಅಕ್ಷಮ್ಯ ಅಪರಾಧ. ರಾಜ್ಯಾದ್ಯಂತ 75 ಲಕ್ಷ ವಾಲ್ಮೀಕಿ ಸಮುದಾಯ ಬಾಂಧವರ ಮನಸ್ಸಿಗೆ ರಮೇಶ ಕತ್ತಿ ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ವಾಲ್ಮೀಕಿ ನಾಯಕ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದ್ದು, ತೀವ್ರ ಆಘಾತವಾಗಿದೆ. ರಮೇಶ ಕತ್ತಿ ಆಡಿರುವ ಮಾತುಗಳ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು ಗಮನಿಸಿದ್ದೇವೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಡುವ ಸಂಭವವಿದೆ. ಬೇರೆ ಬೇರೆ ಸಮುದಾಯಗಳ ಮಧ್ಯೆ ತೀವ್ರ ಸಂಘರ್ಷವೂ ಉಂಟಾಗುವ ಸಂಭವವಿದೆ. ಉದ್ದೇಶಪೂರ್ವಕವಾಗಿ ಬೇಡ ವಾಲ್ಮೀಕಿ ನಾಯಕ ಸಮುದಾಯವನ್ನು ಅವಮಾನಿಸುವ ಕೆಲಸ ರಮೇಶ ಕತ್ತಿ ಮಾಡಿದ್ದಾರೆ ಎಂದು ದೂರಿದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಆಶಯಕ್ಕೆ ಧಕ್ಕೆ ತರುವ ಕೆಲಸವನ್ನು ಬೆಳಗಾವಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ ಕತ್ತಿ ಮಾಡಿದ್ದಾರೆ. ನಾಯಕ ಸಮಾಜವನ್ನು ಅವಮಾನಿಸಿ, ಜಾತಿ ನಿಂದನೆ ಮಾಡಿರುವ ಇವರ ವಿರುದ್ಧ ಅಟ್ರಾಸಿಟಿ ಕೇಸ್‌ ದಾಖಲಿಸಿ, ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎಂದರು.

ರಮೇಶ ಕತ್ತಿ ವಿರುದ್ಧ ರಾಜ್ಯವ್ಯಾಪಿ ಜಾತಿ ನಿಂದನೆ ಕೇಸ್‌ ದಾಖಲಿಸಿದ್ದು, ದಾವಣಗೆರೆಯಲ್ಲೂ ಕೇಸ್ ಮಾಡಿದ್ದೇವೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ದಲಿತರ ಮೇಲೆ ದೌರ್ಜನ್ಯಕ್ಕೆ ಸರ್ಕಾರವೇ ಅವಕಾಶ ನೀಡಿದಂತಾಗುತ್ತದೆ. ಜಾತಿ ತಾರತಮ್ಯ, ಊಳಿಗಮಾನ್ಯ, ಜಮೀನ್ದಾರ ವ್ಯವಸ್ಥೆ ನಾಶವಾಗಿದೆ ಎಂದುಕೊಂಡಿದ್ದೆವು. ಆದರೆ, ಅವು ಇಂದಿಗೂ ಜೀವಂತವಾಗಿವೆ ಅನ್ನೋದಕ್ಕೆ ರಮೇಶ ಕತ್ತಿ ಹೇಳಿಕೆ ಸಾಕ್ಷಿಯಾಗಿದೆ. ಅವರ ನಡೆಯನ್ನು ರಾಜ್ಯದ ಎಲ್ಲ ಸಮುದಾಯಗಳು, ಪ್ರಗತಿ ಪರರು, ಚಿಂತಕರು, ಮುತ್ಸದ್ದಿ ನಾಯಕರು, ಸಾಹಿತಿಗಳು ಕಟುವಾಗಿ ಖಂಡಿಸಿದ್ದಾರೆ. ಕ್ಷಮಾಪಣೆ ವಿಚಾರವೇ ಬರುವುದಿಲ್ಲ. ಮಾಡಬಾರದ ತಪ್ಪನ್ನು ಮಾಡಿ, ಕ್ಷಮೆ ಕೇಳಿದರೆ ಮುಗಿಯುವುದಿಲ್ಲ. ಕಾನೂನಿನಡಿ ಅದಕ್ಕೆ ಏನು ಪರಿಹಾರವಿದೆಯೋ ಅದನ್ನು ಮಾಡಲಿ ಎಂದು ಪ್ರೊ.ಎ.ಬಿ.ರಾಮಚಂದ್ರಪ್ಪ ಒತ್ತಾಯಿಸಿದರು.

ಸಮಾಜದ ಮುಖಂಡರಾದ ಪ್ರವೀಣ ಹುಲ್ಲುಮನೆ, ಶ್ರೀನಿವಾಸ ಟಿ.ದಾಸಕರಿಯಪ್ಪ, ಫಣಿಯಾಪುರ ಲಿಂಗರಾಜ, ಬಸವರಾಜ ತೋಟವರ್‌, ಹನುಮಂತಪ್ಪ ಕರೂರು, ಸುರೇಶ, ರಾಘು ದೊಡ್ಮನಿ, ಶಿವು, ಪ್ರವೀಣ ಶಾಮನೂರು, ಶ್ಯಾಗಲಿ ಮಂಜುನಾಥ, ಮಲ್ಲಾಪುರ ದೇವರಾಜ, ಶಶಿಕುಮಾರ, ಶ್ರೀಕಂಠಪ್ಪ, ವರುಣ್ ಬೆಣ್ಣೆಹಳ್ಳಿ, ಪರಶುರಾಮ ಕೆಟಿಜೆ ನಗರ, ಆವರಗೆರೆ ಗೋಶಾಲೆ ಪರಶುರಾಮ, ಗೊಲ್ಲರಹಳ್ಳಿ ಮಂಜು, ಹದಡಿ ಪಾಲಾಕ್ಷಿ ಇತರರು ಇದ್ದರು. - - -

(ಕೋಟ್‌) ನಮ್ಮ ವಾಲ್ಮೀಕಿ ನಾಯಕ ಸಮಾಜವನ್ನು ಅವಮಾನಿಸಿದ್ದನ್ನು ಉಗ್ರವಾಗಿ ಖಂಡಿಸಿ, ಬೆಳಗಾವಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ ಕತ್ತಿ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುತ್ತೇವೆ. ಅಟ್ರಾಸಿಟಿ ಕೇಸ್ ಮಾಡಿದ್ದೇವೆ. ರಾಜ್ಯಾದ್ಯಂತ ಕೇಸ್ ಮಾಡುತ್ತಿದ್ದೇವೆ. ಇನ್ನು 2 ದಿನದ ನಂತರ ತೀವ್ರ ಸ್ವರೂಪದ ಹೋರಾಟ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ.

- ಬಿ.ವೀರಣ್ಣ, ಜಿಲ್ಲಾಧ್ಯಕ್ಷ

- - -

-20ಕೆಡಿವಿಜಿ3:

ಬೆಳಗಾವಿಯ ರಮೇಶ ಕತ್ತಿ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿ, ಬಂಧಿಸಿ, ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸುವಂತೆ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ ಆವರಣದಲ್ಲಿ ಜಿಲ್ಲಾ ನಾಯಕ ಸಮಾಜದಿಂದ ಒತ್ತಾಯಿಸಿ ವೃತ್ತ ನಿರೀಕ್ಷಕಿ ಗಾಯತ್ರಿ ರೊಡ್ಡ ಅವರಿಗೆ ದೂರು ನೀಡಲಾಯಿತು.