ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಂಗಭೂಮಿ ಕಲಾವಿದೆ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ ಆ.೨೧ರಿಂದ ೨೫ರವರೆಗೆ ಮಳವಳ್ಳಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಂಗೋತ್ಸವ ಆಯೋಜಿಸಲಾಗಿದೆ ಎಂದು ರಂಗಬಂಡಿ ಮಳವಳ್ಳಿ ಟ್ರಸ್ಟ್ ಅಧ್ಯಕ್ಷ ಮಧು ತಿಳಿಸಿದರು.ಯುಜನರಲ್ಲಿ ರಂಗಾಸಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ರಂಗೋತ್ಸವ ಆಯೋಜಿಸಲಾಗಿದೆ. ಅದರಂತೆ ಕನ್ನಡ ವೃತ್ತಿ ರಂಗಭೂಮಿಯ ಐತಿಹಾಸಿಕ ರೂಪಕವಾಗಿದ್ದ ಸುಂದರಮ್ಮ ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆ.೨೧ರಂದು ಸಂಜೆ ೬ಗಂಟೆಗೆ ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ರಂಗೋತ್ಸವವನ್ನು ಉದ್ಘಾಟಿಸಲಿದ್ದು, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು. ರಂಗಭೂಮಿ ನಟಿ ಉಮಾಶ್ರೀ ಅವರಿಗೆ ಮಳವಳ್ಳಿ ಸುಂದರಮ್ಮ ರಂಗ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪ್ರದಾನ ಮಾಡುವರು. ಅಂತೆಯೇ ಮೈಸೂರಿನ ರಂಗ ನಿರ್ದೇಶಕ ವೈ.ಎಂ.ಪುಟ್ಟಣ್ಣಯ್ಯ ತಂಡದಿಂದ ವಿಶೇಷ ರಂಗಸಂಗೀತ ಕಾರ್ಯಕ್ರಮವಿರಲಿದೆ.ಆ.೨೨ರಂದು ಸಂಜೆ ೬ಗಂಟೆಗೆ ಹಿರಿಯ ರಂಗಕರ್ಮಿ ಡಾ.ಬಿ.ವಿ.ರಾಜಾರಾಮ್ ಕಾರ್ಯಕ್ರಮ ಉದ್ಘಾಟಿಸುವರು. ೬.೪೫ಕ್ಕೆ ಮಂಟೇಸ್ವಾಮಿ ಕಥಾ ಪ್ರಸಂಗ ಪ್ರದರ್ಶನವಿರಲಿದೆ. ೨೩ರಂದು ಸಂಜೆ ೬ಗಂಟೆಗೆ ಸಮಾರಂಭವನ್ನು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಉದ್ಘಾಟಿಸುವರು. ೬.೪೫ಕ್ಕೆ ನ್ಯಾಯ ಕೇಳಿದ ನಿಂಗವ್ವ ನಾಟಕ ಪ್ರದರ್ಶನ ನಡೆಯಲಿದೆ. ೨೪ರಂದು ಸಂಜೆ ೬ ಗಂಟೆಗೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಸಮಾರಂಭ ಉದ್ಘಾಟಿಸಲಿದ್ದು, ೬.೪೫ಕ್ಕೆ ಸಂಕ್ರಾಂತಿ ನಾಟಕ ಪ್ರದರ್ಶನ ಮತ್ತು ೨೫ರಂದು ಸಂಜೆ ೬ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಡಾ.ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಪ್ರಧಾನ ಭಾಷಣ ಮಾಡಲಿದ್ದಾರೆ. ರಂಗ ನಿರ್ದೇಶಕ ಬಿ.ಸುರೇಶ ಅಧ್ಯಕ್ಷತೆ ವಹಿಸಲಿದ್ದಾರೆ. ೬.೪೫ಕ್ಕೆ ದ್ರೋಪತಿ ಹೇಳ್ತವ್ಳೆ ನಾಟಕ ಪ್ರದರ್ಶನವಿರಲಿದೆ ಎಂದು ವಿವರಿಸಿದರು.
ರಂಗೋತ್ಸವದ ಸಂಚಾಲಕ ಎನ್.ಎಲ್.ಭರತ್‌ರಾಜ್, ಸಾಹಿತಿಗಳಾದ ಮ.ಸಿ.ನಾರಾಯಣ, ಶಿವಣ್ಣ, ವಿನಯ್ ಗೋಷ್ಠಿಯಲ್ಲಿದ್ದರು.