ಹಿರಿಯ ರಂಗಕರ್ಮಿ ಶ್ರೀಪಾದ ಭಟ್‌ರಿಗೆ ರಂಗಭೂಪತಿ ಪ್ರಶಸ್ತಿ ಪ್ರದಾನ

| Published : Mar 31 2024, 02:02 AM IST

ಸಾರಾಂಶ

ರಂಗ-ಸಂಗ, ಆಟ-ಮಾಟ ಮತ್ತು ಬಹುರೂಪಿ ಸಂಸ್ಥೆಯಿಂದ ಆಯೋಜಿಸಿದ್ದ ರಂಗ ಸಂಜೆ ಸಮಾರಂಭದಲ್ಲಿ ಹಿರಿಯ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್‌ರಿಗೆ ರಂಗ ಭೂಪತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಧಾರವಾಡ

ಇಲ್ಲಿಯ ರಂಗಾಯಣ ಬಯಲು ರಂಗ ಮಂದಿರದಲ್ಲಿ ಗೋಪಾಲ ವಾಜಪೇಯಿ ಸ್ಮರಣೆಯಲ್ಲಿ ಗೋ.ವಾ. ರಂಗ-ಸಂಗ, ಆಟ-ಮಾಟ ಮತ್ತು ಬಹುರೂಪಿ ಸಂಸ್ಥೆಯಿಂದ ಆಯೋಜಿಸಿದ್ದ ರಂಗ ಸಂಜೆ ಸಮಾರಂಭದಲ್ಲಿ ಹಿರಿಯ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್‌ರಿಗೆ ರಂಗ ಭೂಪತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಲೇಖಕರು ತಮ್ಮ ನೆನಪುಗಳನ್ನು ಬರಣಿಗೆಗೆ ಇಳಿಸಬೇಕು. ತಮ್ಮ ನೋವುಗಳನ್ನೂ ಬರೆಯಬೇಕು. ಅಂತಹ ನೋವಿನ ನೆನಪುಗಳನ್ನು ಗೋಪಾಲ ವಾಜಪೇಯಿ ಬರೆಯುತ್ತಿದ್ದರು. ರಂಗ ತಾಲೀಮಿಗೆ ಹೋದಾಗ, ಅಲ್ಲಿಂದಲ್ಲೇ ರಂಗಗೀತೆಗಳನ್ನು ಬರೆದು ಕೊಡುತ್ತಿದ್ದರು.‌ ಒಬ್ಬರು ಅವರ ಗೀತೆಗಳನ್ನೇ ತಮ್ಮ ನಾಟಕಗಳಲ್ಲಿ ಇವರ ಕವಿತೆ ಬರೆಯಿಸಿಕೊಂಡು ಹೆಸರು ಹಾಕಲಿಲ್ಲ. ಆಗ ಅನಿವಾರ್ಯವಾಗಿ ಕೋರ್ಟ್ ಗೆ ಹೋಗಿದ್ದರು. ಕೋರ್ಟ್ ಖರ್ಚಿಗೂ ಹಣ ಇರಲಿಲ್ಲ. ಗೋಪಾಲ ವಾಜಪೇಯಿ ಪರವಾಗಿ ಸಾಕ್ಷಿ ಹೇಳಲು ಅನೇಕರು ಬಂದಿದ್ದರು. ಅದನ್ನು ಬಳಸಿಕೊಂಡವರು ನಮ್ಮ ಸುತ್ತ ಇದ್ದವರೆ ಇದ್ದರು. ಅಂತಹ ಗೋಪಾಲ ವಾಜಪೇಯಿ‌ ನೆನಪು ಹೋಗಿತ್ತು. ಆದರೆ ಆ ನೆನಪು ಕೆದಕಿ, ಮತ್ತೆ ವಾಜಪೇಯಿ ನೆನಪಿಸುವಂತೆ ಈ ಕಾರ್ಯಕ್ರಮ‌ ಮಾಡಿದೆ ಎಂದರು.

