ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪೂರ್ವಯೋಚಿತ ಕೃತ್ಯ: ಪ್ರಮೋದ ಮುತಾಲಿಕ್‌

| Published : Mar 05 2024, 01:34 AM IST / Updated: Mar 05 2024, 01:35 AM IST

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪೂರ್ವಯೋಚಿತ ಕೃತ್ಯ: ಪ್ರಮೋದ ಮುತಾಲಿಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪೂರ್ವಯೋಚಿತ ಕೃತ್ಯವಾಗಿದೆ. ತನಿಖೆಯಲ್ಲಿ ವಿರೋಧ ಪಕ್ಷ, ಆಡಳಿತ ಪಕ್ಷ ಎರಡೂ ರಾಜಕಾರಣ ಮಾಡಬಾರದು. ಅವರ ಹೇಳಿಕೆಯಿಂದ ತನಿಖೆ ದಾರಿ ತಪ್ಪುತ್ತದೆ.

ಕಾರವಾರ:

ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪೂರ್ವಯೋಚಿತ ಕೃತ್ಯವಾಗಿದೆ. ತನಿಖೆಯಲ್ಲಿ ವಿರೋಧ ಪಕ್ಷ, ಆಡಳಿತ ಪಕ್ಷ ಎರಡೂ ರಾಜಕಾರಣ ಮಾಡಬಾರದು. ಅವರ ಹೇಳಿಕೆಯಿಂದ ತನಿಖೆ ದಾರಿ ತಪ್ಪುತ್ತದೆ. ಮೂಲಬೇರು ಸಿಗದೇ ನಿರಂತರ ಇಂತಹ ಘಟನೆ ನಡೆಯುತ್ತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.

ನಗರಕ್ಕೆ ಸೋಮವಾರ ಆಗಮಿಸಿದ್ದ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಅವರು, ಬೆಂಗಳೂರಿನ ಬಾಂಬ್ ಸ್ಫೋಟ ಮೊದಲಲ್ಲ, ಇದೇ ಕೊನೆಯಲ್ಲ. ರಾಜಕೀಯ ಪಕ್ಷಗಳ ನಿರ್ಲಕ್ಷ್ಯದಿಂದ ಆಗುತ್ತಿದೆ. ಕರ್ನಾಟಕ ಪೊಲೀಸರನ್ನು ಬಿಟ್ಟು ಎನ್‌ಐಎ ತನಿಖೆ ಮಾಡುವುದು ಒಳ್ಳೆಯದು. ಕರ್ನಾಟಕ ಪೊಲೀಸರು ಸಮರ್ಥರಿದ್ದಾರೆ. ಆದರೆ ಸ್ಥಳೀಯ ಪೊಲೀಸರ ಮೇಲೆ ರಾಜಕೀಯ ಒತ್ತಡ ಬರುತ್ತದೆ. ತನಿಖೆ ದಿಕ್ಕು ತಪ್ಪುತ್ತದೆ ಎಂದು ಅಭಿಪ್ರಾಯಿಸಿದರು.

ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಭಯೋತ್ಪಾದಕರಿದ್ದಾರೆ. ಈ ಹಿಂದೆ ೩೦ ಟನ್ ಗೋಮಾಂಸ ಹಿಡಿದ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸಿ ಸೆಂಟ್ರಲ್ ಜೈಲಿಗೆ ಹಾಕಿದ್ದರು. ಈ ವೇಳೆ ನಮ್ಮವರು ಸರ್ವೇ ಮಾಡಿದ್ದಾರೆ. ಅಲ್ಲಿರುವ ಭಯೋತ್ಪಾದಕರು ಮೊಬೈಲ್ ಬಳಕೆ ಮಾಡುತ್ತಾರೆ. ಅಲ್ಲಿಂದಲೂ ಕೆಫೆ ಸ್ಫೋಟಕ್ಕೆ ಲಿಂಕ್ ಇರಬೇಕು. ಆಡಳಿತ ಮತ್ತು ವಿರೋಧ ಪಕ್ಷದವರು ಬಾಯಿ ಮುಚ್ಚಿಕೊಂಡಿರಬೇಕು. ಇಬ್ಬರು ತಪ್ಪಿತಸ್ಥರು. ಅಧಿಕಾರ, ಖುರ್ಚಿಗಾಗಿ ಪಾಕಿಸ್ತಾನ ಜಿಂದಾಬಾದ್ ಎಂದರೂ ಕ್ರಮವಾಗಿಲ್ಲ. ಇದೊಂದು ಕ್ಯಾನ್ಸರ್ ಇದ್ದಂತೆ, ಈಗಲೇ ತುಂಡು ಮಾಡಬೇಕು ಎಂದು ಆಗ್ರಹಿಸಿದರು.

