ರಾಮೋಜಿರಾವ್ ಕಾರ್ಯವೈಖರಿ ನಮ್ಮೆಲ್ಲರಿಗೂ ಸ್ಪೂರ್ತಿ

| Published : Jun 14 2024, 01:01 AM IST

ಸಾರಾಂಶ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಭಾರತೀಯ ಮಾಧ್ಯಮ ಲೋಕದ ದಿಗ್ಗಜ ರಾಮೋಜಿರಾವ್ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಿ ನುಡಿನಮನ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರುಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಭಾರತೀಯ ಮಾಧ್ಯಮ ಲೋಕದ ದಿಗ್ಗಜ ರಾಮೋಜಿರಾವ್ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಿ ನುಡಿನಮನ ಸಲ್ಲಿಸಲಾಯಿತು.ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ರಾಮೋಜಿರಾವ್ ಮಾಧ್ಯಮ, ಮನೋರಂಜನೆ, ಹೋಟೆಲ್ ಉದ್ಯಮ, ಆಹಾರ ಸಂಸ್ಕರಣೆ ಹೀಗೆ ವಿವಿಧ ಕ್ಷೇತ್ರದಲ್ಲಿ ಅತಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ವಿವಿಧ ಭಾಷೆಯ ಸುದ್ದಿ, ಮನೋರಂಜನಾ ವಾಹಿನಿಗಳನ್ನು ತೆರೆದು ನುರಿತ ಪತ್ರಕರ್ತರನ್ನು ರೂಪಿಸುವ ಪಾಕಶಾಲೆಯಾಗಿ ಅಭಿವೃದ್ಧಿ ಪಡಿಸಿದರು ಎಂದರು.

ಹೈದ್ರಾಬಾದ್‌ಯೆಂದರೆ ಕೂಡಲೇ ರಾಮೋಜಿ ಫಿಲಂಸಿಟಿ ನೆನಪಾಗದೆ ಇರುವುದಿಲ್ಲ. ಫಿಲಂಸಿಟಿಯನ್ನು ವಿಶ್ವದ ಭೂಪುಟದಲ್ಲಿ ಗುರುತಿಸುವಂತೆ ಮಾಡಿದ ರಾಮೋಜಿರಾವ್ ಅವರಂತಹ ಹಿರಿಯ ಚೇತನರ ಸಾಧನೆ, ಕಾರ್ಯವೈಖರಿ ನಮಗೆಲ್ಲ ಸ್ಪೂರ್ತಿಯಾಗಿದೆ. ರಾಮೋಜಿರಾವ್ ಅವರ ನಿಧನ ಇಡೀ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜದ ಋಣವನ್ನು ತೀರಿಸುವ ಕಾರ್ಯ ನಾವೆಲ್ಲರೂ ಮಾಡಬೇಕಿದೆ ಎಂದು ಹೇಳಿದರು.

