ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆ ರಂಗೇರಿದೆ. ಉದ್ಯೋಗಾಕಾಂಕ್ಷಿಗಳ ಹೋರಾಟದ ಮೂಲಕ ಗಮನ ಸೆಳೆದಿರುವ ಕಾಂತಕುಮಾರ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಜೆನ್‌ ಝೀ ಅಭ್ಯರ್ಥಿಯೆಂದು ಗುರುತಿಸಲ್ಪಟ್ಟಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆ ರಂಗೇರಿದೆ. ಉದ್ಯೋಗಾಕಾಂಕ್ಷಿಗಳ ಹೋರಾಟದ ಮೂಲಕ ಗಮನ ಸೆಳೆದಿರುವ ಕಾಂತಕುಮಾರ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಜೆನ್‌ ಝೀ ಅಭ್ಯರ್ಥಿಯೆಂದು ಗುರುತಿಸಲ್ಪಟ್ಟಿದ್ದಾರೆ.

ಈ ಮೂಲಕ ಬಿಜೆಪಿ, ಕಾಂಗ್ರೆಸ್‌ ಪಕ್ಷಕ್ಕೆ ಸಡ್ಡು ಹೊಡೆದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಾಂಗ್ರೆಸ್‌ ಟಿಕೆಟ್‌ ವಂಚಿತರೊಬ್ಬರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇದು ಯಾರಿಗೆ ಮಗ್ಗಲ ಮುಳ್ಳಲಾಗಲಿದೆ ಎಂಬ ರಾಜಕೀಯ ವಿಶ್ಲೇಷಣೆ ಆಗಲೇ ಶುರುವಾಗಿದೆ.

ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಹೀಗೆ ನಾಲ್ಕು ಜಿಲ್ಲೆಗಳ ವ್ಯಾಪ್ತಿಯುಳ್ಳ ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಇಷ್ಟೊಂದು ತುರುಸು ಕಂಡು ಬಂದಿದ್ದು ಕ್ಷೇತ್ರದಲ್ಲಿ 88 ಸಾವಿರಕ್ಕೂ ಅಧಿಕ ಮತದಾರರು ಇಲ್ಲಿದ್ದಾರೆ.

ಮತ್ತೆ ಕೈ ವಶಕ್ಕೆ ಪ್ರಯತ್ನ:

ಈ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್‌ ವಶದಲ್ಲೇ ಇತ್ತು. ಮೊದಲ ಮೂರು ಚುನಾವಣೆಗಳಲ್ಲಿ ವೈ.ಎಸ್‌. ಪಾಟೀಲ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಬಳಿಕ 1984ರರಲ್ಲಿ ಕಾಂಗ್ರೆಸ್‌ನಿಂದ ಎಚ್‌.ಕೆ. ಪಾಟೀಲ ಪ್ರಥಮ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ವಿಧಾನಪರಿಷತ್‌ ಹಾಗೂ ರಾಜಕೀಯ ರಂಗ ಪ್ರವೇಶಿಸಿದ್ದರು. ಅಲ್ಲಿಂದ 1990, 1996 ಹಾಗೂ 2002ರಲ್ಲಿ ಹೀಗೆ ಬರೋಬ್ಬರಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು.

2008ರಲ್ಲಿ ನಡೆದ ಚುನಾವಣೆಯಲ್ಲಿ ಎಚ್‌.ಕೆ. ಪಾಟೀಲ ವಿರುದ್ಧ ಬಿಜೆಪಿಯಿಂದ ಮೋಹನ ಲಿಂಬಿಕಾಯಿ ಕಣಕ್ಕಿಳಿದು ಸೋಲಿಸಿ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಲಿಂಬಿಕಾಯಿ 2013ರಲ್ಲಿ ಕೆಜೆಪಿಯೊಂದಿಗೆ ಸೇರಿ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. 2014 ಹಾಗೂ 2020ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಎಸ್‌.ವಿ. ಸಂಕನೂರು ಗೆಲುವು ಸಾಧಿಸಿದ್ದರಿಂದ ಕ್ಷೇತ್ರ ಬಿಜೆಪಿ ವಶದಲ್ಲಿದೆ. ಕಾಂಗ್ರೆಸ್‌ನಿಂದ ಬಿಜೆಪಿ ವಶಕ್ಕೆ ಕ್ಷೇತ್ರ ತೆಗೆದುಕೊಂಡಿದ್ದ ಮೋಹನ ಲಿಂಬಿಕಾಯಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಇವರಿಂದ ಮತ್ತೆ ಕ್ಷೇತ್ರವನ್ನು ಕೈವಶಕ್ಕೆ ಪಡೆಯಬೇಕೆಂಬ ಹುಮ್ಮಸ್ಸು ಕಾಂಗ್ರೆಸ್‌ನದು. ಇನ್ನು ಎರಡು ಬಾರಿ ಗೆಲುವು ಸಾಧಿಸಿರುವ ಸಂಕನೂರ ಅವರೇ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಕೈಗೆ ಕುಬೇರಪ್ಪ ಬಂಡಾಯ:

ಈ ನಡುವೆ ರಾಣಿಬೆನ್ನೂರು ಮೂಲದ ಆರ್‌.ಎಂ. ಕುಬೇರಪ್ಪ ಕೂಡ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. 2020ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಅವರು ಈ ಬಾರಿ ತಮಗೆ ಟಿಕೆಟ್‌ ಸಿಗುತ್ತದೆ ಎಂದು ಚುನಾವಣೆಗೂ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಅವರು

ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ (ಅ.6) ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಸಡ್ಡು ಹೊಡೆದಿರುವ ಅವರು ಮತ ಕಸಿದುಕೊಳ್ಳುವುದು ಖಚಿತ. ಸ್ಥಾನಮಾನದ ಸ್ಪಷ್ಟ ಭರವಸೆ ಸಿಕ್ಕರೆ ಕಣದಿಂದ ಹಿಂಪಡೆಯುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಇವರನ್ನು ಸಮಾಧಾನಪಡಿಸುವ ಪ್ರಯತ್ನಗಳು ನಡೆದಿವೆ.

ಒಟ್ಟಿನಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಅಖಾಡ ಸಂಪೂರ್ಣ ರಂಗೇರಿದ್ದು, ಅತ್ತ ಜೆನ್‌ ಝಿ, ಇತ್ತ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಯಾರಿಗೆ ಮಗ್ಗಲ ಮುಳ್ಳಾಗುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.ಜೆನ್‌ ಝೀ ಅಭ್ಯರ್ಥಿ ಕಣಕ್ಕೆ..!

ಈ ನಡುವೆ ಈ ಎಲ್ಲರಿಗೂ ಸಡ್ಡು ಹೊಡೆಯಲೆಂದು ಇದೇ ಮೊದಲ ಬಾರಿಗೆ ಜೆನ್‌ ಝಿ ಅಭ್ಯರ್ಥಿಯಾಗಿ ವಿದ್ಯಾರ್ಥಿ ಸಂಘಟನೆ ಮುಖಂಡ, ರಾಜ್ಯ ಸರ್ಕಾರದ ಖಾಲಿ ಹುದ್ದೆಗಳ ಭರ್ತಿಗೆ ನಡೆಸಿದ ಹೋರಾಟದ ರೂವಾರಿಯೂ ಆದ ಕಾಂತಕುಮಾರ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಜೆನ್‌ ಝಿ ಕೂಡ ರಂಗ ಪ್ರವೇಶ ಮಾಡಿದಂತಾಗಿದೆ. ಈ ವರೆಗೆ ರಾಜ್ಯ ಸರ್ಕಾರದ ಖಾಲಿ ಹುದ್ದೆಗಳ ಭರ್ತಿಗಾಗಿಯೇ ಹೋರಾಟ ನಡೆಸಿದವರು ಕಾಂತಕುಮಾರ. ಕೇಂದ್ರ ಸರ್ಕಾರದ ವಿರುದ್ಧ ಚಕಾರ ಎತ್ತಿದವರಲ್ಲ. ಬಿಜೆಪಿಯ ಬೆಂಬಲಿಗರಾಗಿದ್ದವರು ಎಂದು ಹೇಳಲಾಗುತ್ತಿದೆ. ಹೀಗಾಗಿ ಇವರ ಸ್ಪರ್ಧೆಯಿಂದ ಬಿಜೆಪಿಗೆ ಹೊಡೆತ ಬೀಳಲಿದೆ ಎಂದು ವಿಶ್ಲೇಷಣೆ ನಡೆದಿದೆ.

ಫೋಟೋಗಳು

ಎಸ್‌.ವಿ.ಸಂಕನೂರ

ಮೋಹನ ಲಿಂಬಿಕಾಯಿ

ಆರ್‌.ಎಂ.ಕುಬೇರಪ್ಪ

ಕಾಂತಕುಮಾರ