ಪಾಕಿಸ್ತಾನ ಶತ್ರು ರಾಷ್ಟ್ರವಲ್ಲ, ನೆರೆಯ ರಾಷ್ಟ್ರವೆಂದ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಮುತಾಲಿಕ್, ಪಾಕಿಸ್ತಾನ ನಮ್ಮ ದೇಶದ ವಿರುದ್ಧ ನಾಲ್ಕು ಯುದ್ಧ ಮಾಡಿದೆ. ೭೦ ವರ್ಷಗಳಿಂದ ಬಾಂಬರ್‌ರನ್ನು ಕಳುಹಿಸುತ್ತಿದೆ. ನೀವು ಇಂತಹ ರಾಷ್ಟ್ರಕ್ಕೆ ನೆರೆಯ ರಾಷ್ಟ್ರ ಎನ್ನುತ್ತೀರಾ? ನಾಚಿಕೆಯಾಗಬೇಕು. ನಿಮಗೆ ದೇಶಭಕ್ತಿ ಇದೆಯೇ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಬಾಂಬ್ ಸ್ಫೋಟ ಮಾಡಿಸಿದ್ದು ಎಂದು ಸಚಿವ ಮಂಕಾಳು ವೈದ್ಯ ಹೇಳಿದಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗರು ಮಾಡಿಸಿದ್ದು ಎನ್ನುತ್ತೀರಲ್ಲ? ನಿಮ್ಮ ಬಳಿ ದಾಖಲೆ ಇದೆಯೇ? ಹಾಗಿದ್ದರೆ ಪ್ರಕರಣ ದಾಖಲಿಸಿ ಒಳಕ್ಕೆ ಹಾಕಿ. ಸುಮ್ಮಸುಮ್ಮನೇ ಏನೇನೋ ಮಾತನಾಡಬಾರದು ಎಂದರು. ಬಿಜೆಪಿಗರು ಜಗನ್ನಾಥ ಶೆಟ್ಟಿ ಆಯೋಗ ವರದಿ ಏಕೆ ಹೊರಗೆ ತಂದಿಲ್ಲ? ಕಾಂಗ್ರೆಸ್ ಅಧಿಕಾರದಲ್ಲಿದೆ. ಏಕೆ ಹೊರ ತರುವ ಪ್ರಯತ್ನ ಮಾಡಿಲ್ಲ ಎಂದ ಅವರು, ಎಲ್ಲರೂ ಅಯೋಗ್ಯರು, ಸಚಿವ ಶರಣಪ್ರಕಾಶ ಸಿಲ್ಲಿ ಘಟನೆ ಎನ್ನುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಈ ರೀತಿ ಮಾತನಾಡಬಾರದು. ವ್ಯವಸ್ಥಿತವಾಗಿ ಕೋಮುವಾದಿಗಳನ್ನು ರಕ್ಷಿಸಲು ಹೊರಟಿದ್ದಾರೆ. ಈ ದೇಶದ ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಅವರನ್ನು ಜೈಲಿಗೆ ಹಾಕಬೇಕು. ದೇಶದ್ರೋಹಿಗಳನ್ನು ಬಚಾವ್ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ಜಾತಿ ಸಮೀಕ್ಷೆ ಬಗ್ಗೆ ಕೇಳಿದಾಗ, ಅದು ಸರಿಯಲ್ಲ. ಜಾತಿ ಜಾತಿ ಮಧ್ಯೆ ಒಡಕು ಮೂಡಿಸುತ್ತಿದ್ದಾರೆ. ನಮ್ಮ ವಿರೋಧವಿದೆ. ನಾವೆಲ್ಲ ಭಾರತಿಯರು ಎನ್ನುವ ಭಾವನೆ ಬೇಕು. ಹಿಂದೂ ಸಮಾಜವನ್ನು ನಾವು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ರಾಜಕಾಣಿಗಳು ಒಡೆಯುತ್ತಿದ್ದಾರೆ. ಯಾರು ಯಾರು ಬಡ ಭಾರತೀಯರಿದ್ದಾರೆ. ಅವರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದ ಅವರು, ಸಂಸದ ಅನಂತಕುಮಾರ ಬಗ್ಗೆ ಕೇಳಿದಾಗ, ಅನಂತಕುಮಾರ ಹೆಗಡೆ ಹಿಂದುತ್ವದ ಸಂಬಂಧ ಒಳ್ಳೆಯ ಕೆಲಸ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಮಗೆ ಗೊತ್ತಿಲ್ಲ. ಟಿಕೆಟ್ ನೀಡುವುದು ಬಿಡುವುದನ್ನು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ತಾವು ಬಿಜೆಪಿ ಸದಸ್ಯತ್ವ ಪಡೆದಿಲ್ಲ. ನಾವು ಹೇಳುವುದು ಸರಿಯಲ್ಲ. ದೇಶದ ಹಿತದೃಷ್ಟಿಯಿಂದ ನಮ್ಮ ರಾಜ್ಯದ ಕೆಲವು ಸಂಸದರು ಸ್ವಯಂ ನಿವೃತ್ತಿಯಾಗಬೇಕು. ಯಾರು ಯಾರು ಕೇಳಬೇಡಿ, ಕರ್ನಾಟಕ ಕೆಲವು ಎಂಪಿ ನಿವೃತ್ತಿ ಆಗಬೇಕು ಎಂದರು.