ಸಾರಾಂಶ
ಬಳ್ಳಾರಿ: ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಸ್ಫೂರ್ತಿದಾಯಕ ಮಹಿಳೆಯಾಗಿದ್ದಾರೆ. ಅವರ ಹೋರಾಟ ಹಾಗೂ ಧೈರ್ಯ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಬೇಕು ಎಂದು ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೇಷ್ಠ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮ ಅವರು ತಮ್ಮ ಏಳನೇ ವಯಸ್ಸಿನಲ್ಲಿಯೇ ಕುದುರೆ ಸವಾರಿ, ಬಿಲ್ಲು ವರಸೆ, ಕತ್ತಿ ವರಸೆಯಲ್ಲಿ ನಿಪುಣೆ ಹೊಂದಿದ್ದವರು. ಚಿಕ್ಕಂದಿನಿಂದಲೇ ವೀರತ್ವವನ್ನು ಮೈಗೂಡಿಸಿಕೊಂಡಿದ್ದವರು. ಚೆನ್ನಮ್ಮ ಅವರ ಧೈರ್ಯ, ಶೌರ್ಯವೂ ವಿಶ್ವಕ್ಕೆ ಮಾದರಿಯಾಗಿದೆ. ಅವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸೋಣ ಎಂದು ಕರೆ ನೀಡಿದರು.ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ ಸಿದ್ಧಲಿಂಗಪ್ಪ ಅವರು, ಕಿತ್ತೂರು ಸಂಸ್ಥಾನವು ಭಾರತದಲ್ಲಿ ಮೊಟ್ಟ ಮೊದಲು ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದು, ಇಲ್ಲಿನ ಮಣ್ಣು ವೀರಾ ಸೇನಾನಿಗಳ ರಕ್ತದಿಂದ ಪಾವಿತ್ರ್ಯಗೊಂಡಿದೆ ಎಂದರು.
ಇತಿಹಾಸದ ಧೃವತಾರೆ ಕಿತ್ತೂರು ರಾಣಿ ಚೆನ್ನಮ್ಮ ಅವರು ತನ್ನ ಸಾಮ್ರಾಜ್ಯದ ರಕ್ಷಣೆಗಾಗಿ ಸಮರ್ಪಣಾ ಮನೋಭಾವ ಹೊಂದಿದ್ದರು. ಅವರ ದೇಶಪ್ರೇಮ, ಆತ್ಮವಿಶ್ವಾಸ ಕುರಿತು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಕೆಲಸವಾಗಬೇಕು ಎಂದು ರಾಣಿ ಚೆನ್ನಮ್ಮ ಅವರ ಜೀವನ ಸ್ವಾರಸ್ಯವನ್ನು ವಿವರಿಸಿದರು.ಇದೇ ವೇಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಗಣ್ಯರೆಲ್ಲರೂ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಂಪ್ಲಿಯ ಶೈಲಾ ದೇವರಮನೆ ಅವರು ದೇಶಭಕ್ತಿ ಗೀತೆಗಳು ಪ್ರಸ್ತುತ ಪಡಿಸಿದರು.
ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಯು ವಿವಿಧ ಕಲಾ ವಾದ್ಯಗಳ ಮೂಲಕ ನಗರದ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಆರಂಭಗೊಂಡು ಬಸವೇಶ್ವರ ಪುತ್ಥಳಿ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರಲ್ಲಿನ ವೇದಿಕೆ ಕಾರ್ಯಕ್ರಮದವರೆಗೆ ತಲುಪಿ ಸಂಪನ್ನಗೊಂಡಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಿ.ನಾಗರಾಜ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಜಿ.ನೀಲನಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಎನ್.ಎಂ ರಾಜೇಶ್ವರಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ, ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಸಿಂಧೂರು, ಪಾಲಿಕೆಯ ಸದಸ್ಯರಾದ ಸುರೇಖಾ ಮಲ್ಲನಗೌಡ, ಈರಮ್ಮ ಸುರೇಂದ್ರ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.