ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಾತಿ ಮೀರಿ ಬದುಕಿದ್ದ ಕಿತ್ತೂರು ರಾಣಿ ಚೆನ್ನಮ್ಮ ತನ್ನ ಸಾಮ್ರಾಜ್ಯದಲ್ಲಿ ಜನಸಾಮಾನ್ಯರನ್ನು ಒಗ್ಗೂಡಿಸಿಕೊಂಡು ಈ ದೇಶದ ಒಳಿತಿಗಾಗಿ ಸ್ವಾತಂತ್ರ್ಯ ಹೋರಾಟ ಮಾಡಿದರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ನಗರದ ಕುವೆಂಪು ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಸ್ವಾತಂತ್ರ ಹೋರಾಟವನ್ನು ನೆನಪು ಮಾಡುವ ದಿಸೆಯಲ್ಲಿ, ನಮ್ಮೆಲ್ಲರ ಮುಂದಿನ ಜೀವನ ಹೇಗೆಲ್ಲಾ ಆದರ್ಶಪ್ರಾಯವಾಗಿರಬೇಕೆಂಬ ಉದ್ದೇಶದಲ್ಲಿ ರಾಜ್ಯ ಸರ್ಕಾರ ಇಂತಹ ಮಹನೀಯರ ಜಯಂತಿಯನ್ನು ಮಾಡುತ್ತಿದ್ದು, ನಾವೆಲ್ಲರೂ ಅವರ ಜೀವನಾನುಕ್ರಮವನ್ನು ಅರಿತುಕೊಳ್ಳಬೇಕಿದೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಕೊಡುಗೆ ಅಪಾರ. ಬ್ರಿಟಿಷರು ಹಾಗೂ ಮೊಘಲರ ವಿರುದ್ದ ಹೋರಾಡಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಸದಾ ಸಮಾಜಕ್ಕೆ ಒಳಿತಾಗಬೇಕೆಂದು ಯೋಚಿಸುತ್ತಿದ್ದರು. ಜಾತಿ ಭೇದದ ಅಂಕೆ ಇಲ್ಲದೆ ಎಲ್ಲರನ್ನೂ ದೇಶದ ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇವರು ಸಮಗ್ರವಾಗಿ ಯೋಚಿಸಿ ರಾಜ್ಯಭಾರ ಮಾಡಿದರು ಎಂದರು.ಕಿತ್ತೂರು ರಾಣಿ ಚೆನ್ನಮ್ಮನ ಆದರ್ಶವನ್ನು ಇಂದಿನ ಯುವ ಪಿಳಿಗೆಗಳಿಗೆ ತಿಳಿಸುವ ಪ್ರಯತ್ನ ಮಾಡಬೇಕು. ಇದರಿಂದ ಅವರ ಹೋರಾಟದ ಬದುಕು, ಜೀವನಶೈಲಿಯನ್ನು ಅರಿತುಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಉಪನ್ಯಾಸಕ, ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ಸಂಚಾಲಕ ಡಾ.ಗಣೇಶ ಆರ್. ಕೆಂಚನಾಲ್ ವಿಶೇಷ ಉಪನ್ಯಾಸ ನೀಡಿ, 1778ರ ಅ.23ರಂದು ಬೆಳಗಾವಿಯ ಕಾಕತೀಯ ಹಳ್ಳಿಯಲ್ಲಿ ಜನಿಸಿದ ಚೆನ್ನಮ್ಮ, ಆರಂಭದಲ್ಲೆ ಕತ್ತಿವರೆಸಿ ಸೇರಿದಂತೆ ಅನೇಕ ಯುದ್ಧೋಪಾಯವನ್ನು ಕಲಿತಳು. ತನ್ನ 15ನೇ ವಯಸ್ಸಿನಲ್ಲಿ ಮಲ್ಲಸರ್ಜನ 2ನೇ ಮಡದಿಯಾಗಿ ವಿವಾಹವಾದರು. ನಂತರ ರಾಜ್ಯದ ಜವಾಬ್ದಾರಿಯನ್ನು ಹೊತ್ತ ಚೆನ್ನಮ್ಮ 1824ರಲ್ಲಿ ದತ್ತುಪುತ್ರನನ್ನು ಸ್ವೀಕಾರ ಮಾಡುವ ಮೂಲಕ ಬ್ರಿಟಿಷರ ನಿಯಮವನ್ನು ಮುರಿದಳು. ಇದರಿಂದ ಕೋಪಗೊಂಡ ಬ್ರಿಟಿಷ್ ಅಧಿಕಾರಿ ಠಾಕ್ರೆ ಕಿತ್ತೂರಿನ ಮೇಲೆ ಯುದ್ದ ಸಾರಿದ, ಚೆನ್ನಮ್ಮ ತಾಕ್ರೆ ಸೈನ್ಯವನ್ನು ಯುದ್ದದಲ್ಲಿ ಸೋಲಿಸಿದಳು. ಆ ಮೂಲಕ ದೇಶದಲ್ಲಿ ಬ್ರಿಟಿಷರನ್ನು ಪ್ರಥಮ ಬಾರಿಗೆ ಸಂಪೂರ್ಣವಾಗಿ ಸೋಲಿಸಿ ಕೀರ್ತಿ ಕಿತ್ತೂರು ರಾಣಿ ಚೆನ್ನಮ್ಮಗೆ ಸಲ್ಲುತ್ತದೆ ಎಂದು ತಿಳಿಸಿದರು.ರಾಣಿ ಚೆನ್ನಮ್ಮ ಸದಾ ದೇಶ ಸೇವೆಗೆ ಹಾತೊರಿಯುತ್ತಿದ್ದಳು. ಮೊಘಲರು, ಬ್ರಿಟಿಷರ ವಿರುದ್ದ ದಿಟ್ಟವಾಗಿ ಹೋರಾಡಿದ್ದಳು. ದೇಶ, ರಾಜ್ಯ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಬೇಕು. ರಾಜ್ಯಭಾರ ಒಂದು ಕುಟುಂಬಕ್ಕೆ ಮಾತ್ರ ಸಿಮೀತವಾಗಬಾರದು, ಅದು ಜನಸಾಮಾನ್ಯರಿಗೂ ತಲುಪಬೇಕೆಂದ ಆಶಯವನ್ನು ಹೊಂದಿದ್ದಳು ಎಂದರು.
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಮಹೇಶ್ವರಪ್ಪ, ಸಂಘಟನೆಯ ಕಾರ್ಯದರ್ಶಿ ಎಂ.ಸಿದ್ದೇಶ್ ಬೇಗೂರು, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಪ್ಪ ಮೇಡ್ಲೀರಿ, ಶಿವಮೊಗ್ಗ ನಗರದ ಅಧ್ಯಕ್ಷ ಟಿ.ಎಂ.ಕುಮಾರ್, ಪೊಲೀಸ್ ಹೆಚ್ಚುವರಿ ಅಧೀಕ್ಷಕರಾದ ರಮೇಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಸಮಾಜದ ಮುಖಂಡರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))