ಸಾರಾಂಶ
ಬಸವನಬಾಗೇವಾಡಿ ಪಟ್ಟಣದ ವಿವಿಧ ಕಡೆಗಳಲ್ಲಿ ಶನಿವಾರ ಹೋಳಿ ಹಬ್ಬದ ರಂಗಪಂಚಮಿಯನ್ನು ಮಕ್ಕಳು, ಯುವಕರು, ಯುವತಿಯರು ಬಣ್ಣದಾಟ ಆಡುವ ಮೂಲಕ ಹೋಳಿ ಹಬ್ಬಕ್ಕೆ ತೆರೆ ಎಳೆದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ವಿವಿಧ ಕಡೆಗಳಲ್ಲಿ ಶನಿವಾರ ಹೋಳಿ ಹಬ್ಬದ ರಂಗಪಂಚಮಿಯನ್ನು ಮಕ್ಕಳು, ಯುವಕರು, ಯುವತಿಯರು ಬಣ್ಣದಾಟ ಆಡುವ ಮೂಲಕ ಹೋಳಿ ಹಬ್ಬಕ್ಕೆ ತೆರೆ ಎಳೆದರು.ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಬೀದಿಗಿಳಿದ ಚಿಣ್ಣರು, ಯುವಕರು ಸೇರಿದಂತೆ ಹಿರಿಯರು ಪರಸ್ಪರ ಬಣ್ಣ ಎರಚಾಟದಲ್ಲಿ ತೊಡಗಿದ್ದು ಕಂಡು ಬಂತು. ವಿವಿಧ ಗಲ್ಲಿಗಳಲ್ಲಿ ಯುವಕರು ಬಣ್ಣದಾಟದಲ್ಲಿ ತೊಡಗಿಕೊಂಡು ವಿವಿಧ ಬಗೆಯ ಬಣ್ಣವನ್ನು ಸ್ನೇಹಿತರಿಗೆ ಹಚ್ಚುವ ಮೂಲಕ ಸಂಭ್ರಮಿಸಿದರು. ಚಿಣ್ಣರು ಬಣ್ಣದ ನೀರು ತುಂಬಿದ ಬಾಟಲಿ, ಪಿಚಕಾರಿಗಳಿಂದ ಪರಸ್ಪರ ಬಣ್ಣ ಎರಚುವ ಮೂಲಕ ಸಂಭ್ರಮಿಸಿದರು. ಕೆಲ ಯುವಕರು ಬೈಕ್‌ನಲ್ಲಿ ಗಲ್ಲಿಗಳಿಗೆ ತೆರಳಿ ಮನೆಯಲ್ಲಿ ಕುಳಿತಿದ್ದ ಸ್ನೇಹಿತರನ್ನು ಹೊರ ತಂದು ಪರಸ್ಪರ ಬಣ್ಣ ಹಚ್ಚಿ ಬೊಬ್ಬೆ ಹಾಕಿ ಸಂಭ್ರಮಪಟ್ಟರು.
ಡಿಜೆ ಹಾಡಿಗೆ ಹೆಜ್ಜೆ ಹಾಕಿದ ಯುವಕರು: ರಂಗ ಪಂಚಮಿ ಹಿನ್ನೆಲೆಯಲ್ಲಿ ಪಟ್ಟಣದ ಬಸವಸ್ಮಾರಕದ ಮುಂಭಾಗದಲ್ಲಿ ರಾಷ್ಟ್ರೀಯ ಬಸವ ಸ್ಯನ್ಯ ಹಾಗೂ ಅಗಸಿಯಲ್ಲಿ ಶಹರ ಗಜಾನನ ಉತ್ಸವ ಸಮಿತಿ ಹಾಗೂ ಇಂಗಳೇಶ್ವರ ವೃತ್ತದಲ್ಲಿ, ಅಂಬೇಡ್ಕರ್ ವೃತ್ತದಲ್ಲಿ ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿ ರೈನ್ ಡಾನ್ಸ್ ಮಾಡುವ ಮೂಲಕ ಸಂಭ್ರಮಿಸಿದರು. ನಂದಿ ಬಡಾವಣೆಯಲ್ಲಿಯೂ ನಿವಾಸಿಗಳು ಸೇರಿಕೊಂಡು ರಂಗಪಂಚಮಿ ಸಂಭ್ರಮದಿಂದ ಆಚರಿಸಿದರು.ಪಟ್ಟಣದಲ್ಲಿ ರಂಗಪಂಚಮಿ ಅಂಗವಾಗಿ ಬೆಳಗ್ಗೆ ಬಹುತೇಕ ಅಂಗಡಿ ಮುಂಗಟ್ಟುಗಳು ಅಘೋಷಿತವಾಗಿ ಬಂದ್ ಆಗಿದ್ದವು. ಮಧ್ಯಾಹ್ನದ ನಂತರ ಕೆಲ ಅಂಗಡಿಗಳು ಆರಂಭವಾದವು. ಸರ್ಕಾರಿ ಕಚೇರಿಗಳು ದಿನನಿತ್ಯದಂತೆ ಕಾರ್ಯ ನಿರ್ವಹಿಸಿದವು. ಪದವಿ, ಎಸ್ಎಸ್ಎಲ್ಸಿ ಪರೀಕ್ಷೆಗಳು ಸುಗಮವಾಗಿ ನಡೆದವು.