ಬ್ರಿಟಿಷರ ವಿರುದ್ಧ ನಿರಂತರ ಹೋರಾಡಿ ಪ್ರತಿ ಹಂತದಲ್ಲೂ ತಮ್ಮತನ ಎತ್ತಿ ಹಿಡಿದ ಚೆನ್ನಮ್ಮ ಇಡೀ ಮಹಿಳಾ ಕುಲಕ್ಕೆ ಧೈರ್ಯ ಮತ್ತು ಶಕ್ತಿಯ ಸಂಕೇತವಾಗಿ ಹೊರಹೊಮ್ಮಿದ್ದಾರೆ

ಕೊಟ್ಟೂರು: ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ 500ಕ್ಕೂ ಹೆಚ್ಚು ರಾಜವಂಶಸ್ಥ ಮತ್ತು ರಾಜರಾಣಿಯರ ಪೈಕಿ ಪ್ರತಿಯೊಬ್ಬರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದ ವೀರಮಹಿಳೆಯಾಗಿದ್ದರು. ಪ್ರತಿಯೊಬ್ಬರಲ್ಲಿ ರಾಷ್ಟ್ರಾಭಿಮಾನ, ನಾಡಾಭಿಮಾನ ಬೆಳಗಿಸಿದ ಮಹಾನ್ ಮಾತೆ ಚೆನ್ನಮ್ಮ ಎಂದು ಪಂಚಮಸಾಲಿ ಸಮಾಜದ ಹರಿಹರ ಪೀಠದ ಜಗದ್ಗುರು ವಚನಾನಂದ ಸ್ವಾಮಿಗಳು ಹೇಳಿದರು.

ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಮತ್ತು ಕಂಚಿನ ಪುತ್ಥಳಿ ನಿರ್ಮಾಣದ ಅಡಿಗಲ್ಲು ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬ್ರಿಟಿಷರ ವಿರುದ್ಧ ನಿರಂತರ ಹೋರಾಡಿ ಪ್ರತಿ ಹಂತದಲ್ಲೂ ತಮ್ಮತನ ಎತ್ತಿ ಹಿಡಿದ ಚೆನ್ನಮ್ಮ ಇಡೀ ಮಹಿಳಾ ಕುಲಕ್ಕೆ ಧೈರ್ಯ ಮತ್ತು ಶಕ್ತಿಯ ಸಂಕೇತವಾಗಿ ಹೊರಹೊಮ್ಮಿದ್ದಾರೆ ಎಂದ ಅವರು, ಧರ್ಮ ಜಾಗೃತಿಯಾಗಬೇಕು ಈ ಕಾರಣಕ್ಕಾಗಿ ಪ್ರತಿಯೊಬ್ಬರು ದೇಶ ಮತ್ತು ಸಮಾಜ ಕಟ್ಟುವ ಕೆಲಸ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.

ಪಂಚಮಸಾಲಿ ಸಮಾಜ ಸಂಘಟನೆಯ ಶಕ್ತಿ ಸ್ವಾರ್ಥಕ್ಕೆ ಬಳಸಿಕೊಂಡು ಕೋಟ್ಯಂತರ ತಿಂದುಂಡ ಸಮಾಜದ ಒಂದು ವರ್ಗ ಇದೀಗ ಹರಿಹರ ಗುರುಪೀಠ ಮತ್ತು ಸ್ವಾಮೀಜಿ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಇದರ ಪೂರ್ಣ ಪ್ರಜ್ಞೆ ಜನತೆಗಿದ್ದು ಯಾವುದೇ ಕಾರಣಕ್ಕೂಪೀಠದ ಸ್ಥಾನದಿಂದ ತಮ್ಮನ್ನು ಯಾರೊಬ್ಬರು ಕದಲಿಸಲು ಆಗದು ಪಂಚಮಸಾಲಿ ಸಮಾಜ ಬಾಂಧವರ ಅಖಂಡ ಬೆಂಬಲ ತಮಗಿದ್ದು ಯಾವುದೇ ಕಾರಣಕ್ಕೂ ಸಮಾಜದಲ್ಲಿ ಒಡಕು ಉಂಟು ಮಾಡುತ್ತಿರುವ ಶಕ್ತಿಗಳಿಗೆ ಮಣಿಯಲಾರೆ ಎಂದು ಟ್ರಸ್ಟ್ ನ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

ಸಂಪನ್ಮೂಲ ವ್ಯಕ್ತಿ ಸವಿತಾ ರಮೇಶ ಮಾತನಾಡಿ, ಕಿತ್ತೂರಾಣಿ ಚೆನ್ನಮ್ಮಳಂತೆ ಸಮಾಜದ ಪ್ರತಿ ಮಹಿಳೆ ಕೆಲಸ ಮಾಡುವತ್ತ ಮುಂದಾಗಬೇಕು, ಈ ಮೂಲಕ ಬೃಹತ್ ಸಮಾಜ ಮತ್ತು ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಮೃತ್ಯುಂಜಯ ಬಾದಾಮಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷ ಬಿ.ಆರ್. ವಿಕ್ರಮ್, ಎಂ.ಎಂ.ಜೆ. ಶೋಬಿತ್, ಸಾವಜ್ಜಿ ರಾಜೇಂದ್ರ ಪ್ರಸಾದ್, ಪಂಪಾಪತಿ ಅಂಗಡಿ ಮಾತನಾಡಿದರು.

ಶಾಸಕ ಕೆ. ನೇಮಿರಾಜ್ ನಾಯ್ಕ, ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಚಾಪಿ ಚಂದ್ರಪ್ಪ, ಕಂದಗಲ್ ನೀಲಕಂಠಪ್ಪ, ರಾಂಪುರ ಕೆ. ವಿವೇಕಾನಂದಗೌಡ, ನಿಂಬಳಗೆರೆ ಕಲ್ಲೇಶಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ, ಗ್ರಾಪಂ ಸದಸ್ಯ ಕೊಟ್ರೇಶಪ್ಪ, ಗುರುಬಸವರಾಜ, ಗೌಡ್ರು ವೀರನಗೌಡ, ಸುರೇಶ ಮತ್ತಿತರರು ವೇದಿಕೆಯಲ್ಲಿದ್ದರು. ಶಿಕ್ಷಕ ಶಿವಕುಮಾರ ಸ್ವಾಗತಿಸಿದರು. ಶಿಕ್ಷಕರುಗಳಾದ ವೀರಭದ್ರಪ್ಪ ಮತ್ತು ಹಳ್ಳಿ ಆನಂದ್ ನಿರೂಪಿಸಿದರು.