ರನ್ನ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಹಕ್ಕೊತ್ತಾಯ

| Published : Jun 26 2024, 12:38 AM IST

ರನ್ನ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಹಕ್ಕೊತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಗಿತಗೊಂಡಿರುವ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ರೈತ ಮುಖಂಡರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸ್ಥಗಿತಗೊಂಡಿರುವ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ರೈತ ಮುಖಂಡರು ಒತ್ತಾಯಿಸಿದರು.ಲೋಕಾಪುರ ಎಪಿಎಂಸಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಕಾರ್ಖಾನೆ ಪುನರಾರಂಭಕ್ಕೆ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಕ್ಷಬೇಧ ಮರೆತು ಸರ್ಕಾರದ ಮೇಲೆ ಒತ್ತಡ ಹಾಕಲು ಜೂ.೩೦ರಂದು ಮುಧೋಳ ಜಿಎಲ್‌ಬಿಸಿ ಯಲ್ಲಿ ಸಭೆ ಕರೆದಿದ್ದು, ಸಭೆಯಲ್ಲಿ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸಲು ಒಕ್ಕೊತ್ತಾಯ ಮಾಡಲಾಗುವುದು ಎಂದು ರೈತ ಮುಖಂಡ ಯಲ್ಲಪ್ಪ ಹೆಗಡೆ ಹೇಳಿದರು.

ಜಿಲ್ಲೆಯಲ್ಲಿದ್ದ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸುವ ಭರವಸೆಯನ್ನು ಹಾಲಿ ಸಚಿವ ಆರ್.ಬಿ.ತಿಮ್ಮಾಪುರ ಈಡೇರಿಸಿಲ್ಲ, ಮೊದಲಿದ್ದ ರನ್ನ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ದುರಾಡಳಿತದಿಂದ ದಿವಾಳಿ ಆಗಿ ಬಂದ್ ಆಗಿದೆ. ಕಾರ್ಖಾನೆ ಬಂದ್ ಆಗಿ ೩ ವರ್ಷಗಳು ಸಮೀಪಿಸುತ್ತಿವೆ. ಕಾರ್ಖಾನೆ ಪುನರಾಂಭ ಮಾಡುವಂತೆ ರೈತರು, ಕಾರ್ಮಿಕರು ಇತ್ತೀಚಿಗೆ ಮುಧೋಳದಲ್ಲಿ ಧರಣಿ ಮಾಡಿದ್ದರು. ಸತ್ಯಾಗ್ರಹ ಮಾಡುತ್ತಿದ್ದವರ ಟೆಂಟ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಮೂಲಕ ಕಾಣದ ಕೈಗಳು ಧರಣಿ ಮೊಟಕುಗೊಳಿಸುವಲ್ಲಿ ಯಶಸ್ವಿಯಾಗಿದ್ದು ಈಗ ಇತಿಹಾಸ.

ಹಾಲಿ ಸಚಿವರು ಕಾರ್ಖಾನೆ ಪುನಾರಂಭಕ್ಕೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಭರವಸೆಯಾಗಿ ಉಳಿದಿದೆ. ಇದರಿಂದ ರೈತರ ಹಾಗೂ ಕಾರ್ಮಿಕರ ಸಹನೆ ಕಟ್ಟೆ ಒಡೆದಿದೆ. ಮುಂದಿನ ದಿನಗಳಲ್ಲಿ ವಿಧಾನಸೌಕ್ಕೆ ಮುತ್ತಿಗೆ ಹಾಕಿ ಎದುರು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ರೈತ ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, ಮಾಜಿ ಅಧ್ಯಕ್ಷ ದುರಾಡಳಿತದಿಂದ ಕಾರ್ಖಾನೆ ಸದ್ಯದ ಸ್ಥಿತಿಗೆ ಬಂದಿದೆ ಆರೋಪಿಸಿದರು. ಷೇರುದಾರರ ಪಹಣಿಯಲ್ಲಿ ಕಾರ್ಖಾನೆ ಭೋಜಾ ಏರಿದ್ದು ಮತ್ತು ರೈತರ ಹೆಸರಿನಲ್ಲಿ ಬಿಲ್ ತೆಗೆಯಲಾಗಿದೆ. ಸಾಕಷ್ಟು ಪುರಾವೆಗಳು ಇದ್ದರೂ ಯಾವುದೇ ಸರ್ಕಾರ ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದಿರುವುದು ರೈತರಿಗೆ ಮಾಡಿದ ಮೋಸವಾಗಿದೆ. ಮುಂದಿನ ದಿನಗಳಲ್ಲಿ ಮೊಸ ಮಾಡಿದವರಿಗೆ ರೈತರು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಬ್ಬು ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಸುಭಾಸ ಶಿರಬೂರ ಮಾತನಾಡಿ, ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಆರಂಭಿಸಿ ಹೊಸ ಆಡಳಿತ ಮಂಡಳಿ ರಚಿಸಬೇಕು, ರೈತರ ಹಾಗೂ ಕಾರ್ಮಿಕರ ಹಿತ ಕಾಪಾಡಬೇಕು ಎಂಬುದು ರೈತರ ಬೇಡಿಕೆಯಾಗಿದೆ.

ಈ ವೇಳೆ ರೈತ ಮುಖಂಡರಾದ ಬಸಪ್ಪ ಸಂಗನ್ನವರ, ಗೋವಿಂದಪ್ಪ ಮೆಟಗುಡ್ಡ, ರಾಜು ರಾಜಬಾಕ್ಷಿ ಇದ್ದರು.