ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕಾಲ ತುಂಬ ಬದಲಾಗಿದೆ.ಮಕ್ಕಳಿಗೆ ನಾಟಕವನ್ನು ಥೆರಪಿಯಾಗಿ ಕಲಿಸಬೇಕಿದೆ.ರಂಗಭೂಮಿ ಮಕ್ಕಳ ಮಾನಸಗಂಗೋತ್ರಿ ಎಂದು ನಾಟಕಕಾರ ಕೋಟಗಾನಹಳ್ಳಿ ರಾಮಯ್ಯ ತಿಳಿಸಿದರು.ರಂಗಾಯಣದ ವನರಂಗದಲ್ಲಿ ಮಂಗಳವಾರ ಆಯೋಜಿಸಿದ್ದ ಬಾಲ್ಯ ಅಮೂಲ್ಯ ಶೀರ್ಷಿಕೆಯ ಚಿಣ್ಣರ ಮೇಳದ ಕೋಟಗಾನಹಳ್ಳಿ ರಾಮಯ್ಯ ನಾಟಕಕೋತ್ಸವ ಚಾಲನಾ ಸಮಾರಂಭದಲ್ಲಿ ರಂಗಾಯಣದ ಗೌರವ ಸ್ವೀಕರಿಸಿ ಮಾತನಾಡಿದರು.25 ವರ್ಷಗಳ ಹಿಂದೆ ನನ್ನ ಮಕ್ಕಳನ್ನು ಚಿಣ್ಣರ ಮೇಳಕ್ಕೆ ಸೇರಿಸಲು ಕರೆತಂದಿದ್ದೆ. ಆಗ ಪಂಚತಂತ್ರ ನಾಟಕ ಕಲಿಸುವುದಾಗಿ ನಿರ್ದೇಶಕರು ಹೇಳಿದರು. ಅದು ಮಿತ್ರ ಭೇದ ಹೇಳುತ್ತದೆ ಬೇಡವೆಂದಾಗ ನನ್ನನ್ನೇ ನಾಟಕ ಬರೆಯಲು ಹೇಳಿದರು. ಅವರ ಒತ್ತಾಯದಿಂದ ಒಗಟಿನ ರಾಣಿ ನಾಟಕ ಬರೆದೆ. ಒಗಟುಗಳು ನಮ್ಮ ಮಕ್ಕಳಿಗೆ ಬೇರೆ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ನಮ್ಮ ಹಿರೀಕರು ಹಲವು ಜಗತ್ತನ್ನು ಮಕ್ಕಳ ಕಲ್ಪನೆಗೆ ತರುತ್ತಾರೆ. ಎರಡನೇ ನಾಟಕ ನಾಯಿತಿಬ್ಬಕ್ಕೆ ಆಕ್ಷೇಪ ವ್ಯಕ್ತವಾದರೂ ಮಕ್ಕಳು ಅದ್ಭುತವಾಗಿ ನಟಿಸಿದ್ದಾಗಿ ಅವರು ಹೇಳಿದರು.ಸಿನಿಮಾಕ್ಕೆ ಬರೆಯುತ್ತಿದ್ದ ನಾನು ಮಕ್ಕಳಿಗೆ ನಾಟಕ ಬರೆಯುವುದು ಕರ್ತವ್ಯ ಮತ್ತು ಜವಾಬ್ದಾರಿ ಎಂದುಕೊಂಡು ಹಠಕ್ಕೆ ಬಿದ್ದು ನಾಟಕಗಳನ್ನು ಬರೆದೆ.ಅದಕ್ಕೆ ಕಾರಣರಾದ ಎಲ್ಲ ನಾಟಕಕಾರರಿಗೂ ನಮಿಸುವುದಾಗಿ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ದೇಶದ ಕವಲು ದಾರಿಯಲ್ಲಿ ಸಾಗುತ್ತಿದೆ.ಅದನ್ನು ಸರಿ ದಾರಿಗೆ ತರುವುದು ರಂಗಭೂಮಿಯಿಂದ ಸಾಧ್ಯವಿದೆ. ಮಕ್ಕಳಲ್ಲಿ ಸಮ ಸಮಾಜದ ನಿರ್ಮಾಣದ ಬೀಜವನ್ನು ಅವರ ತಲೆಯೊಳಗೆ ಸೇರಿಸುವುದು.ಮಕ್ಕಳಲ್ಲಿ ತರತಮ ತರದೇ ನಾವೆಲ್ಲರೂ ಭಾರತೀಯರು ಎಂಬ ಭಾವನೆ ತರಬೇಕಿದೆ ಎಂದರು.ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೈಸೂರು ರಂಗಾಯಣ ಜನಮನ ಸೂರೆಗೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಂಗಾಯಣಲ ನಿರ್ದೇಶಕ ಸತೀಶ್ ತಿಪಟೂರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಮಣ್ಣ ಅವರು 36 ನಾಟಕಗಳನ್ನು ಮಕ್ಕಳಿಗಾಗಿ ಬರೆದಿದ್ದಾರೆ. ಅವುಗಳಲ್ಲಿ 12 ನಾಟಕಗಳನ್ನು ಶಿಬಿರಾರ್ಥಿಗಳು ಅಭಿನಯಿಸಲಿದ್ದಾರೆ. ಈ ನಾಟಕಗಳು ರಮ್ಯಲೋಕದಲ್ಲಿ ಮುಳುಗಿಸದೆ ವಾಸ್ತವತೆ ಕಡೆಗೆ ಬೆರಳು ತೋರಿಸುತ್ತವೆ ಎಂದರು. ರಂಗಕರ್ಮಿ ಸಿ. ಬಸಲಿಂಗಯ್ಯ ಅವರು ಶಿಬಿರಾರ್ಥಿ ಲೇಖನಗೆ ಬಣ್ಣ ಹಚ್ಚುವ ಮೂಲಕ ಕೋಟಗಾನಹಳ್ಳಿ ರಾಮಯ್ಯ ನಾಟಕಕೋತ್ಸವಕ್ಕೆ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಂಗ ಸಮಾಜದ ಸದಸ್ಯರಾದ ಲಕ್ಷ್ಮೀ ಚಂದ್ರಶೇಖರ್, ಸುರೇಶ್ ಬಾಬು, ಶಿಬಿರದ ನಿರ್ದೇಶಕ ಅನಿಲ್ ರೆವೂರ್ ಇದ್ದರು.ರಂಗಾಯಣ ಉಪ ನಿರ್ದೇಶಕ ಡಾ.ಎಂ.ಡಿ ಸುದರ್ಶನ್ ಸ್ವಾಗತಿಸಿದರು. ಶಿಬಿರದ ಮಕ್ಕಳು ಆಶಯ ಗೀತೆ ಹಾಡಿದರು.---ಕೋಟ್ಬಹುತೇಕ ತಂದೆ ತಾಯಿಗಳು, ಸಮಾಜ ಮಕ್ಕಳ ಮನಸ್ಸನ್ನು ಡಸ್ಟ್ ಬಿನ್ ಎಂದು ತಿಳಿದುಕೊಂಡು ಬೇಡದಿರುವುದನ್ನು ತುಂಬುತ್ತಿದ್ದಾರೆ.- ಕೋಟಗಾನಹಳ್ಳಿ ರಾಮಯ್ಯ, ನಾಟಕಕಾರ.