ಬಳ್ಳಾರಿ ಬಂಡಿಹಟ್ಟಿಯ ರಾಮನಗರದ ಗಿರಿಜಪ್ಪ ಅವಧೂತರ ಮಠದಲ್ಲಿ ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ವತಿಯಿಂದ ತತ್ವಪದ, ರಂಗಗೀತೆ, ಜಾನಪದಗೀತೆ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಳ್ಳಾರಿ: ನಗರದ ಬಂಡಿಹಟ್ಟಿಯ ರಾಮನಗರದ ಗಿರಿಜಪ್ಪ ಅವಧೂತರ ಮಠದಲ್ಲಿ ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ವತಿಯಿಂದ ತತ್ವಪದ, ರಂಗಗೀತೆ, ಜಾನಪದಗೀತೆ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟಿಸಿದ ಉದ್ಯಮಿ ಕೊರ್ಲಗುಂದಿ ಬಸವನಗೌಡ ಅವರು, ರಂಗಭೂಮಿಯಲ್ಲಿ ಪ್ರದರ್ಶಿಸಲಾಗುವ ರಂಗಗೀತೆಗಳು ನಾಟಕಗಳ ಆತ್ಮವಾಗಿದ್ದು, ಕಥೆಯ ಭಾವನಾತ್ಮಕ ತಳಹದಿಯನ್ನು ಗಾಢಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೇ ಸಮಾಜದ ಸಮಸ್ಯೆಗಳು, ಮೌಲ್ಯಗಳು ಹಾಗೂ ಸಂಸ್ಕೃತಿಯ ಸಾರವನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಮಾಧ್ಯಮವಾಗಿವೆ ಎಂದು ತಿಳಿಸಿದರು.

ಜಾನಪದ ಗೀತೆಗಳು ಗ್ರಾಮೀಣ ಜೀವನದ ಪ್ರತಿಬಿಂಬವಾಗಿದ್ದು, ಪೀಳಿಗೆಯಿಂದ ಪೀಳಿಗೆಗೆ ಬಂದ ಸಂಪ್ರದಾಯ, ಆಚರಣೆ, ನಂಬಿಕೆಗಳು ಮತ್ತು ಜನಜೀವನದ ವೈಶಿಷ್ಟ್ಯಗಳನ್ನು ಜೀವಂತವಾಗಿಡುತ್ತಿವೆ. ರೈತರ ಜೀವನ, ಹಬ್ಬ-ಹರಿದಿನಗಳು, ದುಃಖ-ಸಂತೋಷಗಳನ್ನೆಲ್ಲ ಜಾನಪದ ಗೀತೆಗಳು ಸ್ಪಷ್ಟವಾಗಿ ಚಿತ್ರಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ

ಶಂಕರಬಂಡೆ ಅವರು, ತತ್ವಪದಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಸರಳ ಭಾಷೆಯಲ್ಲಿ ಆಳವಾದ ಜೀವನ ಮೌಲ್ಯಗಳನ್ನು ಬೋಧಿಸುವ ಈ ಕವನಗಳು, ಮಾನವೀಯತೆ ಮತ್ತು ಧಾರ್ಮಿಕ ಸಹಿಷ್ಣುತೆಯ ಸಂದೇಶವನ್ನು ಜನಮನಗಳಿಗೆ ತಲುಪಿಸುತ್ತಿವೆ ಎಂದರು.

ಸಂತ ಶಿಶಿನಾಳ ಶರೀಫರ ತತ್ವಪದಗಳು ಜಾತಿ-ಮತ ಭೇದಗಳನ್ನು ತಳ್ಳಿ ಹಾಕಿ, ಎಲ್ಲರೂ ಸಮಾನರು ಎಂಬ ಭಾವನೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಅವರ ತತ್ವಪದಗಳಲ್ಲಿ ಮಾನವ ಪ್ರೀತಿ, ಸಹಾನುಭೂತಿ ಹಾಗೂ ಸತ್ಯನಿಷ್ಠ ಜೀವನದ ಅಗತ್ಯತೆ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಜನಪದ ಶೈಲಿಯಲ್ಲಿ ರಚನೆಯಾದ ಈ ತತ್ವಪದಗಳು ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವಂತಿದ್ದು, ಹಾಡುಗಳ ರೂಪದಲ್ಲಿ ವ್ಯಾಪಕವಾಗಿ ಹರಡಿವೆ ಎಂದು ಹೇಳಿದರು.

ಶಿಶುನಾಳು ಶರೀಫರ ತತ್ವಪದಗಳು ಕೇವಲ ಸಾಹಿತ್ಯವಲ್ಲ. ಅವು ಸಮಾಜ ಸುಧಾರಣೆಗೆ ಪ್ರೇರಣೆ ನೀಡುವ ಮಹತ್ವದ ಚಿಂತನೆಗಳ ಸಂಕಲನವಾಗಿವೆ. ಇಂದಿನ ಕಾಲದಲ್ಲಿಯೂ ಅವರ ಸಂದೇಶಗಳು ಸಮಾನತೆ, ಸೌಹಾರ್ದ ಮತ್ತು ಮಾನವೀಯ ಮೌಲ್ಯಗಳ ಬಲವರ್ಧನೆಗೆ ಪ್ರಸ್ತುತವಾಗಿವೆ ಎಂದು ಯಲ್ಲನಗೌಡ ಶಂಕರಬಂಡೆ ಹೇಳಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಯುವ ಉದ್ಯಮಿ ಕರ್ಚೇಡು ತಿಪ್ಪೇಸ್ವಾಮಿ, ವೈ. ಮಾರುತಿ, ಸಪ್ತಸ್ವರ ಸಾಂಸ್ಕೃತಿಕ ಬಯಲಾಟ ಕಲೆ ಟ್ರಸ್ಟ್‌ನ ಉಪಾಧ್ಯಕ್ಷೆ ಜಯಲಕ್ಷ್ಮೀ, ಸುಬ್ರಮಣ್ಯಂ, ಬಯಲಾಟ ಹಿರಿಯ ಕಲಾವಿದ ಹನುಮಾವಧೂತ ಉಪಸ್ಥಿತರಿದ್ದರು. ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್‌ನ ಅಧ್ಯಕ್ಷ ಸುಬ್ಬಣ್ಣ ಪ್ರಾಸ್ತಾವಿಕ ಮಾತನಾಡಿದರು.

ಜಡೇಶ್ ಎಮ್ಮಿಗನೂರು ಅವರಿಂದ ಜನಪದ ಗೀತಗಾಯನ, ಕೆ. ರಮೇಶ್ ಮತ್ತು ತಂಡದಿಂದ ತತ್ವಪದ ಗಾಯನ ಹಾಗೂ ಹನುಮಾವಧೂತ ತಂಡದಿಂದ ರಂಗಗೀತೆ ಗಾಯನ ಜರುಗಿದವು.