ಜಿಲ್ಲಾದ್ಯಂತ ಸಂಭ್ರಮದ ರಂಜಾನ್

| Published : Apr 12 2024, 01:04 AM IST

ಸಾರಾಂಶ

ರಾಮನಗರ: ಮನುಷ್ಯನ ಮನಸ್ಸಿನಲ್ಲಿ ಹುದುಗಿರುವ ದ್ವೇಷ ಭಾವನೆಯನ್ನು ಕಡಿಮೆ ಮಾಡಿ, ಪ್ರೀತಿ ಹುಟ್ಟಿಸುವ ಪವಿತ್ರ ರಂಜಾನ್ ಹಬ್ಬವನ್ನು ರೇಷ್ಮೆ ನಗರಿ ರಾಮನಗರದಲ್ಲಿ ಗುರುವಾರ ಮುಸ್ಲಿಂ ಬಾಂಧವರು ಶ್ರದ್ಧಾ, ಭಕ್ತಿ, ಸಡಗರದಿಂದ ಆಚರಿಸಿದರು.

ರಾಮನಗರ: ಮನುಷ್ಯನ ಮನಸ್ಸಿನಲ್ಲಿ ಹುದುಗಿರುವ ದ್ವೇಷ ಭಾವನೆಯನ್ನು ಕಡಿಮೆ ಮಾಡಿ, ಪ್ರೀತಿ ಹುಟ್ಟಿಸುವ ಪವಿತ್ರ ರಂಜಾನ್ ಹಬ್ಬವನ್ನು ರೇಷ್ಮೆ ನಗರಿ ರಾಮನಗರದಲ್ಲಿ ಗುರುವಾರ ಮುಸ್ಲಿಂ ಬಾಂಧವರು ಶ್ರದ್ಧಾ, ಭಕ್ತಿ, ಸಡಗರದಿಂದ ಆಚರಿಸಿದರು.

ನಗರದ ಈದ್ಗಾ ಮೈದಾನಕ್ಕೆ ತಂಡೋಪತಂಡವಾಗಿ ಆಗಮಿಸಿದ ಸಾವಿರಾರು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನದಲ್ಲಿ ಸ್ಥಳಾವಕಾಶದ ಕೊರತೆಯಿಂದ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಯೂ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.

ಎಲ್ಲ ಧರ್ಮದಲ್ಲಿಯೂ ಉಪವಾಸಕ್ಕೆ ಪ್ರಾಮುಖ್ಯತೆ, ವಿಶೇಷತೆ ಇದೆ. ಉಪವಾಸ ಆರೋಗ್ಯಕ್ಕೆ ಒಳ್ಳೆಯದು ಮತ್ತು ಸರಳ ಜೀವನವನ್ನು ಉತ್ತೇಜಿಸುತ್ತದೆ. ಮನುಷ್ಯನ ಅಂತರ ಶುದ್ಧಿಗೆ ಹಾಗೂ ಪಾಪ ಪರಿಹಾರಕ್ಕೆ ಉಪವಾಸ ಉತ್ತಮ ಮಾರ್ಗ. ಹೀಗಾಗಿ ರಂಜಾನ್ ಮಾಸದಲ್ಲಿ ಪ್ರತಿಯೊಬ್ಬ ಮುಸ್ಲಿಮರು ಬಡವ-ಬಲ್ಲಿದ ಎನ್ನದೆ ಉಪವಾಸ ಆಚರಿಸುತ್ತಾರೆ.

ಮುಸಲ್ಮಾನ ಬಂಧುಗಳು ಉಪವಾಸ ಅಂತ್ಯಗೊಳಿಸಿ ರಂಜಾನ್ ಆಚರಿಸಿದರು. ಹೊಸ ಉಡುಗೆ ತೊಟ್ಟು, ಪರಸ್ಪರ ಶುಭಾಶಯ ವಿನಿಮಯಿಕೊಂಡರು. ಚಿಣ್ಣರೂ ಕೂಡ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು.

ರಂಜಾನ್ ಪ್ರಯುಕ್ತ ನಡೆದ ಸಾಮೂಹಿಕ ನಮಾಜ್ ವೇಳೆ ಮುಸಲ್ಮಾನರು ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥನೆ ಮಾಡಿದರು. ಯಾವುದೇ ಅಹಿತಕರ ಘಟನೆಗಳು ನಡೆಯುದಂತೆ ಪೊಲೀಸರು ವಿಶೇಷ ಬಂದೋಬಸ್ತ್ ಕೈಗೊಂಡಿದ್ದರು. ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿಯೂ ಪ್ರಾರ್ಥನೆ ಸಲ್ಲಿಸುತ್ತಿದ್ದ ಕಾರಣ ವಾಹನಗಳನ್ನು ಪರ್ಯಾಯ ರಸ್ತೆಗಳ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದ ಮೊಕ್ಕಾಂ ಹೂಡಿ ಬಂದೋಬಸ್ತ್ ಕೈಗೊಂಡರು.

