ಸಾರಾಂಶ
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಮರಿಯಮ್ಮನಹಳ್ಳಿ ಪಟ್ಟಣದ ಆರಾಧ್ಯ ದೇವತೆ ಹಾಗೂ ಗ್ರಾಮ ದೇವತೆ ರಾಂಪುರದ ದುರ್ಗಾದೇವಿಯ ಜಾತ್ರಾ ಮಹೋತ್ಸವವು ಅಂತ್ಯಂತ ಶ್ರದ್ಧಾಭಕ್ತಿಯಿಂದ ಮತ್ತು ಸಡಗರದೊಂದಿಗೆ ಮಂಗಳವಾರ ಆರಂಭಗೊಂಡಿತು.ಮಂಗಳವಾರ ಜಾತ್ರೆ ಮಹೋತ್ಸವದ ಅಂಗವಾಗಿ ರಾಂಪುರದ ದುರ್ಗಾದೇವಿಗೆ ವಿವಿಧ ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ವಿಶೇಷ ಪೂಜೆ ನಡೆದವು. ಶ್ರೀದುರ್ಗಾದೇವಿಗೆ ಮತ್ತು ಹುಗ್ಗೆಮ್ಮದೇವಿಗೆ ಭಕ್ತರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ ವಿಶೇಷ ಪೂಜೆಗಳು ಸೇರಿದಂತೆ ದೇವಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತರು ತಮ್ಮ ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಕ್ಕೆ ತೆರಳಿ ದುರ್ಗಾದೇವಿಗೆ ಹೂವು, ಹಣ್ಣು, ಕಾಯಿಯನ್ನು ಅರ್ಪಿಸಿ ದೇವರ ದರ್ಶನ ಪಡೆದುಕೊಂಡು ಧನ್ಯತೆ ಮೆರೆದರು.ಹರಕೆ ಹೊತ್ತುಕೊಂಡ ಕೆಲ ಭಕ್ತರು ದೇವಿಗೆ ದೀಡ್ ನಮಸ್ಕಾರ ಸೇವೆ ಸಲ್ಲಿಸಿದರು. ಮರಿಯಮ್ಮನಹಳ್ಳಿ ಹಾಗೂ ಹೋಬಳಿಯ ಗ್ರಾಮದ ಜನರು ಮತ್ತು ಮರಿಯಮ್ಮನಹಳ್ಳಿ ತಾಂಡದ ಲಂಬಾಣಿ ಸಮುದಾಯದವರು ವಿವಿಧ ಗುಂಪುಗಳಾಗಿ ತಮಟೆ ಬಾರಿಸುತ್ತಾ ಸಾಲು ಸಾಲಾಗಿ ದೇವಸ್ಥಾನಕ್ಕೆ ತೆರಳಿ ಭಕ್ತಿಯ ಸೇವೆ ಸಲ್ಲಿಸಿದರು.
ದುರ್ಗಾದೇವಿಯು ಗಂಗೆ ಪೂಜೆಗೆ ಉತ್ಸವದೊಂದಿಗೆ ಡೊಳ್ಳು ವಾದ್ಯಗಳೊಂದಿಗೆ ಗಂಗೆ ಪೂಜೆಗೆ ಹೋಗಿ ಬಂದು, ನಂತರ ದೇವಿಗೆ ವಿಶೇಷ ಮಹಾಮಂಗಳಾರತಿ ನಡೆಸಲಾಯಿತು.ಮರಿಯಮ್ಮನಹಳ್ಳಿ ಮತ್ತು ಮರಿಯಮ್ಮನಹಳ್ಳಿ ತಾಂಡಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಜಾತ್ರಾ ಮಹೋತ್ಸವ ಅಂಗವಾಗಿ ಪಟ್ಟಣದ ನಾರಾಯಣದೇವರ ಕೆರೆ ವೃತ್ತದಿಂದ ಹಿಂಡಿದು ದುರ್ಗಾದೇವಿ ದೇವಸ್ಥಾನದವರೆಗೆ ವಿಶೇಷ ವಿದ್ಯುತ್ ದೀಪಾಲಂಕಾರ ಆಕರ್ಷಕವಾಗಿತ್ತು.ಬುಧವಾರ ಶ್ರೀರಾಂಪುರ ದುರ್ಗಾದೇವಿಗೆ ವಿಶೇಷ ಹೂವಿನ ಅಲಂಕಾರ, ವಿವಿಧ ಪೂಜಾ ಕಾರ್ಯಕ್ರಮ ನಡೆಸಲಾಗುವುದು. ಮಧ್ಯಾಹ್ನ ಶ್ರೀದೇವಿಯ ಪಟ ಹರಾಜು, ಶ್ರೀದೇವಿ ಕೊರಳನಲ್ಲಿರುವ ಹೂವಿನ ಹಾರ ಹರಾಜು ನಡೆಯಲಿದೆ. ರಾತ್ರಿ ಶ್ರೀದೇವಿಯು ಗಂಗೆ ಪೂಜೆಗೆ ಹೋಗಿ ಬಂದು ಅಗ್ನಿ ಕುಂಡ ಮತ್ತು ಸಿಡಿಮದ್ದು ಕಾರ್ಯಕ್ರಮ ನಡೆಯಲಿದೆ.