ಎಲ್ಲೆಡೆ ಮೊಳಗಿದ ರಾಮೋತ್ಸವ ಸಂಭ್ರಮ

| Published : Jan 22 2024, 02:21 AM IST

ಸಾರಾಂಶ

ಜಿಲ್ಲೆಯ ಶ್ರೀರಾಮ ದೇವಾಲಯ, ಆಂಜನೇಯ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ.

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ರಾಮೋತ್ಸವ ಸಂಭ್ರಮ ಮನೆ ಮಾಡಿದ್ದು, ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಕ್ಕೆ ಸಜ್ಜುಗೊಳಿಸಲಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ಈ ಮಧ್ಯೆ ಜಿಲ್ಲಾ ಪೊಲೀಸರು ಕೂಡ ಸೂಕ್ತ ಬಂದೋಬಸ್ತ್‌ಗೆ ಸಜ್ಜಾಗಿದ್ದಾರೆ.

ಜಿಲ್ಲೆಯಲ್ಲಿ ರಾಮೋತ್ಸವದ ಹಿನ್ನೆಲೆಯಲ್ಲಿ ಚಿಣ್ಣರು ಕೂಡ ರಾಮ, ಸೀತೆ, ಲಕ್ಷ್ಮಣ ವೇಷಧಾರಿಗಳಾಗಿ ಗಮನ ಸೆಳೆಯುತ್ತಿದ್ದಾರೆ. ನಗರದ ಅಲೆಮಾರಿ ಸಮುದಾಯದ ಹಗಲುವೇಷ ಕಲಾವಿದರಿಗೂ ಭಾರೀ ಬೇಡಿಕೆ ಬಂದಿದ್ದು, ರಾಮ, ಲಕ್ಷ್ಮಣ, ಸೀತೆ, ಶೂರ್ಪನಖಿ, ಹನುಮ ವೇಷಧಾರಿ ಕಲಾವಿದರಿಗೆ ವೇಷಧರಿಸಿ ಮೆರವಣಿಗೆಗಳಲ್ಲಿ ಪಾಲ್ಗೊಳ್ಳಲು ಆಮಂತ್ರಿಸಲಾಗುತ್ತಿದೆ.

ಬಿಜೆಪಿಯಿಂದ ವಿಶೇಷ ಪೂಜೆ: ಅಯೋಧ್ಯೆಯಲ್ಲಿ ಜ. 22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಭಟ್ಟರಹಳ್ಳಿ ಆಂಜನೇಯ ದೇವಾಲಯದಲ್ಲಿ ಬೆಳಗ್ಗೆ 7 ಗಂಟೆಯಿಂದ ವಿಶೇಷ ಪೂಜೆ, ಹೋಮ ನಡೆಸಲಾಗುತ್ತಿದೆ. ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಈ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.

ಸ್ವಚ್ಛ ತೀರ್ಥ ಅಭಿಯಾನ: ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ದೇವಾಲಯಗಳಿಗೆ ತೆರಳಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ನಗರದ ಇಂದಿರಾ ನಗರದ ಆದಿಶಕ್ತಿ ದೇವಿ ದೇವಾಲಯದಲ್ಲಿ ಭಾನುವಾರ ಸ್ವಚ್ಛ ತೀರ್ಥ ಅಭಿಯಾನ ನಡೆಸಲಾಯಿತು.

ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ದೇಶದ ಹಿಂದೂ ಧರ್ಮದ ಪವಿತ್ರ ಕ್ಷೇತ್ರವೆಂದೇ ಹೇಳಲಾಗುವ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಾಗಿದ್ದು, ಜ. 22ರಂದು ಉದ್ಘಾಟನೆಯಾಗುತ್ತಿದೆ. ಈ ಸಮಯದಲ್ಲಿ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ರಾಮನ ಮೇಲಿನ ಭಕ್ತಿ ಸಮರ್ಪಿಸಲಾಗುತ್ತಿದೆ ಎಂದರು.

ಯುವ ಮುಖಂಡ ಸಿದ್ದಾರ್ಥ ಸಿಂಗ್ ಮಾತನಾಡಿ, ರಾಮಭಕ್ತರಿಗೆ ಅಯೋಧ್ಯೆ ಭಕ್ತಿಕೇಂದ್ರವಾಗಿದೆ. ಹಲವಾರು ವರ್ಷಗಳ ಹೋರಾಟದ ಫಲವಾಗಿ ಶ್ರೀರಾಮನ ಮಂದಿರ ಉದ್ಘಾಟನೆಯಾಗುತ್ತಿದೆ. ಧರ್ಮವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಯುತ್ತದೆ ಎಂಬುದಕ್ಕೆ ಈ ಕ್ಷಣ ಸಾಕ್ಷಿಯಾಗಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ, ತಾಲೂಕಾಧ್ಯಕ್ಷ ಕಾಸಟಿ ಉಮಾಪತಿ, ಮುಖಂಡರಾದ ಅಶೋಕ್ ಜೀರೆ, ರಾಘವೇದ್ರ, ಎಲ್.ಎಸ್. ಆನಂದ್, ರೇವಣಸಿದ್ದಪ್ಪ, ಹೊನ್ನೂರವಲಿ, ಶಂಕರ ಮೇಟಿ ಮತ್ತಿತರರಿದ್ದರು.

