ಸಾರಾಂಶ
ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮುಸ್ಲಿಂ ಧರ್ಮಿಯರ ಪವಿತ್ರ ಹಬ್ಬ ರಂಜಾನ್‌ಗೆ ದಿನಗಣನೆ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ.
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮುಸ್ಲಿಂ ಧರ್ಮಿಯರ ಪವಿತ್ರ ಹಬ್ಬ ರಂಜಾನ್‌ಗೆ ದಿನಗಣನೆ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ.ಪಟ್ಟಣದಲ್ಲಿ ಬಹುತೇಕ ಕಿರಾಣಿ ಅಂಗಡಿಗಳ ಮುಂದೆ, ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿರುವ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು.ಸಂಜೆಯಾಗುತ್ತಲೆ ಮುಸ್ಲಿಂ ಸಮುದಾಯದವರು ವಸ್ತುಗಳು, ಆಹಾರ ಪದಾರ್ಥಗಳ ಖರೀದಿಗೆ ಮುಗಿಬೀಳುತ್ತಿದ್ದು, ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬರುತ್ತಿದೆ.
ಮಹಿಳೆಯರು, ಮಕ್ಕಳು, ಯುವಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಯಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಸೋಮವಾರ ಸಂತೆ ದಿನವಾಗಿರುವುದರಿಂದ ತಾಲೂಕಿನ ವಿವಿಧೆಯಿಂದ ಜನರು ಪೇಟೆಗೆ ಬಂದಿದ್ದರಿಂದ ಬಸವನಬಾಗೇವಾಡಿ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿತ್ತು. ಮುಸ್ಲಿಂ ಧರ್ಮಿಯರೇ ಹೆಚ್ಚಾಗಿ ಕಂಡುಬಂದರು. ಮಹಿಳೆಯರು ಬಟ್ಟೆ, ಚಪ್ಪಲಿ ಮತ್ತಿತರ ದಿನಬಳಕೆ ವಸ್ತುಗಳನ್ನು ಖರೀದಿಯಲ್ಲಿ ತೊಡಗಿಕೊಂಡಿದ್ದರು. ಹಬ್ಬದಲ್ಲಿ ವಿಶೇಷವಾಗಿ ತಯಾರಿಸುವ ಸುರಕುಂಬಾ ತಯಾರಿಕೆಗೆ ಬೇಕಾಗುವ ಡ್ರೈ ಫ್ರುಟ್ಸ್ ವ್ಯಾಪಾರ ಜೋರಾಗಿತ್ತು.ಮುಸ್ಲಿಂ ಧರ್ಮಿಯರಿಗೆ ರಂಜಾನ್ ಪವಿತ್ರ ಹಬ್ಬವಾಗಿದೆ. ಒಂದು ತಿಂಗಳ ಕಾಲ ಉಪವಾಸ ವ್ರತ ಮಾಡುವ ಮೂಲಕ ಭಗವಂತನಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ. ರೋಜಾ ಕೊನೆಯ ದಿನ ರಂಜಾನ ಹಬ್ಬ ಆಚರಿಸುವ ಮೂಲಕ ಉಪವಾಸ ಮುಕ್ತಾಯಗೊಳಿಸಲಾಗುವುದು. ಬುಧವಾರ ಚಂದಿರ ಕಂಡರೆ ರಂಜಾನ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಂದು ವೇಳೆ ಬುಧವಾರ ಚಂದಿರ ಕಾಣಿಸದಿದ್ದರೆ ಗುರುವಾರ ಹಬ್ಬ ಆಚರಸಲಾಗುತ್ತಿದೆ.- ದಸ್ತಗೀರ್ ವಜ್ಜಲ್ ಸ್ಥಳೀಯ ನಿವಾಸಿ