ಮಾಗಡಿ ವರದಿ:

ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಮರು ಸಡಗರ ಸಂಭ್ರಮದಿಂದ ಆಚರಿಸಿದರು. ಮಾಗಡಿ ಪಟ್ಟಣದ ಕಲ್ಯಾಗೇಟ ಬಳಿ ದರ್ಗಾದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಪಟ್ಟಣದ ಹೊಸ ಮಸೀದಿ ಮತ್ತು ಹಳೇ ಮಸೀದಿ ಮೊಹಲ್ಲಾ, ಹೊಸಪೇಟೆ, ಹಂಚೀಕುಪ್ಪೆ, ವಿ.ಜಿ.ದೊಡ್ಡಿ, ಸಂಕೀಘಟ್ಟ, ಹೊಸಲಾಯ, ಹಳೇಲಾಯ, ತಿಪ್ಪಸಂದ್ರ, ಬಿಸ್ಕೂರು, ಕುದೂರು, ಸುಗ್ಗನಹಳ್ಳಿ, ಮಾಯಸಂದ್ರ, ಮಾಡಬಾಳ್, ಆಗಲಕೋಟೆ, ಚಕ್ರಭಾವಿ, ಮೋಟಗಾನಹಳ್ಳಿ, ಸೋಲೂರು ಸೇರಿದಂತೆ ವಿವಿಧೆಡೆ ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕನಕಪುರ ವರದಿ:

ಪವಿತ್ರ ಈದ್-ಉಲ ಫಿತರ್ ಹಬ್ಬವನ್ನು ಕನಕಪುರದಲ್ಲಿ ಮುಸಲ್ಮಾನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಒಂದು ತಿಂಗಳ ಕಾಲ ಉಪವಾಸ ವ್ರತ ಮುಗಿಸಿ ನಂತರ ಚಂದ್ರದರ್ಶನ ಮಾಡಿದ ಮುಸ್ಲಿಮರು ಇಂದು ಬೆಳಗ್ಗೆ ಕನಕಪುರದ ನಾನಾ ಭಾಗಗಳಲ್ಲಿನ ಮಸೀದಿಗಳಿಂದ ಮೆರವಣಿಗೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ತೆರಳಿದರು.

ಇಲ್ಲಿನ ನಮಾಜಿ ಬೋರೆಯ ಈದ್ಗಾ ಪ್ರದೇಶದಲ್ಲಿ ಸೇರಿದ ಸಾವಿರಾರು ಮುಸ್ಲಿಮರು ಪ್ರಧಾನ ಇಮಾಂ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ಕೋರಿದರು. ಬಾಕ್ಸ್‌..............

ಶಾಸಕರು ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ

ರಾಮನಗರ: ನಗರದ ಎಪಿಎಂಸಿ ಬಳಿಯಿರುವ ಈದ್ಗಾ ಮೈದಾನದಲ್ಲಿ ಗುರುವಾರ ಬೆಳಿಗ್ಗೆ ಮುಸ್ಲಿಂ ಬಾಂಧವರೊಂದಿಗೆ ಶಾಸಕ ಎಚ್.ಎ.ಇಕ್ಬಾಲ್‌ ಹುಸೇನ್ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಪಂಚದಲ್ಲಿನ ಜನರು ಶಾಂತಿ-ನೆಮ್ಮದಿಯಿಂದ ಬದುಕಲು ಆಶೀರ್ವದಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ಈ ಹಿಂದೆ ಶಾಸಕರಾಗಿ ಅಧಿಕಾರ ನಡೆಸಿದವರು ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸದ ಕಾರಣ ಎಲ್ಲ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಈ ವರ್ಷ ಬೇಸಿಗೆ ಬಿಸಿಲಿನ ತಾಪ ಎಚ್ಚಿದ್ದು ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಎಂಟು ತಿಂಗಳ ಅವಧಿಯಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿದ್ದು ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸಲು ಟ್ಯಾಂಕರ್‌ಗಳನ್ನು ಬಿಟ್ಟು ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು. ರಂಜಾನ್ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದವರಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

11ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಈದ್ಗಾ ಮೈದಾನದಲ್ಲಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸುತ್ತಿರುವುದು.