ಬೆಳಗ್ಗೆ ಪ್ರಾರಂಭವಾದ ಚಿತ್ರಕಲಾ ಸ್ಪರ್ಧೆಯಲ್ಲಿ ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂತಸದಿಂದಲೇ ಅಂಬೇಡ್ಕರ್ ಭವನದ ಆವರಣಕ್ಕೆ ಮಕ್ಕಳು ಹೆಜ್ಜೆ ಇಟ್ಟರು.
ಕನ್ನಡಪ್ರಭ ವಾರ್ತೆ ರಾಮನಗರ
ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಜೊತೆಗೆ ಅವರಲ್ಲಿ ಅಡಗಿರುವ ಕಲಾತ್ಮಕ ಪ್ರತಿಭೆ, ಸೃಜನಾತ್ಮಕತೆ ಮತ್ತು ಕೌಶಲ್ಯವನ್ನು ಉತ್ತೇಜಿಸುವ ದೃಷ್ಟಿಯಿಂದ ಶನಿವಾರ ರಾಮನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಕಲಾ ಲೋಕವನ್ನೇ ಸೃಷ್ಟಿಸಿದರು.ಬೆಳಗ್ಗೆ ಪ್ರಾರಂಭವಾದ ಚಿತ್ರಕಲಾ ಸ್ಪರ್ಧೆಯಲ್ಲಿ ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂತಸದಿಂದಲೇ ಅಂಬೇಡ್ಕರ್ ಭವನದ ಆವರಣಕ್ಕೆ ಮಕ್ಕಳು ಹೆಜ್ಜೆ ಇಟ್ಟರು. ಅವರೆಲ್ಲರನ್ನು ಹುಲಿವೇಷ , ಹಾಸ್ಯ ಗೊಂಬೆಗಳ ವೇಷ ಧರಿಸಿದ್ದ ಡೊಳ್ ಚಂದ್ರು ತಂಡದ ಕಲಾವಿದರು ಹಾಗೂ ವನ್ಯಜೀವಿಗಳ ಪೋಷಾಕಿನಲ್ಲಿದ್ದ ಎಬಿಸಿಡಿ ನೃತ್ಯ ಶಾಲೆಯ ವಿದ್ಯಾರ್ಥಿಗಳು ಸ್ವಾಗತ ಕೋರಿದರು.
ಹುಲಿವೇಷ, ಹಾಸ್ಯ ಗೊಂಬೆಗಳು ಮಕ್ಕಳಿಗೆ ಕೈ ಕುಲಕಿ ವಿಭಿನ್ನ ರೀತಿಯಲ್ಲಿ ಸ್ವಾಗತಿಸಿದರೆ, ವನ್ಯಜೀವಿಗಳ ವೇಷದಲ್ಲಿದ್ದ ವಿದ್ಯಾರ್ಥಿಗಳು ಚಿತ್ರ ಬಿಡಿಸುತ್ತಿದ್ದ ಸ್ಥಳದಲ್ಲಿ ಮಕ್ಕಳ ಬಳಿಗೆ ತೆರಳಿ ಶುಭ ಕೋರಿದರು. ವೇಷಧಾರಿಗಳನ್ನು ನೋಡಿದ ಮಕ್ಕಳು ಖುಷಿ ಪಟ್ಟರು.ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳ ಚಿತ್ರ ಕಲೆಗಳನ್ನು ಆವರಣದೊಳಗೆ ಪ್ರದರ್ಶಿಸಲಾಗಿತ್ತು. ಸ್ಪರ್ಧೆಗೆ ಆಗಮಿಸಿದ ಮಕ್ಕಳು ಹಾಗೂ ಗಣ್ಯರು ಆ ಚಿತ್ರಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಾಗಡಿ, ಹಾರೋಹಳ್ಳಿ, ಚನ್ನಪಟ್ಟಣ ಹಾಗೂ ಕನಕಪುರ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು ಹಾಗೂ ರಾಮನಗರ ತಾಲೂಕಿನ ವಿವಿಧ ಶಾಲೆಗಳ ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸುಮಾರು ಎರಡು ತಾಸು ಜರುಗಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಕಲ್ಪನೆ ಕುರಿತು ವಿದ್ಯಾರ್ಥಿಗಳು ಕುಂಚದ ಮೂಲಕ ಅನಾವರಣಗೊಳಿಸಿದರು.ಮಕ್ಕಳಿಗೆ ಚಿತ್ರ ಬಿಡಿಸಲು ಪೂರಕವಾದ ಡ್ರಾಯಿಂಗ್ ಶೀಟ್ ಒದಗಿಸಲಾಯಿತು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಮಕ್ಕಳು ಅತ್ಯುತ್ಸಾಹದಿಂದ ಚಿತ್ರಗಳನ್ನು ಬಿಡಿಸಿದರು. ವಿದ್ಯಾರ್ಥಿಗಳು ತಮ್ಮ ಕಲ್ಪನೆಗೆ ಬಣ್ಣದ ಚಿತ್ತಾರದ ಸ್ಪರ್ಶ ನೀಡಿ, ಗಮನ ಸೆಳೆದರು.
