ರಾಣಿಬೆನ್ನೂರು ರೈತ ಆತ್ಮಹತ್ಯೆ: ಶವವಿಟ್ಟು ಪ್ರತಿಭಟನೆ

| Published : Jan 03 2025, 12:30 AM IST

ರಾಣಿಬೆನ್ನೂರು ರೈತ ಆತ್ಮಹತ್ಯೆ: ಶವವಿಟ್ಟು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲ ಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ತಡರಾತ್ರಿ ತಾಲೂಕಿನ ತಿರುಮಲದೇವರಕೊಪ್ಪ ಗ್ರಾಮದಲ್ಲಿ ನಡೆದಿದೆ.

ರಾಣಿಬೆನ್ನೂರು: ಸಾಲ ಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ತಡರಾತ್ರಿ ತಾಲೂಕಿನ ತಿರುಮಲದೇವರಕೊಪ್ಪ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರವಿ ಹೊನ್ನಪ್ಪ ಓಲೇಕಾರ (35) ಮೃತ ವ್ಯಕ್ತಿ. ಈತನು ಕೃಷಿಗಾಗಿ ತಾಲೂಕಿನ ಉಕ್ಕುಂದ ಗ್ರಾಮದ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನಲ್ಲಿ ₹1 ಲಕ್ಷ, ತಿರುಮಲದೇವರಕೊಪ್ಪ ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನ ಕಮಿಟಿಯವರ ಬಳಿ ₹1.90 ಲಕ್ಷ, ಖಾಸಗಿಯಾಗಿ ₹4 ಲಕ್ಷ. ಇದಲ್ಲದೆ ತಂದೆ ತಾಯಿಗಳ ವೈದ್ಯಕೀಯ ಚಿಕಿತ್ಸೆಗಾಗಿ ಎರಡು ಲಕ್ಷ ರು. ಸಾಲ ಮಾಡಿದ್ದನು. ಆದರೆ ಕಳೆದ ಮೂರ‍್ನಾಲ್ಕು ವರ್ಷಗಳಿಂದ ಪ್ರಕೃತಿ ವಿಕೋಪದಿಂದ ಸರಿಯಾದ ಬೆಳೆ ಬಾರದೆ ಸಾಲ ತೀರಿಸುವ ಚಿಂತೆಯಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದ ಸದಸ್ಯರು ದೂರಿದ್ದಾರೆ.

ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಭಟನೆ: ರೈತನ ಸಾವಿನ ಹಿನ್ನೆಲೆಯಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ನೇತೃತ್ವದಲ್ಲಿ ನಗರದ ಸರ್ಕಾರಿ ಆಸ್ಪತ್ರೆ ಬಳಿ ರೈತರು ಮೃತ ರೈತನ ಶವವಿಟ್ಟು ಪ್ರತಿಭಟನೆ ನಡೆಸಿದರು. ಸರ್ಕಾರ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು ಹಾಗೂ ರಾಜ್ಯ ಸರ್ಕಾರ ಮೃತ ರೈತರ ಕುಟುಂಬಗಳಿಗೆ ನೀಡುತ್ತಿರುವ ₹5 ಲಕ್ಷ ರು.ಗಳ ಪರಿಹಾರದ ಮೊತ್ತವನ್ನು ₹25 ಲಕ್ಷಕ್ಕೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು. ಚಂದ್ರಣ್ಣ ಬೇಡರ, ಕೃಷ್ಣಮೂರ್ತಿ ಲಮಾಣಿ, ರಂಗಪ್ಪ ಪೂಜಾರ, ಗೋವಿಂದಪ್ಪ ತಳವಾರ, ಸುರೇಶ ತಳವಾರ, ಸೋಮರಡ್ಡಿ ಮೈದೂರ, ಚನ್ನಬಸನಗೌಡ ಗೌಡರ, ಚಂದ್ರು ಓಲೇಕಾರ, ಸುವರ್ಣಮ್ಮ ಓಲೇಕಾರ, ರೇಖಾ ಓಲೇಕಾರ ಮತ್ತಿತರರು ಪ್ರತಿಭಟನೆಯಲ್ಲಿದ್ದರು.