ಧರ್ಮ ಮತ್ತು ಧಾರ್ಮಿಕ ಆಚರಣೆ ವಿಚಾರ ಅತ್ಯಂತ ಸೂಕ್ಷ್ಮವಾದ ಸಂಗತಿ. ಇದು ಗೊತ್ತಿದ್ದರೂ ಶಾಸಕ ಇಕ್ಬಾಲ್ ಹುಸೇನ್ ರವರು ರಾಮೋತ್ಸವ ಆಚರಣೆಯನ್ನು ಸವಾಲಾಗಿಯೇ ಸ್ವೀಕಾರ ಮಾಡಿದ್ದರು.
ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರಶ್ರೀರಾಮ ಪಾದಸ್ಪರ್ಶ ಮಾಡಿದ ರಾಮನೂರು ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ. ಇಲ್ಲಿ ನೆಲೆಸಿರುವ ವಿವಿಧ ಧಾರ್ಮಿಕ ಹಿನ್ನೆಲೆಯ ಜನರಲ್ಲಿ ಕೋಮು ಸಾಮರಸ್ಯ ಮೂಡಲು ರಾಮೋತ್ಸವ ಸಾಕ್ಷಿ ಮಾತ್ರವಲ್ಲದೆ ಸ್ಫೂರ್ತಿಯೂ ಆಗಿದೆ.
ದಶಕಗಳಿಂದ ಆಚರಿಸುತ್ತಾ ಬಂದಿರುವ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವ ಧಾರ್ಮಿಕ ರೇಖೆಗಳನ್ನು ಮೀರಿ ಹಿಂದೂ - ಮುಸ್ಲಿಂರ ಭಾವೈಕ್ಯತೆಗೆ ಕೈಗನ್ನಡಿಯಾಗಿದೆ. ಇದೇ ಮೊದಲ ಬಾರಿ ಆಯೋಜನೆಗೊಂಡಿರುವ ರಾಮೋತ್ಸವವೂ ಧಾರ್ಮಿಕ ಸಾಮರಸ್ಯಕ್ಕೆ ಸೇತುವೆಯಾಗುತ್ತಿದೆ.ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಕ್ಬಾಲ್ ಹುಸೇನ್ ಅವರು ಶಾಸಕರಾಗಿ ಆಯ್ಕೆಯಾದ ಹೊಸದರಲ್ಲಿ ರಾಮದೇವರ ಬೆಟ್ಟವನ್ನು ಅಭಿವೃದ್ಧಿ ಪಡಿಸುವ ಹಾಗೂ ರಾಮೋತ್ಸವ ಆಚರಿಸುವುದಾಗಿ ರಾಮನಗರ ಕ್ಷೇತ್ರದ ಜನರಿಗೆ ಭರವಸೆ ನೀಡಿದ್ದರು. ಅದರಂತೆ ರಾಮದೇವರ ಬೆಟ್ಟದಲ್ಲಿ ಪಟ್ಟಾಭಿರಾಮನ ದೇಗುಲಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಸ್ವಂತ ಖರ್ಚಿನಲ್ಲಿ ರೈಲಿಂಗ್ಸ್ ಅಳವಡಿಸಿದ್ದಾರೆ. ಅಲ್ಲದೆ, ಪ್ರವಾಸೋದ್ಯಮ ಇಲಾಖೆಯಿಂದ ಬೆಟ್ಟದ ಅಭಿವೃದ್ಧಿಗಾಗಿ 2 ಕೋಟಿ ರುಪಾಯಿ ಅನುದಾನ ಮಂಜೂರು ಮಾಡಿಸಿದ್ದಾರೆ.
ಧರ್ಮ ಮತ್ತು ಧಾರ್ಮಿಕ ಆಚರಣೆ ವಿಚಾರ ಅತ್ಯಂತ ಸೂಕ್ಷ್ಮವಾದ ಸಂಗತಿ. ಇದು ಗೊತ್ತಿದ್ದರೂ ಶಾಸಕ ಇಕ್ಬಾಲ್ ಹುಸೇನ್ ರವರು ರಾಮೋತ್ಸವ ಆಚರಣೆಯನ್ನು ಸವಾಲಾಗಿಯೇ ಸ್ವೀಕಾರ ಮಾಡಿದ್ದರು.ಇದೀಗ ಶಾಸಕರು ಶ್ರದ್ಧಾ ಭಕ್ತಿಯಿಂದ ರಾಮೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದು, ಅದರ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡಿದ್ದಾರೆ. ರಾಮೋತ್ಸವ ಯಶಸ್ವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶಾಸಕರೊಂದಿಗೆ ಎಲ್ಲಾ ಜಾತಿ, ಧರ್ಮದವರು (ಪಕ್ಷಭೇದ ಮರೆತು) ಕೈಜೋಡಿಸಿ ಭಾವೈಕ್ಯತೆ ಸಂದೇಶ ಸಾರುತ್ತಿದ್ದಾರೆ.
ಒಗ್ಗೂಡಿಸುತ್ತಿದೆ ಸಾಮರಸ್ಯದ ಪ್ರೀತಿ:ಕೋಮು ಸೂಕ್ಷ್ಮ ಪ್ರದೇಶವಾಗಿದ್ದರೂ ರಾಮನೂರಿನಲ್ಲಿ ಎಲ್ಲ ಜಾತಿ, ಧರ್ಮದವರು ತಮ್ಮ ಹಬ್ಬಗಳನ್ನು ಶಾಂತಿ ಮತ್ತು ಸಾಮರಸ್ಯದಿಂದ ಆಚರಿಸುತ್ತಾ ಬಂದಿದ್ದಾರೆ. ಅಂತೆಯೇ ರಾಮೋತ್ಸವದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ಹಾಗೂ ಇದರ ಸಿದ್ಧತಾ ಕಾರ್ಯಗಳಲ್ಲಿ ವಿವಿಧ ಜಾತಿ ಧರ್ಮದವರನ್ನು ತೊಡಗಿಸಿಕೊಳ್ಳುವಂತೆ ಮಾಡಿದೆ.
