ಸಾರಾಂಶ
ಕನ್ನಡಪ್ರಭ ವಾರ್ತೆ, ಹನೂರು
ತಾಲೂಕಿನ ರಾಮಪುರ ಸರ್ಕಾರಿ ಆಸ್ಪತ್ರೆಗೆ ವೈದ್ಯಾಧಿಕಾರಿ, ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ವೈದ್ಯಾಧಿಕಾರಿ ಚಿದಂಬರ್ ಅವರಿಗೆ ಮನವಿ ಸಲ್ಲಿಸಿತು.ದಿನ್ನಳ್ಳಿ ಸರ್ಕಲ್ ನಿಂದ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ಮೂಲಕ ಸರ್ಕಾರಿ ಆಸ್ಪತ್ರೆ ಮುಂಭಾಗ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಅಧ್ಯಕ್ಷತೆಯಲ್ಲಿ ಜಮಾವಣೆಗೊಂಡು ರೈತರು ರಾಮಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ನೇಮಕ ಹಾಗೂ ಸಮರ್ಪಕ ಸೇವೆಯನ್ನು ನೀಡುವಂತೆ ಒತ್ತಾಯಿಸಿದರು.
ರಾಮಪುರ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಒಬ್ಬರೇ ವೈದ್ಯರು ಸಹ ನಿಗದಿತ ಸಮಯಕ್ಕೆ ಬಾರದೆ ಈ ಭಾಗದ ಗುಡ್ಡಗಾಡು ಪ್ರದೇಶದ ವಿವಿಧ ಗ್ರಾಮಗಳಿಂದ ಬರುವ ರೋಗಿಗಳಿಗೆ ಹಾಗೂ ವಯಸ್ಸಾದ ಹಿರಿಯರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ. ಈ ಆಸ್ಪತ್ರೆಯಲ್ಲಿ ಮಕ್ಕಳು, ಮಹಿಳಾ ತಜ್ಞರು ಇಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ದರ ನೀಡಿ ಚಿಕಿತ್ಸೆ ಪಡೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ರಾಮಪುರ ಸರ್ಕಾರಿ ಆಸ್ಪತ್ರೆಗೆ ನುರಿತ ವೈದ್ಯಾಧಿಕಾರಿ, ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ರಾಮಪುರ ಆಸ್ಪತ್ರೆಯಲ್ಲಿ ನಿಗದಿತ ಸಮಯದಲ್ಲಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಸಿಗದೆ ಈ ಭಾಗದ ಜನತೆ ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಈ ಭಾಗದ ಜನತೆ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಸಿಗದೇ ಪರದಾಡುವಂಥಾಗಿದೆ. ಕೂಡಲೇ ಆಸ್ಪತ್ರೆಯಲ್ಲಿ ಇಸಿಜಿ ಮತ್ತು ಎಕ್ಸ್ ರೇ ಹಾಗೂ ಮಕ್ಕಳ ತಜ್ಞರು ಹಾಗೂ ಮಹಿಳಾ ತಜ್ಞರು ದಂತ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ವೈದ್ಯಾಧಿಕಾರಿ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ವೈದ್ಯಾಧಿಕಾರಿ ಚಿದಂಬರಂ ಭೇಟಿ ನೀಡಿ ಮಾತನಾಡಿ, ಸರ್ಕಾರಕ್ಕೆ ರಾಮಪುರ ಆಸ್ಪತ್ರೆಗೆ ಬೇಕಾಗಿರುವ ವೈದ್ಯಾಧಿಕಾರಿಯನ್ನು ನೇಮಕ ಮಾಡಲು ನಿಯಮಾವಳಿ ಪ್ರಕಾರ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಮುಂದಿನ 15 ದಿನದಲ್ಲಿ ಆಸ್ಪತ್ರೆಗೆ ಬೇಕಾಗಿರುವ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಾತ್ಕಾಲಿಕವಾಗಿ ವಾರಕ್ಕೆ ಒಮ್ಮೆ ಬೇಕಾಗಿರುವ ನುರಿತ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಮೊದಲ ಆದ್ಯತೆಯ ಮೂಲಕ ವೈದ್ಯಾಧಿಕಾರಿ, ಸಿಬ್ಬಂದಿಯನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕೊಳ್ಳೇಗಾಲ ತಾಲೂಕು ಹಿರಿಯ ರೈತ ಮುಖಂಡ ರವ ನಾಯ್ಡು, ಪಳನಿ ಸ್ವಾಮಿ ಪೊಂಗುಡಿ, ಕನಕಮ್ಮ, ಕೂಡ್ಲೂರು ವೆಂಕಟೇಶ್ ಕುಮಾರ್, ಪಳನಿಸ್ವಾಮಿ ಇದ್ದರು.