ಮತ್ತೆ ಹೊಳೆಯಾದ ರಂಗಿನಕಟ್ಟೆ ಹೆದ್ದಾರಿ

| Published : Jul 19 2024, 12:56 AM IST

ಸಾರಾಂಶ

ಭಟ್ಕಳ ತಾಲೂಕಿನಲ್ಲಿ ಗುರುವಾರ ಬೆಳಗ್ಗೆಯವರೆಗೆ 125 ಮಿಮೀ ಮಳೆಯಾಗಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗೆಯವರೆಗೆ ಭಾರೀ ಮಳೆ ಸುರಿದಿತ್ತು. ಭಾರೀ ಮಳೆಗೆ ರಂಗಿನಕಟ್ಟೆ ಹೆದ್ದಾರಿ ಮತ್ತೆ ಹೊಳೆಯಾಗಿತ್ತು.

ಭಟ್ಕಳ: ತಾಲೂಕಿನಲ್ಲಿ ಗುರುವಾರವೂ ಮಳೆ ಗಾಳಿಯ ಅಬ್ಬರ ಜೋರಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ತಾಲೂಕಿನಲ್ಲಿ ಗುರುವಾರ ಬೆಳಗ್ಗೆಯವರೆಗೆ 125 ಮಿಮೀ ಮಳೆಯಾಗಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗೆಯವರೆಗೆ ಭಾರೀ ಮಳೆ ಸುರಿದಿತ್ತು. ಭಾರೀ ಮಳೆಗೆ ರಂಗಿನಕಟ್ಟೆ ಹೆದ್ದಾರಿ ಮತ್ತೆ ಹೊಳೆಯಾಗಿತ್ತು. ಹೆದ್ದಾರಿಯಲ್ಲಿ ಸಂಚರಿಸುವವರು ಹಿಡಿಶಾಪ ಹಾಕುತ್ತಾ ನೀರಿನಲ್ಲಿ ಸಾಗುತ್ತಿರುವುದು ಕಂಡುಬಂತು. ರಂಗಿನಕಟ್ಟೆಯಲ್ಲಿ ಹೆದ್ದಾರಿ ಹೊಳೆ ಆಗುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಬಗೆಹರಿಸಲಾಗದ ಸಮಸ್ಯೆಯೇ ಎಂದು ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಪ್ರಶ್ನಿಸಿದ್ದಾರೆ.

ಬುಧವಾರ ರಾತ್ರಿಯ ಮಳೆಗೆ ರಂಗಿನಕಟ್ಟೆ ಹೆದ್ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ತುಂಬಿ ಕೆಲವು ವಾಹನಗಳು ನೀರಿನಲ್ಲೇ ಸಿಲುಕಿ ಪರದಾಡುವಂತಾಯಿತು. ಗುರುವಾರ ಬೆಳಗ್ಗೆಯೂ ಹೆದ್ದಾರಿಯಲ್ಲಿ ನೀರು ಇದ್ದಿದ್ದರಿಂದ ವಾಹನಗಳು ನಿಧಾನವಾಗಿ ಸರದಿ ಸಾಲಿನಲ್ಲಿ ಸಾಗುವಂತಾಯಿತು. ಭಾರೀ ಮಳೆಗೆ ಪಟ್ಟಣದ ಸಂಶುದ್ದೀನ ವೃತ್ತ, ಮುಖ್ಯರಸ್ತೆ ಸೇರಿದಂತೆ ವಿವಿಧ ಕಡೆ ಮಳೆ ನೀರು ನಿಂತು ಜಲಾವೃತಗೊಂಡಿತ್ತು. ವ್ಯಾಪಕ ಮಳೆಗೆ ಜನರು ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ. ಹೊಳೆ ಹಳ್ಳಗಳು ತುಂಬಿ ತುಳುಕುತ್ತಿದೆ.