ರಾಮ ತಾರಕ ಹೋಮ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಪ್ರಯುಕ್ತ ಹೆಬ್ಬಳ್ಳಿಯ ಚೈತನ್ಯಾಶ್ರಮ ನಾಮಸಾಧಕ ಸಮಿತಿಯಿಂದ ನಗರದ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ 30 ತಾಸುಗಳ ಅಖಂಡ ಶ್ರೀಹನುಮಾನ ಚಾಲೀಸ್‌ ಪಠಣೆ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಭಾನುವಾರ ರಾಮ ತಾರಕ ಹೋಮ ನೆರವೇರಿತು.

ಸಮಿತಿಯ ಸೇವಾ ಕಾರ್ಯಕರ್ತ ಶ್ರೀಪಾದ ಪೂಜಾರ್‌, ಮುಖಂಡರಾದ ಮಯೂರನಾಥ ಜೋಶಿ, ವೆಂಕೋಬರಾವ್ ಕುಲಕರ್ಣಿ, ಬಿ.ಎಂ. ಸೋಮಶೇಖರ್, ಅರವಿಂದರಾವ್ ಕುಲಕರ್ಣಿ, ವಸಂತ ಕುಮಾರ್, ಗುರುರಾಜ ದೇಸಾಯಿ, ರವಿಶಂಕರ್ ಮತ್ತಿತರರಿದ್ದರು.

ಮನೆಮಾಡಿದ ರಾಮೋತ್ಸವ: ಜಿಲ್ಲೆಯ ಶ್ರೀರಾಮ ದೇವಾಲಯ, ಆಂಜನೇಯ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಜಿಲ್ಲೆಯ ಹೂವಿನಹಡಗಲಿ, ಹೊಸಪೇಟೆ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಮತ್ತು ಹರಪನಹಳ್ಳಿ ತಾಲೂಕುಗಳಲ್ಲಿ ರಾಮ ಭಜನೆ ಮಾಡಲಾಗುತ್ತಿದೆ.

ಪೊಲೀಸರ ಸೂಕ್ತ ಬಂದೋಬಸ್ತ್‌: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಜಿಲ್ಲಾ ಪೊಲೀಸರು ಸೂಕ್ತ ಬಂದೋಬಸ್ತ್‌ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಬ್ಬರು ಎಸ್ಪಿ, ಒಬ್ಬರು ಎಎಸ್ಪಿ, ಮೂವರು ಡಿವೈಎಸ್ಪಿ, 13 ಸಿಪಿಐ, 48 ಪಿಎಸ್‌ಐ, 900 ಪೊಲೀಸ್‌ ಪೇದೆಗಳು, 150 ಹೋಂ ಗಾರ್ಡ್‌ಗಳನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದ್ದು, ಪೊಲೀಸರು ಸೂಕ್ತ ನಿಗಾ ವಹಿಸಿದ್ದಾರೆ.ರಾಮನ ಮೇಲಿನ ಭಕ್ತಿ: ರಾಮ ಜನ್ಮಭೂಮಿ ಉಳಿವಿಗಾಗಿ ನಮ್ಮ ಹಿರಿಯರು ತುಂಬಾ ಪ್ರಯತ್ನಿಸಿದ್ದಾರೆ. ಈಗ ಸಫಲವಾಗಿದೆ. ಈ ಸಮಯದಲ್ಲಿ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ರಾಮನ ಮೇಲಿನ ಭಕ್ತಿ ಸಮರ್ಪಿಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ ತಿಳಿಸಿದರು.ಬಂದೋಬಸ್ತ್‌: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೂಕ್ತ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಕೆಲ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ವಹಿಸಲಾಗಿದ್ದು, ಈಗಾಗಲೇ ಎಲ್ಲ ಕಡೆ ಬಂದೋಬಸ್ತ್‌ ಕೈಗೊಳ್ಳಲಾಗಿದೆ ಎಂದು ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ತಿಳಿಸಿದರು.