ರಂಗನಾಥ ವಾಲ್ಮೀಕಿಯವರ ಸಾಧನೆ ಸಾಧ್ಯತೆ ಕೃತಿ ಲೋಕಾರ್ಪಣೆ

| Published : Mar 24 2025, 12:31 AM IST

ಸಾರಾಂಶ

ಸಾಧನೆ ಸದಾ ಸಾಧ್ಯ. ಅದು ಬಯಸುವುದು ದೃಢ ನಿಷ್ಠೆ, ಸಮಯ ಪಾಲನೆ ಸಾಧಿಸುವ ಅದಮ್ಯ ವಿಶ್ವಾಸ ಎಂದು ಹಿರಿಯ ಕಲಾವಿದ ಡಾ. ಕಲ್ಮೇಶ ಹಾವೇರಿಪೇಟ್ ಹೇಳಿದರು.

ಧಾರವಾಡ: ಸಾಧನೆ ಸದಾ ಸಾಧ್ಯ. ಅದು ಬಯಸುವುದು ದೃಢ ನಿಷ್ಠೆ, ಸಮಯ ಪಾಲನೆ ಸಾಧಿಸುವ ಅದಮ್ಯ ವಿಶ್ವಾಸ ಎಂದು ಹಿರಿಯ ಕಲಾವಿದ ಡಾ. ಕಲ್ಮೇಶ ಹಾವೇರಿಪೇಟ್ ಹೇಳಿದರು.

ಕಲಾಸಂಗಮ ಸಂಸ್ಥೆ ಹಾಗೂ ಡಿ.ಕೆ. ಹಾವೇರಪೇಟ್ ಫೌಂಡೇಶನ್ ಸಹಯೋಗದಲ್ಲಿ ವಿದ್ಯಾವರ್ಧಕ ಸಂಘದಲ್ಲಿ ಶಿಕ್ಷಕ ಲೇಖಕ ರಂಗನಾಥ ವಾಲ್ಮೀಕಿ ಅವರ 10ನೇ ಕೃತಿ ಸಾಧನೆ ಸಾಧ್ಯತೆ ಲೋಕಾರ್ಪಣೆ ಮಾಡಿ ಮಾತನಾಡಿದರು. ಜೀವನದಲ್ಲಿ ಹಲವಾರು ತೊಂದರೆಗಳು, ಸಮಸ್ಯೆಗಳು ಬರುವುದು ಸಹಜ. ಅವುಗಳಿಗೆ ಅಂಜದೇ ಅಳುಕದೇ ನಮಗೆ ಇಷ್ಟವಾದ ಕ್ಷೇತ್ರಗಳಲ್ಲಿ ಸಾಧನಾ ಪಥದಲ್ಲಿ ಸಾಗಬೇಕು ಎಂದರು.ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ರಂಗನಾಥ ವಾಲ್ಮೀಕಿ ಒಬ್ಬ ಬಹುಮುಖ ಪ್ರತಿಭಾವಂತ ಶಿಕ್ಷಕ. ಅವರಿಗೆ ಕೆಲಸದಲ್ಲಿ ಶ್ರದ್ಧೆ ಬದ್ಧತೆ ಇದೆ. ಈ ಕಾರಣದಿಂದಲೇ ಅವರು ಇಲಾಖೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತ ಸಾಧನೆ ಹಾದಿಯಲ್ಲಿ ಸಾಗುತ್ತಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಮಾತನಾಡಿ, ರವಿ ಕಾಣದ್ದನ್ನು ಕವಿ ಕಾಣುವನು ಎಂಬ ಮಾತಿನಂತೆ ರಂಗನಾಥ ಬದುಕಿನಲ್ಲಿ ನಡೆಯುವ ಸಾಮಾನ್ಯ ವಿಷಯಗಳನ್ನು ಆಯ್ದುಕೊಂಡು ಆಪ್ತ ನಿರೂಪಣಾ ಶೈಲಿಯ ಬರವಣಿಗೆಗೆ ಸಿದ್ದಹಸ್ತರು. ಅವರ ಬರಹ ಸರಳ ಸುಂದರ ಮನಸ್ಸಿಗೆ ಹಿಡಿಸುವಂತದ್ದು ಎಂದರು.

ಹಿರಿಯ ಉಪನ್ಯಾಸಕ ಅರ್ಜುನ ಕಂಬೋಗಿ, ಕಲಾಸಂಗಮ ಸಂಸ್ಥೆಯ ಪ್ರಭು ಹಂಚಿನಾಳ ಮಾತನಾಡಿದರು. ಶಿಕ್ಷಕ ಕಲಾವಿದ ಎನ್.ಬಿ. ದ್ಯಾಪೂರ ಕೃತಿ ಪರಿಚಯಿಸಿದರು. ಅಧ್ಯಕ್ಷತೆ ವಹಿಸಿ ಎಸ್.ಬಿ. ಕೇಸರಿ ಮಾತನಾಡಿದರು. ಶ್ರೇಯಾ ವಾಲ್ಮೀಕಿ ಭರತನಾಟ್ಯ ಪ್ರದರ್ಶಿಸಿದಳು. ಮನಗುಂಡಿ ಶಿಕ್ಷಕಿ ಜೆ.ಆರ್. ಬಾಳೇರಿ ಹಾಗೂ ಬಿ.ಪಿ. ಜೋಶಿ ಪ್ರಾರ್ಥಿಸಿದರು. ಶಿಕ್ಷಕರಾದ ಕೆ.ಎಫ್. ಜಾವೂರ ಸ್ವಾಗತಿಸಿದರು. ಮಹೇಶ ಪರಸಣ್ಣನವರ ನಿರೂಪಿಸಿದರು. ನಾಗರಾಜ ತಳವಾರ ವಂದಿಸಿದರು.