ಪಟ್ಟಣದ ಕೋಟೇಶ್ವರ ನಗರದಲ್ಲಿ ಐಆರ್‌ಬಿಯವರು ರಸ್ತೆ ಅಗಲೀಕರಣಕ್ಕೆ ಮಣ್ಣು ತೆಗೆದಿರುವ ಜಾಗದಲ್ಲಿ ಮತ್ತೆ ಮಣ್ಣು ಕುಸಿದಿದ್ದು, ಶಾಲೆ, ದೇವಸ್ಥಾನ ಅಪಾಯದಲ್ಲಿದೆ. ಕೋಟೇಶ್ವರ ನಗರ ಅಪಾಯದಲ್ಲಿದ್ದರೂ ಅಧಿಕಾರಿಗಳು ಗಮನ ಹರಿಸದೇ ಇರುವುದಕ್ಕೆ ಅಲ್ಲಿನ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರೀ ಮಳೆಗೆ ಬೈಲೂರು ಗ್ರಾಮದ ಪಾರ್ವತಿ ಗಣಪಯ್ಯ ನಾಯ್ಕ ಅವರ ಮನೆಯು ಭಾಗಶಃ ಬಿದ್ದಿದೆ. ಬೇಂಗ್ರೆಯ ಮೂಡಶಿರಾಲಿಯ ಪ್ರಾಥಮಿಕ ಶಾಲೆಯ ಶೌಚಾಲಯದ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಹಾಡವಳ್ಳಿಯ ಅರವಕ್ಕಿ ಗ್ರಾಮದ ಸಂತೋಷ ಮಹಾಬಲ ಶೆಟ್ಟಿ ಅವರ ಮನೆ ಭಾಗಶಃ ಹಾನಿಯಾಗಿದೆ. ಮಾವಳ್ಳಿಯ ದೀವಗಿರಿ ಗ್ರಾಮದ ಪದ್ಮಾ ಮಂಜುನಾಥ ನಾಯ್ಕ ಅವರ ಮನೆ ಬಿದ್ದಿದೆ. ಬೈಲೂರು ಗ್ರಾಮದ ದೊಡ್ಡಬಲ್ಸೆ ನಿವಾಸಿ ವಸಂತಿ ಶಂಕರ ಹರಿಕಾಂತ ಅವರ ಮನೆ ಮುರಿದಿದೆ.

ಕೊಪ್ಪ ಗ್ರಾಮದ ನಿವಾಸಿ ರತ್ನ ನಾಯ್ಕ ಅವರ ಮನೆಯ ಗೋಡೆ ಭಾಗಶಃ ಕುಸಿದಿದೆ. ಪಟ್ಟಣದ ಆಸರಕೇರಿಯ ಮಾದೇವ ಮಾಸ್ತಪ್ಪ ನಾಯ್ಕ ಅವರ ಮನೆಗೆ ಹಾನಿಯಾಗಿದೆ.

ರಂಗಿನಕಟ್ಟೆಯಲ್ಲಿ ಹೆದ್ದಾರಿ ಹೊಳೆ ಆಗುತ್ತಿರುವುದಕ್ಕೆ ತೀವ್ರ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಗುರುವಾರ ಪುರಸಭೆಯಿಂದ ರಂಗಿನಕಟ್ಟೆ ಸುತ್ತಮುತ್ತಲಿನ ಪ್ರದೇಶಗಳ ಸಮೀಕ್ಷೆ ನಡೆಸಲಾಗಿದ್ದು, ರಾಜಕಾಲುವೆ ಬಂದ್ ಮಾಡಿ ಮನೆ ಕಟ್ಟಿಕೊಂಡವರಿಗೆ ನೋಟಿಸ್‌ ನೀಡಿ ರಾಜಕಾಲುವೆ ತೆರವು ಮಾಡುವಂತೆ ನಿರ್ದೇಶನ ನೀಡಲಾಗುತ್ತಿದೆ ಎಂದು ಮುಖ್ಯಾಧಿಕಾರಿ ನೀಲಕಮಠ ಮೇಸ್ತ ತಿಳಿಸಿದ್ದಾರೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ.