ಸಾರಾಂಶ
ಸಿನಿಮಾದಲ್ಲಿ ಒಬ್ಬರೇ ನಿರ್ದೇಶಕರು ಇರುತ್ತಾರೆ. ಅವರಿಗೆ ತೃಪ್ತಿಯಾದರೇ ಸಾಕು ಟೇಕ್ ಓಕೆ ಮಾಡುತ್ತಾರೆ. ಆದರೆ, ರಂಗಭೂಮಿಯಲ್ಲಿ ಆ ರೀತಿ ಇರುವುದಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ರಂಗದ ಮೇಲೆ ಅಭಿನಯಿಸುವ ಕಲಾವಿದರು ಸೋಲುವುದೇ ಇಲ್ಲ ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಮಾಲತಿ ಸುಧೀರ್ ತಿಳಿಸಿದರು.ರಂಗಾಯಣದ ಭೂಮಿಗೀತದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಸಂಯುಕ್ತವಾಗಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ವಿಶ್ವ ರಂಗಸಂಭ್ರಮ- 2025 ಅನ್ನು ಅವರು ಉದ್ಘಾಟಿಸಿ ಮಾತನಾಡಿದರು.ಸಿನಿಮಾದಲ್ಲಿ ಒಬ್ಬರೇ ನಿರ್ದೇಶಕರು ಇರುತ್ತಾರೆ. ಅವರಿಗೆ ತೃಪ್ತಿಯಾದರೇ ಸಾಕು ಟೇಕ್ ಓಕೆ ಮಾಡುತ್ತಾರೆ. ಆದರೆ, ರಂಗಭೂಮಿಯಲ್ಲಿ ಆ ರೀತಿ ಇರುವುದಿಲ್ಲ. ಇಲ್ಲಿ ನಾಟಕ ನೋಡಲು ಬಂದಿರುವ ಎಲ್ಲರೂ ನಿರ್ದೇಶಕರೇ, ಸಂಗೀತ ನಿರ್ದೇಶಕರೇ, ಎಲ್ಲರೂ ಸಂಭಾಷಣಾಕಾರರೇ, ಎಲ್ಲರ ಕಣ್ಣು ರಂಗದ ಮೇಲೆ ಅಭಿನಯಿಸುತ್ತಿರುವ ಕಲಾವಿದರ ಮೇಲೆಯೇ ಇರುತ್ತದೆ. ಹೀಗಾಗಿ, ರಂಗಭೂಮಿಯಂತಹ ಗಂಡು ಭೂಮಿಯಲ್ಲಿ ನಟನೆ ಮಾಡುವ ಕಲಾವಿದರು ಗೆಲ್ಲುವುದಕ್ಕೆ ನೋಡುತ್ತಾರೆ. ಹೀಗಾಗಿಯೇ ರಂಗಭೂಮಿಯಲ್ಲಿ ಕಲಾವಿದರು ಗೆಲ್ಲಬಹುದೇ ಹೊರತು ಸೋಲುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.ರಂಗಭೂಮಿ ಕಲಾವಿದರಿಗೆ ಬದ್ಧತೆ ಎನ್ನುವುದು ರೂಢಿಗತವಾಗಿ ಬಂದುಬಿಡುತ್ತದೆ. ಏನೇ ಆದರೂ ಪ್ರದರ್ಶನ ಸಾಗಲೇಬೇಕು ಎನ್ನುವ ಧೋರಣೆ ಅವರಲ್ಲಿ ಮನೆ ಮಾಡಿಬಿಟ್ಟಿರುತ್ತದೆ. ವಯಸ್ಸಾಗಿದ್ದರೂ, ಮಾತು ತೊದಲುತ್ತಿದ್ದರೂ, ಕೈ-ಕಾಲು ನಡುಗುತ್ತಿದ್ದರೂ ನಾಟಕದಲ್ಲಿ ಅಭಿನಯಿಸಲು ಅವರ ಮನಸ್ಸು ತುಡಿಯುತ್ತಿರುತ್ತದೆ. ಜೀವ ಹೋಗುವವರೆಗೂ ರಂಗದ ಮೇಲೆ ಅಭಿನಯಿಸುತ್ತಿರಬೇಕು. ಸಣ್ಣ ಪಾತ್ರವನ್ನಾದರೂ ಮಾಡಬೇಕು ಎನ್ನುವ ಹುಮ್ಮಸ್ಸು ಇರುತ್ತದೆ. ಕೆಲವರು ಇಂತಹ ಹುಚ್ಚಿನಿಂದಾಗಿ ಆ ಪಾತ್ರವನ್ನು ಕೊಡಿ ಮಾಡುತ್ತೇನೆ ಎಂದು ಬಾಯಿಬಿಟ್ಟು ಕೇಳುತ್ತಾರೆ. ಅಷ್ಟರ ಮಟ್ಟಿಗೆ ರಂಗಭೂಮಿಯ ಸಂಬಂಧ ಅವರನ್ನು ಸೆಳೆದು ಬಿಡುತ್ತದೆ ಎಂದು ಅವರು ತಿಳಿಸಿದರು.ಕಲಾವಿದರು ಒಗ್ಗಟ್ಟಾಗಬೇಕು. ಆಗ ಮಾತ್ರ ವಿಶ್ವವನ್ನೇ ಕಟ್ಟಬಹುದು. ಎಲ್ಲರೂ ಒಂದಾಗಿ ನಾಟಕಗಳನ್ನು ಪ್ರದರ್ಶನ ಮಾಡಬೇಕು. ತನ್ಮೂಲಕ ವಿಶ್ವ ರಂಗಭೂಮಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು. ರಂಗ ಗೌರವ ಇದೇ ವೇಳೆ ಹಿರಿಯ ರಂಗಕರ್ಮಿಗಳು ಹಾಗೂ ರಂಗಭೂಮಿ ಕಲಾವಿದರಾದ ಸರಸ್ವತಿ ಜುಲೇಖ ಬೇಗಂ, ಎಚ್. ಜನಾರ್ದನ, ನೂರ್ ಅಹಮ್ಮದ್ ಶೇಖ್, ಪ್ರಸಾದ್ ಕುಂದೂರು, ಚಂದ್ರಶೇಖರ ಆಚಾರ್, ಡಾ.ಎಚ್.ಎಂ. ಕುಮಾರಸ್ವಾಮಿ, ತಿಪ್ಪಣ್ಣ, ಮಾಲತಿಶ್ರೀ, ಸಿ. ಬಸವಲಿಂಗಯ್ಯ, ರಾಜಶೇಖರ ಕಂದಬ ಅವರಿಗೆ ರಂಗ ಗೌರವ ಸಮರ್ಪಿಸಲಾಯಿತು.ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕಿ ಡಾ ಎಂ.ಎ. ಜಾಹಿದಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಅಧ್ಯಕ್ಷ ರಾಜೇಶ್ ಎಚ್. ತಲಕಾಡು, ಕಾರ್ಯದರ್ಶಿ ಎಂ.ಪಿ. ಹರಿದತ್ತ ಮೊದಲಾದವರು ಇದ್ದರು.