ರಮೇಶ್ ಉಳಯ, ಪ್ರಶಾಂತ್ ಅನಂತಾಡಿ ಕಥೆಗಳು ಸರ್ಕಾರಿ ಶಾಲೆ ಮಕ್ಕಳಿಗೆ ವಾಚಕ ಪಠ್ಯ

| Published : Jul 31 2025, 01:06 AM IST / Updated: Jul 31 2025, 01:07 AM IST

ರಮೇಶ್ ಉಳಯ, ಪ್ರಶಾಂತ್ ಅನಂತಾಡಿ ಕಥೆಗಳು ಸರ್ಕಾರಿ ಶಾಲೆ ಮಕ್ಕಳಿಗೆ ವಾಚಕ ಪಠ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಮೇಶ್ ಉಳಯ ಮತ್ತು ಪ್ರಶಾಂತ್ ಅನಂತಾಡಿ ರಚಿಸಿದ ತಲಾ ಮೂರು ಕಥೆಗಳು ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಒಂದರಿಂದ ಮೂರನೇ ತರಗತಿ ವರೆಗಿನ ಮಕ್ಕಳಿಗೆ ವಾಚಕ ಪಠ್ಯವಾಗಿ ಆಯ್ಕೆಯಾಗಿವೆ.

ಪುತ್ತೂರು: ಸಂಜಯನಗರ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ರಮೇಶ್ ಉಳಯ ಮತ್ತು ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆಂಗ್ಲ ಭಾಷಾ ಶಿಕ್ಷಕ ಪ್ರಶಾಂತ್ ಅನಂತಾಡಿ ರಚಿಸಿದ ತಲಾ ಮೂರು ಕಥೆಗಳು ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಒಂದರಿಂದ ಮೂರನೇ ತರಗತಿ ವರೆಗಿನ ಮಕ್ಕಳಿಗೆ ವಾಚಕ ಪಠ್ಯವಾಗಿ ಆಯ್ಕೆಯಾಗಿವೆ.

ರಮೇಶ್ ಉಳಯ ಅವರ ನಲ್ಲಿಯಲ್ಲಿ ಹಾಲು, ಅಬ್ರಕ ಡಬ್ರಕ, ಗಡಬಡ ತಿರುಗುವ ಫ್ಯಾನು ಹಾಗೂ ಪ್ರಶಾಂತ್ ಅನಂತಾಡಿ ಅವರ ಪುಟ್ಟನ ಹೊಸಮನೆ, ಜಾನು ಇರುವೆ-ಮುನ್ನಿ ಕಪ್ಪೆ, ಚಿನ್ನು ಹುಳುವಿನ ಮನೆ ಎಂಬ ಮೂರು ಕಥೆಗಳು ಈ ವಾಚಕ ಮಾಲೆಯಲ್ಲಿ ಪ್ರಕಟಗೊಂಡ ಬರಹಗಳಾಗಿವೆ.

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು ಈ ವರ್ಷದಿಂದ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಒಂದರಿಂದ ಮೂರನೇ ತರಗತಿ ವರೆಗಿನ ಮಕ್ಕಳ ಕಲಿಕೆಗಾಗಿ ಸುಮಾರು ೪೬ ವಾಚಕಗಳನ್ನು ವಾಚಕ ಪಠ್ಯವಾಗಿ ಮುದ್ರಿಸಿದೆ. ಇವೆಲ್ಲವೂ ವಿಶಿಷ್ಟ ರೀತಿಯ ಕಥೆಗಳಾಗಿದ್ದು, ವಿವಿಧ ರೀತಿಯ ವಿವರಣೆಗಳು ಮತ್ತು ಕೆಲವೊಂದು ಪ್ರಕಾರಗಳ ಮಾಹಿತಿಗಳನ್ನು ಒಳಗೊಂಡಿವೆ.

ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಬೆಂಗಳೂರು ಇದರ ಉಸ್ತುವಾರಿಯಲ್ಲಿ ಇಲ್ಲಿನ ಕಾರ್ಯಕ್ರಮ ಅಧಿಕಾರಿ ಡಾ. ಗುಣವತಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಗಾರದಲ್ಲಿ ಮೂಡಿಬಂದ ಈ ವಾಚಕಗಳು ಪ್ರಸ್ತುತ ಪುಸ್ತಕದಲ್ಲಿ ಚಿತ್ರಸಹಿತ ಮುದ್ರಣಗೊಂಡಿದೆ.

ರಾಜ್ಯದ ಪ್ರಾಥಮಿಕ ಶಾಲಾ ನಲಿ ಕಲಿ ಮಕ್ಕಳು ಓದಲು ಅನುಕೂಲವಾಗುವ ರೀತಿಯಲ್ಲಿರುವ ಈ ವಾಚಗಳ ರಚನೆಗಾಗಿ ೨೦೨೩ರಿಂದ ವಿವಿಧ ಹಂತದ ಕಾರ್ಯಾಗಾರಗಳು ಬೆಂಗಳೂರು ಮತ್ತು ಧಾರವಾಡದಲ್ಲಿ ನಡೆದಿತ್ತು. ಈ ಕಾರ್ಯಾಗಾರಕ್ಕೆ ರಾಜ್ಯದ ಸುಮಾರು ೩೦ ಶಿಕ್ಷಕರು ನೇಮಕಗೊಂಡಿದ್ದರು. ಈ ಪೈಕಿ ಪುತ್ತೂರು ತಾಲೂಕಿನ ಶಿಕ್ಷಕರಾದ ರಮೇಶ್ ಉಳಯ ಮತ್ತು ಪ್ರಶಾಂತ್ ಅನಂತಾಡಿ ಇವರು ಆಯ್ಕೆಯಾಗಿದ್ದರು.