ಮಾಸ್ಟರ ಹಿರಣಯ್ಯ, ಬಿ.ವಿ. ಕಾರಂತರ ನಂತರ ರಂಗ ಜಂಗಮವಾಗಿ ಕೆಲಸ ಮಾಡಿದವರು ಗೋಪಾಲ ವಾಜಪೇಯಿ. ಇವತ್ತು ಅವರ ಹೆಸರು ನೆನಪಿಡುವಂತಹ ಕಾರ್ಯಕ್ರಮ ಆಗಿದೆ. ಊರಿದ ಬೀಜ ಬೆಳೆಯಲು ಬಹಳ ಕಾಲಬೇಕು. ಸಸಿ ಬೆಳೆಯಲು ಅವಕಾಶ ಬೇಕು. ಹಾಗೆಯೇ ಈ ಪ್ರಶಸ್ತಿ ಬೆಳೆಯುತ್ತದೆ ಎಂದು ಹೇಳಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ಜಿ.ಎನ್.‌ ಮೋಹನ ಮಾತನಾಡಿ, ಪ್ರಶಸ್ತಿಗೆ ರಂಗಭೂಪತಿ ಹೆಸರಿಡಲು ಕಾರಣ ಗೋಪಾಲ ವಾಜಪೇಯಿಯವರ ನಂದ ಭೂಪತಿ ನಾಟಕ. ಆ ನಾಟಕದಿಂದ ಭೂಪತಿ ಪಡೆದು ಅದಕ್ಕೆ ರಂಗ ಸೇರಿಸಿ ರಂಗಭೂಪತಿ ಎಂದು ಮಾಡುತ್ತಿದ್ದೇವೆ. ಐದು ವರ್ಷದಿಂದ ಯೋಚನೆ ಮಾಡಿ ಈ ಕಾರ್ಯಕ್ರಮ ಈಗ ಮಾಡಿದ್ದೇವೆ. ಇನ್ಮುಂದೆ ನಿರಂತರವಾಗಿ ಕಾರ್ಯಕ್ರಮವಾಗುತ್ತದೆ. ಒಂದು ವರ್ಷ ಧಾರವಾಡದಲ್ಲಿ ಒಂದು ವರ್ಷ ಬೆಂಗಳೂರಿನಲ್ಲಿ ಕಾರ್ಯಕ್ರಮವಾಗಬೇಕು. ಹೀಗಾಗಿ, ಮುಂದಿನ ವರ್ಷದ ಕಾರ್ಯಕ್ರಮದ ದಿಬ್ಬಣ ಒಯ್ಯಲು ನಾನು ಇಲ್ಲಿ ಬಂದಿದ್ದೇನೆ ಎಂದು ಹೇಳಿದ ಅವರು, ಗೋಪಾಲ ವಾಜಪೇಯಿ ಅವರೊಂದಿಗಿನ ವೃತ್ತಿ ಜೀವನದ ನೆನಪುಗಳನ್ನು ಸ್ಮರಿಸಿಕೊಂಡರು.

ಪ್ರಶಸ್ತಿ ಸ್ವೀಕರಿಸಿ ಡಾ. ಶ್ರೀಪಾದ ಭಟ್ ಮಾತನಾಡಿ, ಗೋಪಾಲ ವಾಜಪೇಯಿ ಕತೆ ಬರೆದರೆ ಅವರೇ ಕಥೆ ಆಗುತ್ತಿದ್ದರು. ಕವನ ಬರೆದರೆ ಕವನ ಆಗುತ್ತಿದ್ದರು. ನಾಟಕ ಬರೆದರೆ ಅವರೇ ನಾಟಕದ ದೊಡ್ಡಪ್ಪ ಆಗುತ್ತಿದ್ದರು. ಪತ್ರಿಕೋದ್ಯಮದಲ್ಲಿ ಅವರೆ ಅಕ್ಷರ ಆಗುತ್ತಿದ್ದರು. ಅವರು ಅವರಾಗಿಯೇ ಇರುತ್ತಿದ್ದರು.

ನಾವು ಏನಾದರೂ ಮಾಡಲಿ ಸಮಾಜದಲ್ಲಿ ಸ್ವಲ್ಪವಾದರೂ ಗುರುತು ಮಾಡಿ ಸಾಯಬೇಕು. ಆಗ ನಮ್ಮ ಜೀವನಕ್ಕೊಂದು ಸಾರ್ಥಕತೆ ಬರುತ್ತದೆ. ನಮ್ಮ ಮುಂದಿನ ಪೀಳಿಗೆ ನಮ್ಮ ಗುರುತು ನೆನಪಿಸಿಕೊಳ್ಳಬೇಕು. ಸುಮ್ಮನೆ ಸತ್ತಿಲ್ಲ. ಜೀವನದಲ್ಲಿ ಏನೋ ಮಾಡಿ ಗುರುತು ಉಳಿಸಿ ಹೋಗಿದ್ದಾರೆ ಎಂದುಕೊಳ್ಳಬೇಕು. ಹಾಗೇ ಜೀವನದಲ್ಲಿ ನಾವು ಏನಾದರೂ ಮಾಡಬೇಕು ಎಂದರು.

ಗೋಪಾಲ ವಾಜಪೇಯಿಯವರ ಪತ್ನಿ ರಾಧಿಕಾ ವಾಜಪೇಯಿ ಮತ್ತು ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿದ್ದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಳಿಕ ರಂಗ ಸಂಜೆ ಪ್ರಯುಕ್ತ ಸ್ವರದೇಸಿ ತಂಡ ಮತ್ತು ರಾಘವ ಕಮ್ಮಾರ ತಂಡಗಳವರು ಗೋಪಾಲ ವಾಜಪೇಯಿಯವರ ವಿವಿಧ ರಂಗಗೀತೆಗಳನ್ನು ಪ್ರಸ್ತುತಪಡಿಸಿದರು.

ಮಹಾದೇವ ಹಡಪದ ಸ್ವಾಗತಿಸಿದರು. ರಾಜಕುಮಾರ ಮಡಿವಾಳರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ನಿರೂಪಿಸಿದರು.