ಸ್ಪರ್ಧೆಗೆ ಮುನ್ನ ಮಕ್ಕಳಿಗೆ ಶ್ರೀ ಅಪ್ರಮೇಯ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಮಾಲೀಕ ವರದರಾಜುಗೌಡ ಅವರು ಟೀ ಶರ್ಟ್ ಗಳನ್ನು ವಿತರಣೆ ಮಾಡಿದರೆ, ಅರಣ್ಯ ಇಲಾಖೆ ಅಧಿಕಾರಿಗಳು ಚಿತ್ರ ಬಿಡಿಸುವ ಸಂದರ್ಭದಲ್ಲಿ ಮಕ್ಕಳಿಗೆಲ್ಲ ಚಾಕ್ಲೇಟ್ ನೀಡಿದರು. ಸ್ಪರ್ಧೆಯ ನಂತರ ಭಾಗವಹಿಸಿದ ಎಲ್ಲ ಮಕ್ಕಳಿಗೆ, ಶಿಕ್ಷಕರು ಮತ್ತು ಪಾಲಕರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯ ವಿಜೇತರು:
10ನೇ ತರಗತಿ ವಿಭಾಗದಿಂದ ಚನ್ನಪಟ್ಟಣದ ಆದರ್ಶ ವಿದ್ಯಾಲಯದ ಸಿ.ಕೆ. ಧೃತಿ (ಪ್ರಥಮ), ರಾಮನಗರ ಬಾಲಕರ ಪ್ರೌಢಶಾಲೆಯ ಚಂದು (ದ್ವಿತೀಯ), ಕನಕಪುರದ ಬ್ಲಾಸಮ್ ಸ್ಕೂಲ್‌ನ ಕೆ.ಜಿ. ಕಾವ್ಯ (ತೃತೀಯ), ಚನ್ನಪಟ್ಟಣದ ಡಾನ್‌ಬಾಸ್ಕೋ ಶಾಲೆಯ ಎ.ಆಶಿಕಾ ಮತ್ತು ಮಾಗಡಿ ಬಾಲಾಜಿ ನ್ಯಾಷನಲ್ ಪಬ್ಲಿಕ್ ಶಾಲೆಯ ಎಂ.ಆರ್.ತೇಜಲ್ ಸಮಾಧಾನಕರ ಬಹುಮಾನ ಪಡೆದುಕೊಂಡರು.9ನೇ ತರಗತಿ ವಿಭಾಗದಿಂದ ಆನುಮಾನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕೆ.ಎಸ್. ಕುಶಾಲ್ ಕುಮಾರ್ (ಪ್ರಥಮ ಸ್ಥಾನ), ರಾಮನಗರದ ಹೋಲಿ ಕ್ರಸ್ಸೆಂಟ್ ಶಾಲೆಯ ಪ್ರಜ್ವಲ್‌ಪ್ರದೀಫ್ (ದ್ವಿತೀಯ ಸ್ಥಾನ), ಕನಕಪುರದ ಬ್ಲಾಸಮ್ ಶಾಲೆಯ ಎನ್.ಕೀರ್ತನ (ತೃತೀಯ ಸ್ಥಾನ), ರಾಮನಗರದ ಜಿಜಿಸಿಯ ಕೆ.ಟಿ.ಗೌರವ್ ಮತ್ತು ಚನ್ನಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಜೈಬ್ ಸಮಾಧಾನಕರ ಬಹುಮಾನ ಪಡೆದರು.
8ನೇ ತರಗತಿ ವಿಭಾಗದಿಂದ ಚನ್ನಪಟ್ಟಣ ಆದರ್ಶ ವಿದ್ಯಾಲಯದ ಮೌನಿಷ್ಕಶೆಟ್ಟಿ (ಪ್ರಥಮ ಸ್ಥಾನ) ರಾಮನಗರ ಆನುಮಾನಹಳ್ಳಿ ಮುರಾರ್ಜಿ ದೇಶಾಯಿ ವಸತಿ ಶಾಲೆಯ ಅಭಯ್‌ಸೂರ್ಯ (ದ್ವಿತೀಯ ಸ್ಥಾನ), ಮಾಗಡಿ ವಾಸವಿ ಶಾಲೆಯ ಮದೀಹ ಸಾದಫ್ (ತೃತೀಯ ಸ್ಥಾನ), ಚನ್ನಪಟ್ಟಣ ಸೆಂಟ್ ಜೋಸೆಪ್ ಪ್ರೌಢಶಾಲೆಯ ಸಿ.ಪಿ.ಕೀರ್ತಿರಾಜ್ ಮತ್ತು ಹಾರೋಹಳ್ಳಿ ಪ್ರಗತಿ ವಿದ್ಯಾನಿಕೇತನ ಶಾಲೆಯ ಸ್ಫೂರ್ತಿ ಸಮಾಧಾನಕರ ಬಹುಮಾನ ಪಡೆದುಕೊಂಡರು.ಸ್ಪರ್ಧೆಯಲ್ಲಿ ಚಿತ್ರಕಲಾ ಶಿಕ್ಷಕರಾದ ಅರ್ಜುನ್ ಚೌವ್ಹಾಣ್, ರಾಜಶೇಖರ್ ಹಾಗೂ ಶಿವನಾಗ್ ಚೌವ್ಹಾಣ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
13ಕೆಆರ್ ಎಂಎನ್ 1,2.ಜೆಪಿಜಿ1.ಬೆಂಗಳೂರು ದಕ್ಷಿಣ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳು ತಾವು ಬಿಡಿಸಿದ ಚಿತ್ರಗಳನ್ನು ಪ್ರದರ್ಶಿಸಿದರು.
2.ಮಕ್ಕಳು ಚಿತ್ರ ಬಿಡಿಸುತ್ತಿರುವುದನ್ನು ಶಾಸಕ ಇಕ್ಬಾಲ್ ಹುಸೇನ್ ರವರು ವೀಕ್ಷಣೆ ಮಾಡಿದರು.