ಸಾರಾಂಶ
ಜಿಲ್ಲೆಯ ಆರು ತಾಲೂಕುಗಳಲ್ಲೂ ಮುಸ್ಲಿಮರು ಹಬ್ಬ ಆಚರಿಸಿದರು. ಕೇರಳದಲ್ಲಿ ಚಂದ್ರಕಂಡ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಬುಧವಾರವೇ ಹಬ್ಬ ಆಚರಿಸಲಾಗಿತ್ತು.
ಹೊಸಪೇಟೆ: ವಿಜಯನಗರ ಜಿಲ್ಲೆಯಾದ್ಯಂತ ಮುಸ್ಲಿಮರು ಗುರುವಾರ ಪವಿತ್ರ ರಂಜಾನ್ (ಈದ್ ಉಲ್ ಫಿತರ್) ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯ ವಿವಿಧೆಡೆಯ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಆಲಂಗಿಸುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಜಿಲ್ಲೆಯ ಆರು ತಾಲೂಕುಗಳಲ್ಲೂ ಮುಸ್ಲಿಮರು ಹಬ್ಬ ಆಚರಿಸಿದರು. ಕೇರಳದಲ್ಲಿ ಚಂದ್ರಕಂಡ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಬುಧವಾರವೇ ಹಬ್ಬ ಆಚರಿಸಲಾಗಿತ್ತು. ಆದರೆ, ಈ ಭಾಗದಲ್ಲಿ ಬುಧವಾರ ಚಂದ್ರದರ್ಶನ ಹಿನ್ನೆಲೆಯಲ್ಲಿ ಗುರುವಾರ ಹಬ್ಬ ಆಚರಣೆ ಮಾಡಲಾಯಿತು.ಹೊಸಪೇಟೆಯಲ್ಲಿ ಆಚರಣೆ:
ನಗರದ ಆರ್ ಟಿಒ ಆಫೀಸ್ ಈದ್ಗಾ ಮೈದಾನ, ಬಸ್ ಡಿಪೋ ಈದ್ಗಾ ಮೈದಾನ, ಕಾರಿಗನೂರು ಈದ್ಗಾ ಮೈದಾನ, ಟಿಬಿ ಡ್ಯಾಂ ಈದ್ಗಾ ಮೈದಾನ, ಅಂಬೇಡ್ಕರ್ ವೃತ್ತದ ಬಳಿಯ ಗುಲಾಬ್ ಶಾವಲಿ ದರ್ಗಾದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ನಗರದ ಅಂಬೇಡ್ಕರ್ ವೃತ್ತದ ಬಳಿಯ ಗುಲಾಬ್ ಶಾವಲಿ ದರ್ಗಾದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಧರ್ಮಗುರು ಹಾಫಿಜ್ ಅಬ್ದುಲ್ ಸಮದ್ ನಮಾಜ್ ನೆರವೇರಿಸಿಕೊಟ್ಟರು. ನಂತರ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ಅಧ್ಯಕ್ಷ ಎಚ್.ಎನ್. ಮಹಮ್ಮದ ಇಮಾಮ್ ನಿಯಾಜಿ ಪ್ರಾರ್ಥನಾ ಸ್ಥಳದಲ್ಲಿ ಉಪಸ್ಥಿತರಿದ್ದ ಹಿಂದೂ ಸಮಾಜದ ಮುಖಂಡರಿಗೆ ಖರ್ಜೂರ ಹಾಗೂ ಶರಬತ್ ನೀಡಿ ಪರಸ್ಪರ ಆಲಿಂಗಿಸಿಕೊಳ್ಳುವ ಮೂಲಕ ಸೌಹಾರ್ದ ಮೆರೆದರು.
ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ಅಧ್ಯಕ್ಷ ಎಚ್.ಎನ್. ಮಹಮ್ಮದ ಇಮಾಮ್ ನಿಯಾಜಿ ಮಾತನಾಡಿ, ಎಲ್ಲ ಮುಸ್ಲಿಮರು 30 ದಿನಗಳ ಉಪವಾಸ ಪೂರೈಸಿದ ನಂತರ ಇಂದಿನಿಂದ ಮುಂದಿನ ವರ್ಷದ ರಂಜಾನ್ ಹಬ್ಬದವರೆಗೂ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾ ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ಮಾಡಬಾರದು ಎಂಬ ಪ್ರತಿಜ್ಞೆ ಮಾಡುತ್ತಾ ಈ ಒಂದು ರಂಜಾನ್ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಭಗವಂತನಿಗೆ ಸಲ್ಲಿಸಿರುತ್ತೇವೆ ಎಂದರು.ಈ ವರ್ಷದ ರಂಜಾನ್ ಪ್ರತಿಯೊಬ್ಬರಿಗೂ ಸುಖ, ಶಾಂತಿ, ನೆಮ್ಮದಿ ಸೌಹಾರ್ದ ನೀಡಿ ಪ್ರೀತಿ, ಪ್ರೇಮ-ವಾತ್ಸಲ್ಯದಿಂದ ಸಮೃದ್ಧಿಗೊಂಡು ಉತ್ತಮ ಆರೋಗ್ಯ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುವೆ ಎಂದರು.
ಕಮಿಟಿ ಉಪಾಧ್ಯಕ್ಷ ಎಂ.ಫಿರೋಜ್ ಖಾನ್, ಕಾರ್ಯದರ್ಶಿ, ಎಂ.ಡಿ. ಅಬೂಬಕ್ಕರ್, ಖಜಾಂಚಿ ಜಿ.ಅನ್ಸರ್ ಬಾಷಾ, ಸಹ ಕಾರ್ಯದರ್ಶಿ ಡಾ.ಎಂ.ಡಿ. ದುರ್ವೇಶ್ ಮೈನುದ್ದಿನ್, ಸದಸ್ಯರಾದ ಕೋತ್ವಾಲ್ ಮೊಹಮ್ಮದ್ ಮೋಸಿನ್, ಸದ್ದಾಮ್ ಮತ್ತು ಎಲ್.ಗುಲಾಮ್ ರಸೂಲ್, ಅಬ್ದುಲ್ ಖಾದರ್, ಖದೀರ್, ಮುಖಂಡರಾದ ಖದೀರ್, ಕೆ.ಬಡಾವಲಿ. ವಾಹೀದ್, ನಾಸೀರ್, ಖಾನ್‌ಸಾಬ್, ರಜಾಕ್, ಹೊಸಪೇಟೆ ಗ್ರಾಮ ದೇವತೆ ಊರಮ್ಮದೇವಿ ಟಸ್ಸ್ಟ್‌ನ ಅಧ್ಯಕ್ಷ ಬಂಡೆ ಶ್ರೀನಿವಾಸ್, ಉಪಾಧ್ಯಕ್ಷ ಎಸ್. ಗಾಳೆಪ್ಪ, ಸಮಾಜದ ಮುಖಂಡರಾದ ಸಿದ್ದಾರ್ಥ ಸಿಂಗ್, ಸಾಲಿ ಸಿದ್ದಯ್ಯಸ್ವಾಮಿ, ಶರಣುಸ್ವಾಮಿ, ಆರ್.ಕೊಟ್ರೇಶ್, ರವಿಶಂಕರ್, ಪಿ.ವೆಂಕಟೇಶ್, ಗಾಳೆಪ್ಪ, ಹಾನಗಲ್ ವೆಂಕೋಬಣ್ಣ, ಮರಡಿ ರಾಮಣ್ಣ, ಸತ್ಯ ನಾರಾಯಣ, ವಿಜಯಕುಮಾರ್, ತಳವಾರ್ ಕೇರಿ ಹನುಮಪ್ಪ, ವಾಸಪ್ಪ, ಬಂದಿ ನಾರಾಯಣ, ನೀಲಕಂಠ, ಕಿಚಡಿ ಶ್ರೀನಿವಾಸ, ವಿಜಯಕುಮಾರ್ ಮತ್ತಿತರರಿದ್ದರು.