ಬಂಡಾಯ ನೆಲದ ಜನರಿಗೆ ವರ್ಷ ಪೂರ್ತಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಕೆಂಪು ಕೆರೆಯನ್ನು ಬಳಕೆ ಮಾಡದ್ದರಿಂದ ಈ ಕೆರೆಯಲ್ಲಿ ಈಗ ಜಾಲಿ ಕಂಟಿ ಬೆಳೆದು, ವಿಷ ಜಂತುಗಳು ಓಡಾಡುತ್ತಿವೆ.
ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ 56 ಎಕರೆ ವಿಸ್ತಾರದ ಕೆರೆ ಹಾಳು ಬಿದ್ದಿದೆ
ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದಬಂಡಾಯ ನೆಲದ ಜನರಿಗೆ ವರ್ಷ ಪೂರ್ತಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಕೆಂಪು ಕೆರೆಯನ್ನು ಬಳಕೆ ಮಾಡದ್ದರಿಂದ ಈ ಕೆರೆಯಲ್ಲಿ ಈಗ ಜಾಲಿ ಕಂಟಿ ಬೆಳೆದು, ವಿಷ ಜಂತುಗಳು ಓಡಾಡುತ್ತಿವೆ.
ಬಯಲುಸೀಮೆ ನಾಡಿನ ವ್ಯಾಪ್ತಿಗೆ ಬರುವ ನರಗುಂದಕ್ಕೆ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಿಸಬೇಕಾಗಿದೆ. ಈ ಸಮಸ್ಯೆ ಅರಿತುಕೊಂಡು ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಈ ಪಟ್ಟಣದ ನೀರಿನ ಅಭಾವದ ಕುರಿತು ಮನವರಿಕೆ ಮಾಡಿ ಪುರಸಭೆ ವ್ಯಾಪ್ತಿಗೆ ಹೊಂದಿರುವ ಗುಡ್ಡದ ಪಕ್ಕದಲ್ಲಿ 56 ಎಕರೆ ಜಮೀನಿನಲ್ಲಿ ಸರ್ಕಾರದ ₹50 ಲಕ್ಷ ಅನುದಾನ ತಂದು ವಿಶಾಲವಾದ ಕೆರೆ ನಿರ್ಮಾಣ ಮಾಡಿ ಪಟ್ಟಣದ ಜನತೆಗೆ ಈ ಕೆಂಪು ಕೆರೆಯಿಂದ ಕುಡಿಯುವ ನೀರು ಪೂರೈಕೆಗೆ ಅನುಕೂಲ ಮಾಡಿದ್ದರು. ಅಂತರ್ಜಲ ಮಟ್ಟ ಕುಸಿತದಿಂದ ಈ ಕೆರೆ ಪಾಳು ಬಿದ್ದಿದೆ.ಈ ಭಾಗದಲ್ಲಿ 2007 ಮತ್ತು 2009ರಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯಿತು. ಪಟ್ಟಣದಲ್ಲಿ ಮನೆ ಮತ್ತು ಹಗೆಗಳು ಕುಸಿತ ಪ್ರಾರಂಭವಾಗಿದ್ದರಿಂದ ಜನರು ಮನೆಯಲ್ಲಿ ಜೀವಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಯಿತು. ಪುರಸಭೆಯವರು ಜಲ ತಜ್ಞರನ್ನು ಕರೆಯಿಸಿದರು. ಅವರು ಪಟ್ಟಣದ ಹಲವಾರು ಪ್ರದೇಶಗಳನ್ನು ಪರಿಶೀಲಿಸಿದ ನಂತರ, ಎತ್ತರ ಪ್ರದೇಶದಲ್ಲಿ ಕೆಂಪು ಕೆರೆ ಇರುವುದರಿಂದ ಅಂತರ್ಜಲ ಹೆಚ್ಚಿ ಮನೆ ಮತ್ತು ಹಗೆಗಳು ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಿದ್ದರು. ಅಂದನಿಂದ ಈವರೆಗೆ ಕೆರೆ ನೀರು ಸಂಗ್ರಹ ನಿಲ್ಲಿಸಿದ್ದರಿಂದ ಸದ್ಯ ಈ ಕೆರೆಯಲ್ಲಿ ಜಾಲಿ ಕಂಟಿ ಬೆಳೆದು, ವಿಷ ಜಂತುಗಳು ಓಡಾಡುತ್ತಿವೆ.
ತುಕ್ಕು ಹಿಡಿದ ಯಂತ್ರಗಳು:ಈ ಕೆರೆಯಿಂದ ನೀರು ಎತ್ತುವ ಯಂತ್ರಗಳು ಮತ್ತು ನೀರು ಶುದ್ಧೀಕರಣ ಮಾಡುವ ಲಕ್ಷಾಂತರ ವೆಚ್ಚದ ಯಂತ್ರಗಳು ತುಕ್ಕು ಹಿಡಿದು ಹೋಗಿವೆ.
ಸುಮಾರು 27ಕಿಮೀ ದೂರದಲ್ಲಿರುವ ಮಲಪ್ರಭಾ ಜಲಾಶಯದಿಂದ ₹60 ಕೋಟಿ ಅನುದಾನದಲ್ಲಿ ಪೈಪ್ ಲೈನ್ ಮತ್ತು 17 ಬೋರ್‌ಗಳ ಮೂಲಕ ಪಟ್ಟಣದ 39162 ಮನೆಗಳ ನಲ್ಲಿಗಳಿಗೆ ಸದ್ಯ ಪುರಸಭೆಯವರು ನೀರು ಪೂರೈಕೆ ಮಾಡುತ್ತಿದ್ದಾರೆ. ಜಲಾಶಯದಿಂದ ನೀರು ಪೂರೈಕೆ ಶಾಶ್ವತ ಅಲ್ಲ, ಆದ್ದರಿಂದ ಪುರಸಭೆಯವರು ಇನ್ನೊಮ್ಮೆ ಜಲ ತಜ್ಞರನ್ನು ಕರೆಸಿ ಅಂತರ್ಜಲ ಪರಿಶೀಲನೆ ಮಾಡಿಸಿ ಕೆರೆಯನ್ನು ಪುನಾಭಿವೃದ್ಧಿ ಮಾಡಬೇಕೆಂದು ಕರವೇ ತಾಲೂಕಾ ಅಧ್ಯಕ್ಷ ನಬಿಸಾಬ ಕಿಲ್ಲೇದಾರ ಒತ್ತಾಯಿಸಿದ್ದಾರೆ.ಕೆಂಪು ಕೆರೆಯಲ್ಲಿರುವ ಜಾಲಿ ಕಂಟಿ ತೆಗೆದು ಸ್ವಚ್ಛತೆ ಮಾಡಿ ಶಾಸಕರು ಮತ್ತು ನಗರದ ಜನತೆಯೊಂದಿಗೆ ಚರ್ಚಿಸಿ ಕೆರೆ ತುಂಬಿಸುವುದರ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಪುರಸಭೆ ಅಧಿಕಾರಿ ಸುಭಾಸ ಖುದನಾಪೂರ ತಿಳಿಸಿದ್ದಾರೆ.