ಕೊಪ್ಪಪಟ್ಟಣದ ಅರಳಿಕಟ್ಟೆಯಿಂದ ಬಸ್ ನಿಲ್ದಾಣದವರೆಗೆ ವಾಹನ ನಿಲುಗಡೆಗೆ ನಿಯಮ ಜಾರಿಯಲ್ಲಿದ್ದರೂ ಸಾರ್ವಜನಿಕರು ರಸ್ತೆಯ ಎರಡೂ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಿರುವುದರಿಂದ ಪದೇಪದೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಕನ್ನಡಪ್ರಭ ವಾರ್ತೆ ಕೊಪ್ಪ
ಪಟ್ಟಣದ ಅರಳಿಕಟ್ಟೆಯಿಂದ ಬಸ್ ನಿಲ್ದಾಣದವರೆಗೆ ವಾಹನ ನಿಲುಗಡೆಗೆ ನಿಯಮ ಜಾರಿಯಲ್ಲಿದ್ದರೂ ಸಾರ್ವಜನಿಕರು ರಸ್ತೆಯ ಎರಡೂ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಿರುವುದರಿಂದ ಪದೇಪದೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.ಈ ಮಾರ್ಗದಲ್ಲಿ ವಾರದಲ್ಲಿ 3 ದಿನ ಒಂದು ಬದಿ ಹಾಗೂ 4 ದಿನ ಮತ್ತೊಂದು ಬದಿಯಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ನಿಲುಗಡೆಗೆ ನಾಮಫಲಕ ಅಳವಡಿಸಲಾಗಿದೆ. ಆದರೆ ನಿಯಮ ಪಾಲಿಸದೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಗಳನ್ನು ನಿಲ್ಲಿಸುತ್ತಿರುವುದು ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ.ಈ ಹಿಂದೆ ಇದೇ ಸಮಸ್ಯೆ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬಳಿಕ ಅಂದಿನ ಠಾಣಾಧಿಕಾರಿ ಜಿ.ಕೆ. ಬಸವರಾಜ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ನಿಯಮ ಉಲ್ಲಂಘಿಸಿ ವಾಹನ ನಿಲ್ಲಿಸುವವರಿಗೆ ಲಾಕ್ ಅಳವಡಿಸಿ, ದಂಡ ವಿಧಿಸುವ ಮೂಲಕ ಪಾರ್ಕಿಂಗ್ ವ್ಯವಸ್ಥೆ ನಿಯಂತ್ರಿಸಿದ್ದರು.ಆದರೆ ಠಾಣಾಧಿಕಾರಿ ಜಿ.ಕೆ. ಬಸವರಾಜ್ ಅವರು ವರ್ಗಾವಣೆಯಾದ ಬಳಿಕ ಪಟ್ಟಣದ ವಾಹನ ನಿಲುಗಡೆ ವ್ಯವಸ್ಥೆ ಮತ್ತೆ ಹದಗೆಟ್ಟಿದೆ. ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರ ಸಂಖ್ಯೆ ಹೆಚ್ಚಾಗಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.ಸೂಕ್ತ ಕ್ರಮಕ್ಕೆ ಒತ್ತಾಯ: ಕೊಪ್ಪ ಠಾಣೆಗೆ ನೂತನವಾಗಿ ವರ್ಗಾವಣೆಯಾದ ಠಾಣಾಧಿಕಾರಿ ಮಧು ಅವರು ಪಟ್ಟಣದ ಪಾರ್ಕಿಂಗ್ ವ್ಯವಸ್ಥೆಯತ್ತ ಗಮನಹರಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪಾರ್ಕಿಂಗ್ ನಿಯಮ ಪರಿಣಾಮಕಾರಿಯಾಗಿ ಜಾರಿಗೊಳಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಬೇಕು ಎಂದು ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಒತ್ತಾಯಿಸಿದ್ದಾರೆ.