ಪಟ್ಟಣದಲ್ಲಿ ಒಂದೆಡೆ ಮಾಂಸದ ತ್ಯಾಜ್ಯಕ್ಕೆ ಮುತ್ತಿಕೊಳ್ಳುವ ಬೀದಿನಾಯಿಗಳ ಹಿಂಡು, ಮತ್ತೊಂದೆಡೆ ರಸ್ತೆ ಹಾಗೂ ಸಂತೆ ಮಾರುಕಟ್ಟೆಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ.
ರಸ್ತೆಗಿಳಿಯಲು ಜನರಿಗೆ ಭಯ; ಸಂತೆ ವ್ಯಾಪಾರಿಗಳಿಗೆ ಸಂಕಷ್ಟ, ವಾಹನ ಸಂಚಾರಕ್ಕೂ ಅಡ್ಡಿ
ಕನ್ನಡಪ್ರಭ ವಾರ್ತೆ ಕುಷ್ಟಗಿಪಟ್ಟಣದಲ್ಲಿ ಒಂದೆಡೆ ಮಾಂಸದ ತ್ಯಾಜ್ಯಕ್ಕೆ ಮುತ್ತಿಕೊಳ್ಳುವ ಬೀದಿನಾಯಿಗಳ ಹಿಂಡು, ಮತ್ತೊಂದೆಡೆ ರಸ್ತೆ ಹಾಗೂ ಸಂತೆ ಮಾರುಕಟ್ಟೆಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ.
ನಾಯಿಗಳ ಭಯದಿಂದ ಜನರು ಆತಂಕದಲ್ಲೇ ಸಂಚರಿಸುತ್ತಿದ್ದರೆ, ದನಗಳ ಉಪಟಳದಿಂದ ವ್ಯಾಪಾರಿಗಳು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಸಮಸ್ಯೆಗಳಿಗೆ ಪುರಸಭೆ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಆಗ್ರಹ ಕೇಳಿಬಂದಿದೆ.ನಾಯಿಗಳ ಹಿಂಡು ಕಂಡರೆ ಜನರಲ್ಲಿ ಆತಂಕ:
ಪಟ್ಟಣದ ಪುರಸಭೆ ಮುಂಭಾಗ, ಮಾಂಸದ ಮಾರುಕಟ್ಟೆ, ಸಂತೆ ಬಜಾರ್, ಬಸ್ ನಿಲ್ದಾಣ ಹಾಗೂ ಪ್ರಮುಖ ರಸ್ತೆಗಳಲ್ಲಿ 8ರಿಂದ 10 ನಾಯಿಗಳ ಗುಂಪುಗಳು ಕಂಡುಬರುತ್ತಿವೆ. ಮಾಂಸದ ಅಂಗಡಿಗಳು ಮತ್ತು ಮಾಂಸಾಹಾರಿ ಹೋಟೆಲ್ಗಳ ಸುತ್ತಮುತ್ತ ನಾಯಿಗಳ ಹಾವಳಿ ಹೆಚ್ಚಾಗಿದೆ. ರಸ್ತೆಯ ಮಧ್ಯದಲ್ಲೇ ಮಲಗುವ ನಾಯಿಗಳು ವಾಹನಗಳು ಬರುತ್ತಿದ್ದಂತೆ ಏಕಾಏಕಿ ಅಡ್ಡಬರುವುದರ ಜತೆಗೆ ಜನರನ್ನು ಬೆನ್ನಟ್ಟುತ್ತಿವೆ, ಇಂತಹ ನಾಯಿಗಳಿಂದ ಜನರು ತೊಂದರೆ ಅನುಭವಿಸಿದ್ದಾರೆ.ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಮಕ್ಕಳು ಹಾಗೂ ವೃದ್ಧರು ಆತಂಕದಲ್ಲೇ ಓಡಾಡುವಂತಾಗಿದೆ. ಬೆಳಗಿನ ಜಾವ ಪತ್ರಿಕೆ ಹಂಚುವವರು, ಹಾಲು ವಿತರಕರು ಕೂಡ ನಾಯಿಗಳ ಭಯ ಎದುರಿಸುತ್ತಿದ್ದಾರೆ. ಮಾಂಸದ ತ್ಯಾಜ್ಯ ಹಾಗೂ ಕೋಳಿ ಪುಕ್ಕಗಳನ್ನು ರಸ್ತೆ ಬದಿಯಲ್ಲಿ ಸುರಿಯುವುದರಿಂದ ನಾಯಿಗಳು ಗುಂಪುಗೂಡುತ್ತಿವೆ ಎಂಬುದು ಸ್ಥಳೀಯರ ಆರೋಪ.
ಸಂತೆ ಮಾರುಕಟ್ಟೆಯಲ್ಲಿ ದನಗಳದ್ದೇ ಉಪಟಳ:ಬೀದಿನಾಯಿಗಳ ಹಾವಳಿಯ ಜತೆಗೆ ಬಿಡಾಡಿ ದನಗಳ ಸಂಚಾರವೂ ಪಟ್ಟಣದ ಜನರಿಗೆ ತಲೆನೋವಾಗಿದೆ. ವಿಶೇಷವಾಗಿ ಸಂತೆ ಮಾರುಕಟ್ಟೆಯಲ್ಲಿ ದನಗಳು ಎಲ್ಲೆಂದರಲ್ಲಿ ಸಂಚರಿಸುವುದರಿಂದ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ವ್ಯಾಪಾರಕ್ಕೆ ತಂದ ತರಕಾರಿ ಹಾಗೂ ಇತರ ವಸ್ತುಗಳ ಬಳಿ ದನಗಳು ಬರುತ್ತಿರುವುದರಿಂದ ವ್ಯಾಪಾರ ನಡೆಸುವುದೇ ಸವಾಲಾಗಿದೆ. ದನಗಳಿಂದ ವಸ್ತುಗಳು ಹಾಳಾಗುವ ಆತಂಕವೂ ವ್ಯಾಪಾರಿಗಳಲ್ಲಿದೆ.
ಪ್ರಮುಖ ರಸ್ತೆಗಳಲ್ಲಿ ದನಗಳು ಗುಂಪಾಗಿ ನಿಲ್ಲುವುದು ಹಾಗೂ ವಾಹನಗಳ ಅಡ್ಡ ಬರುವುದರಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಜನನಿಬಿಡ ಪ್ರದೇಶಗಳಲ್ಲಿ ದನಗಳು ಏಕಾಏಕಿ ರಸ್ತೆಗೆ ಬರುವುದರಿಂದ ಅಪಘಾತದ ಭೀತಿ ಎದುರಾಗಿದೆ. ದನಗಳನ್ನು ಹಿಡಿದು ಗೋಶಾಲೆಗೆ ಸ್ಥಳಾಂತರಿಸುವ ಮೂಲಕ ಸಮಸ್ಯೆ ನಿಯಂತ್ರಿಸಬೇಕು ಎಂದು ಕುಷ್ಟಗಿ ಪಟ್ಟಣದ ನಿವಾಸಿ ಮುತ್ತುರಾಜ ಕಟ್ಟಿಮನಿ ಒತ್ತಾಯಿಸಿದ್ದಾರೆ.