ರಂಗೋಲಿ ಸ್ಪರ್ಧೆ, ಸ್ಥಳದಲ್ಲೇ ಚಿತ್ರ ಬಿಡಿಸುವುದು, ವಾಯ್ಸ್ ಆಫ್ ರಾಮನಗರ, ಮಲ್ಲಕಂಬ ಪ್ರದರ್ಶನ, ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆ, ಮಡಿಕೇರಿಯ ಸ್ತಬ್ಧ ಚಿತ್ರಗಳೊಂದಿಗೆ ಗ್ರಾಮ ದೇವತೆಗಳ ಪ್ರದರ್ಶನ, ಮ್ಯಾರಥಾನ್ , ಪ್ರತಿಭಾ ಪುರಸ್ಕಾರ , ಷಟಲ್ , ಈಜು ಸ್ಪರ್ಧೆ, ಫ್ಯಾನ್ಸಿ ಡ್ರೆಸ್ , ದೇಹ ದಾರ್ಢ್ಯ ಸ್ಪರ್ಧೆಗಳಲ್ಲಿ ಚಿಕ್ಕ ಮಕ್ಕಳ ಆದಿಯಾಗಿ ವಯೋವೃದ್ಧರು ಜಾತಿ, ಧರ್ಮದ ತಾರತಮ್ಯ ಇಲ್ಲದೆ ತಮ್ಮೊಳಗಿನ ಪ್ರತಿಭೆ ಅನಾವರಣ ಮಾಡಲಿದ್ದಾರೆ.ಎಲೆಕ್ಟ್ರಿಷಿಯನ್, ಪ್ಲಂಬರ್, ಆಟೋರಿಕ್ಷಾ ಚಾಲಕ, ಪೌರ ಕಾರ್ಮಿಕರು ಹೀಗೆ ವಿವಿಧ ವೃತ್ತಿಯಲ್ಲಿ ತೊಡಗಿರುವವರು ತಮ್ಮ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಅಲ್ಲದೆ, ಕಲೆಯ ಮೇಲಿನ ಸಾಮರಸ್ಯದ ಪ್ರೀತಿ ಅವರನ್ನು ‘ರಾಮೋತ್ಸವ’ ಬ್ಯಾನರ್ ಅಡಿಯಲ್ಲಿ ಒಂದುಗೂಡಿಸುತ್ತಿದೆ.
ಸರ್ವ ಧರ್ಮಗಳ ಸಹಸ್ರಾರು ಜನರು ಸಾಕ್ಷಿಯಾಗಲಿರುವ ರಾಮೋತ್ಸವ ಕೋಮು ಸಾಮರಸ್ಯ ಮತ್ತು ಸೌಹಾರ್ದತೆಯ ಸಂದೇಶ ಸಾರಲಿದೆ.---- ಯಾವುದೇ ಉತ್ಸವ - ಹಬ್ಬದ ಆಚರಣೆಗಳು ಪರಸ್ಪರ ಸಾಮರಸ್ಯ ಮೂಡಿಸುವಂತಿರಬೇಕು. ಇತರ ಧರ್ಮದವರನ್ನು ಸಹೋದರರಂತೆ ಕಾಣುವ ಮನೋಭಾವನೆ ಹೆಚ್ಚಾಗಬೇಕು. ಎಲ್ಲ ಜಾತಿ, ಧರ್ಮದವರು ಪ್ರೀತಿ, ವಿಶ್ವಾಸದಿಂದ ಬದುಕುವ ನಿಟ್ಟಿನಲ್ಲಿ ರಾಮೋತ್ಸವದಂಥ ಆಚರಣೆಗಳು ಅವಶ್ಯಕವಾಗಿದೆ.
- ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.---
ಶ್ರೀರಾಮ ಭೇಟಿ ನೀಡಿದ ಕಾರಣ ರಾಮನಗರಕ್ಕೆ ರಾಮನ ಹೆಸರು ಬಂದಿತು. ಐತಿಹ್ಯವುಳ್ಳ ರಾಮನಗರ ಕ್ಷೇತ್ರವನ್ನು ಇಲ್ಲಿವರೆಗೆ ಪ್ರತಿನಿಧಿಸಿದ ಯಾವ ಹಿಂದೂ ನಾಯಕರಿಗೂ ಶ್ರೀ ರಾಮ ನೆನಪಿಗೆ ಬರಲೇ ಇಲ್ಲ. ರಾಮೋತ್ಸವ ಆಚರಿಸಲು ಅಲ್ಪ ಸಮುದಾಯಕ್ಕೆ ಸೇರಿದ ಇಕ್ಬಾಲ್ ಹುಸೇನ್ ಅವರೇ ಶಾಸಕರಾಗಿ ಬರಬೇಕಾಯಿತು. ಶ್ರೀ ರಾಮೋತ್ಸವ ಐತಿಹಾಸಿಕ ಕಾರ್ಯಕ್ರಮ. ಇದು ರಾಮ - ರಹೀಂನ ಬಾಂಧವ್ಯವನ್ನು ಸಾಕ್ಷೀಕರಿಸುತ್ತಿದೆ.- ಎಂ.ನಾರಾಯಣ, ಮಾಜಿ ನಿರ್ದೇಶಕರು, ರಾ -ಚ ನಗರಾಭಿವೃದ್ಧಿ ಪ್ರಾಧಿಕಾರ.