ರಾಷ್ಟ್ರೀಯಮಂಡಳಿ ಸದಸ್ಯ ಟಿ.ಎನ್.ಮಧುಕರ್ ಮಾತನಾಡಿ, ರಾಮೋಜಿರಾವ್ ಹೆಸರೇ ಸಾಧನೆಯ ಪ್ರತೀಕ. ಅವರ ನಿಧನದಿಂದ ಮಾಧ್ಯಮ, ಸಿನಿಮಾ ಕ್ಷೇತ್ರದಿಂದ ಹೆಮ್ಮರವೊಂದು ಕಳಚಿದಂತಾಗಿದೆ. ರಾಮೋಜಿ ಫಿಲಂ ಸಿಟಿ ಗಿನ್ನಿಸ್ ದಾಖಲೆ ಮಾಡಿದೆ. ಬೃಹತ್ ಸಂಸ್ಥೆ ಸ್ಥಾಪಿಸಿ ಲಕ್ಷಾಂತರ ಮಂದಿಗೆ ಬದುಕು ಕಟ್ಟಿಕೊಡುವುದು ಸುಲಭ ಸಾಧನೆಯಲ್ಲ. ಈ ನಾಡು ವರದಿಗಾರ ಗೋವಿಂದಪ್ಪ ಅವರು ಕಳೆದ 31 ವರ್ಷಗಳಿಂದ ಪತ್ರಿಕೆ ಒಡನಾಟ ಬಿಟ್ಟಿಲ್ಲವೆಂದರೆ ಸಂಸ್ಥೆಯ ಮಾಲೀಕರಾಗಿದ್ದ ರಾಮೋಜಿರಾವ್ ಅವರು ನೌಕರರನ್ನು ನಡೆಸಿಕೊಳ್ಳುತ್ತಿದ್ದ ಉತ್ತಮ ರೀತಿಗೆ ನಿದರ್ಶನ. ೮೭ ವರ್ಷದ ತುಂಬು ಜೀವನ ನಡೆಸಿ ನಮ್ಮನ್ನೆಲ್ಲ ಅಗಲಿದ್ದಾರೆ ಎಂದರು.ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಮಾಧ್ಯಮವೆಂಬುದು ಬೆದರಿಕೆಯ ಅಸ್ತ್ರವಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳ ಅಕ್ರಮವನ್ನು ಸುದ್ದಿಯ ಮೂಲಕ ಸಾರ್ವಜನಿಕರ ಮುಂದಿಡಬೇಕೆ ಹೊರತು ಅಕ್ರಮದದ ಸಂಗತಿಯನ್ನು ಹಿಡಿದು ಬೆದರಿಸುವ ಕೆಲಸ ಮಾಡಬಾರದು. ಮಾಧ್ಯಮವನ್ನು ಸಮಾಜಕ್ಕೆ ಉಪಕಾರಿಯಾಗಿ ಹೇಗೆ ಬಳಸಬಹುದೆಂಬುದನ್ನು ಈಟಿವಿ ಸಮೂಹ ಸಂಸ್ಥಾಪಕ ರಾಮೋಜಿರಾವ್ ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದರು.ಮಾರ್ಗದರ್ಶಿ ಚಿಟ್‌ಫಂಡ್‌ನ ಶಾಖಾ ವ್ಯವಸ್ಥಾಪಕ ಸಿ.ಎಚ್.ಅಸಿರಯ್ಯ ಮಾತನಾಡಿ, ಅಖಂಡ ಆಂಧ್ರದ ಕೃಷ್ಣಾ ಜಿಲ್ಲೆಯಲ್ಲಿ ಜನಿಸಿದ ರಾಮೋಜಿರಾವ್ ತಮ್ಮ ಮಾಧ್ಯಮ, ಹಣಕಾಸು ನೆರವಿನ ಉದ್ಯಮದ ಮೂಲಕ ದೇಶದ ಕೀರ್ತಿಯನ್ನು ಬೆಳಗಿದ್ದಾರೆ. ತುಮಕೂರು ಜಿಲ್ಲೆಯಲ್ಲೆ ಮಾರ್ಗದರ್ಶಿ ಶಾಖೆ ೬೦ ಕೋಟಿ ರು. ವಹಿವಾಟು ನಡೆಸುತ್ತಿದೆ. ಪ್ರತ್ಯಕ್ಷ ಪರೋಕ್ಷವಾಗಿ ಸಾವಿರಾರು ಮಂದಿ ಅವರ ಉದ್ಯಮ ಸಮೂಹದ ಮೂಲಕ ಬದುಕು ಕಂಡುಕೊಂಡಿದ್ದಾರೆ ಎಂದರು.ರಾಷ್ಟ್ರೀಯ ಮಂಡಳಿ ಸದಸ್ಯ ಅನುಶಾಂತರಾಜ್, ಈನಾಡು ಪತ್ರಿಕೆ ಹಿರಿಯ ವರದಿಗಾರ ಸಿ.ಟಿ.ಎಸ್ ಗೋವಿಂದಪ್ಪ, ಈ ಟಿವಿ ಭಾರತ್ ಜಿಲ್ಲಾ ಪ್ರತಿನಿಧಿ ಶಾಂತಿನಾಥ್ ಜೈನ್, ಹಿರಿಯ ವರದಿಗಾರ ಸಾಕ್ಷಿ ಜಗನ್ನಾಥ್ ಹಾಗೂ ಎಸ್.ಹರೀಶ್ ಆಚಾರ್ಯ ಅವರುಗಳು ಈಟಿವಿ ನ್ಯೂಸ್ ವಾಹಿನಿ, ಪತ್ರಿಕೆಯೊಂದಿಗಿನ ತಮ್ಮ ಒಡನಾಟ, ರಾಮೋಜಿ ರಾವ್ ಅವರು ಹೊಂದಿದ್ದ ವೃತ್ತಿಪರತೆ ಸರಳತೆ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು. ಮೃತರ ಗೌರವಾಥ್ ೨ ನಿಮಿಷ ಮೌನ ಆಚರಿಸಲಾಯಿತು.

ಕೆಯುಡಬ್ಲ್ಯುಜೆ ಜಿಲ್ಲಾ ಘಟಕದ ಪದಾಧಿಕಾರಿಗಳಾದ ತಿಪಟೂರು ಕೃಷ್ಣ, ಶ್ಯಾ.ನ. ಪ್ರಸನ್ನಮೂರ್ತಿ, ದಶರಥ, ಸತೀಶ್ ಹಾರೋಗೆರೆ ಸಂಘದ ನಿರ್ದೇಶಕರುಗಳು ಪತ್ರಕರ್ತರು ಹಾಜರಿದ್ದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಂ ಸ್ವಾಗತಿಸಿದರು. ಶಾಂತಿನಾಥ್ ಜೈನ್ ನಿರೂಪಿಸಿದರು. ಸಿ.ಟಿ.ಎಸ್.ಗೋವಿಂದಪ್ಪ ವಂದಿಸಿದರು.