ಜುಲೈ7 ರಂದು ‘ರಂಗಸಂಗಾತಿ’ ವಾರ್ಷಿಕೋತ್ಸವ: ಹಿರಿಯ ನಟ ಲಕ್ಷ್ಮಣ ಮಲ್ಲೂರುಗೆ ಪ್ರಶಸ್ತಿ ಪ್ರದಾನ

| Published : Jul 03 2025, 11:49 PM IST

ಜುಲೈ7 ರಂದು ‘ರಂಗಸಂಗಾತಿ’ ವಾರ್ಷಿಕೋತ್ಸವ: ಹಿರಿಯ ನಟ ಲಕ್ಷ್ಮಣ ಮಲ್ಲೂರುಗೆ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

‘ರಂಗಸಂಗಾತಿ’ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವಾರ್ಷಿಕೋತ್ಸವ ಜುಲೈ 7 ರಂದು ಸಂಜೆ 5.30 ರಿಂದ ನಗರದ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿಯ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಘಟನೆ ‘ರಂಗಸಂಗಾತಿ’ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವಾರ್ಷಿಕೋತ್ಸವ ಜುಲೈ 7 ರಂದು ಸಂಜೆ 5.30 ರಿಂದ ನಗರದ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆಯಲಿದೆ.

ಬಹುಮುಖ ಪ್ರತಿಭೆ, ರಂಗಸಂಗಾತಿಯ ಸ್ಥಾಪಕ ಸದಸ್ಯ ದಿವಂಗತ ಭಾಸ್ಕರ ನೆಲ್ಲಿತೀರ್ಥರ ನೆನಪಲ್ಲಿ ನೀಡಲಾಗುವ ‘ರಂಗ ಭಾಸ್ಕರ- 2025’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ಬಾರಿಯ ಪ್ರಶಸ್ತಿಗೆ ಹಿರಿಯ ನಟ, ನಿರ್ದೇಶಕ, ಚಲನಚಿತ್ರ ನಟ ಲಕ್ಷ್ಮಣ ಕುಮಾರ್ ಮಲ್ಲೂರು ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 15 ಸಾವಿರ ರು. ನಗದು, ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಸಂಸ್ಥೆಯ ವಿಶ್ವಸ್ಥ ಮಂಡಳಿ ಸದಸ್ಯರಾದ ಮೈಮ್ ರಾಮ್‌ದಾಸ್ ಮತ್ತು ಶಶಿರಾಜ್ ಕಾವೂರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1962 ರಲ್ಲಿ ಬಾಲನಟನಾಗಿ ರಂಗಪ್ರವೇಶ ಮಾಡಿದ ಲಕ್ಷ್ಮಣ ಕುಮಾರ್ ಮಲ್ಲೂರು ಕಳೆದ 65 ವರ್ಷಗಳಿಂದ ನಿರಂತರ ರಂಗಚಟುವಟಿಕೆಗಳಿಂದ ನಟನಾಗಿ, ನಿರ್ದೇಶಕನಾಗಿ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ ಎಂದರು.

ಸಭೆಯ ಬಳಿಕ ಹೆಗ್ಗೋಡಿನ ಜನಮನದಾಟ ತಂಡದಿಂಡ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಾಯಾಮೃಗ (ನಿರ್ದೇಶನ: ರಂಜಿತ್ ಶೆಟ್ಟಿ ಕುಕ್ಕುಡೆ) ಮತ್ತು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಎದೆಯ ಹಣತೆ (ನಿರ್ದೇಶನ: ಗಣೇಶ್ ಎಂ.ಹೆಗ್ಗೋಡು) ನಾಟಕ ಪ್ರದರ್ಶನಗೊಳ್ಳಲಿದ್ದು, ಪ್ರವೇಶ ಉಚಿತ ಎಂದು ಅವರು ಮಾಹಿತಿ ನೀಡಿದರು.

ಸಂಸ್ಥೆಯ ವಿಶ್ವಸ್ಥ ಮಂಡಳಿ ಸದಸ್ಯರಾದ ಕರುಣಾಕರ ಶೆಟ್ಟಿ, ನಾಗೇಶ್ ಶೆಟ್ಟಿ ಬಜಾಲ್, ರಂಜನ್ ಬೋಳೂರು, ಪ್ರಸಾದ್ ಶೆಟ್ಟಿ ಇದ್ದರು.