ಸಡಗರದ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ

| Published : Feb 19 2024, 01:32 AM IST

ಸಾರಾಂಶ

ಶ್ರೀರಾಂ ಪುರ ಹೋಬಳಿ ಕಡವಿಗೆರೆ ವಜ್ರದಲ್ಲಿ ಮಾವಿನ ಕಣವೇ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಶ್ರೀರಾಂಪುರ ಹೋಬಳಿ ಕಡವಿಗೆರೆ ವಜ್ರ ಕ್ಷೇತ್ರದ ಬೆಟ್ಟದಲ್ಲಿ ನೆಲೆಸಿರುವ ಮಾವಿನ ಕಣಿವೆ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು.

ಈ ಸಂಬಂಧ ಬೆಳಗ್ಗೆ ಬೆಟ್ಟದ ಮೇಲಿರುವ ಉದ್ಭವ ಮೂರ್ತಿಗೆ ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ ಸೇರಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.

ನಂತರ ಬೆಟ್ಟದ ತಪ್ಪಲಿನಲ್ಲಿ ಶಿವನ ದೇವಾಲಯದ ಆವರಣದಲ್ಲಿ ಚಿಕ್ಕ ಹುಲ್ಲೇನಹಳ್ಳಿ ಗ್ರಾಮದಿಂದ ತರಲಾಗಿದ್ದ ರಂಗನಾಥ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿವಿಧ ಹೂವು ಬಟ್ಟೆಗಳಿಂದ ಅಲಂಕೃತವಾಗಿದ್ದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ಸಹಸ್ರಾರು ಭಕ್ತರು ಬ್ರಹ್ಮರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ಈ ಬ್ರಹ್ಮರಥೋತ್ಸವಕ್ಕೆ ಚಿಕ್ಕ ಹುಲ್ಲೇನಹಳ್ಳಿ ಗ್ರಾಮದಲ್ಲಿರುವ ಐದಳ್ಳಿ ಗ್ರಾಮ ದೇವತೆ ಕರಿಯಮ್ಮ ದೇವಿ, ಹರೇನಹಳ್ಳಿ ಗ್ರಾಮದ ಲಕ್ಷ್ಮಿ ರಂಗನಾಥ ಸ್ವಾಮಿ, ಸಾದರಹಳ್ಳಿ ಗ್ರಾಮದ ಬೇಟೆ ರಂಗನಾಥ ಸ್ವಾಮಿ, ವೆಂಗಳಾಪುರ ಗ್ರಾಮದ ಆಂಜನೇಯ ಸ್ವಾಮಿ, ಕಡವಿಗೆರೆ ಗ್ರಾಮದ ಆದಿಶಕ್ತಿ ದೇವರುಗಳನ್ನು ಕರೆತರಲಾಗಿತ್ತು.

ಬ್ರಹ್ಮರಥೋತ್ಸವಕ್ಕೆ ಆಗಮಿಸಿದ ಭಕ್ತರು ಕ್ಷೇತ್ರದಲ್ಲಿನ ಉದ್ಭವ ಗಂಗೆಯ ನೀರಿನಲ್ಲಿ ಮುಳುಗಿ ನಂತರ ಬಾಳೆಹಣ್ಣು, ನಾಣ್ಯಗಳನ್ನು ಬ್ರಹ್ಮ ರಥದ ಮೇಲೆ ತೂರುವ ಮೂಲಕ ಹರಕೆ ತೀರಿಸಿದರು. ರಾತ್ರಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

50ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆ ದೂಳೋತ್ಸವ ಮದ್ಯಾನ ತೆಪ್ಪೋತ್ಸವ . ರಾತ್ರಿ ಪುಷ್ಪೋತ್ಸವ, ಸರ್ಪವಾಹನೋತ್ಸವ, ಆಂಜನೇಯನೋತ್ಸವ, ಅಡ್ಡ ಪಲ್ಲಕ್ಕಿ ಉತ್ಸವ, ಶಯನೋತ್ಸವ ನಡೆಯಲಿವೆ.