ಸಾರಾಂಶ
ರಾಣಿಬೆನ್ನೂರು: ನಗರದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಇತ್ತೀಚಿಗೆ ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಲಾದ ಅನುದಾನ ಸಮರ್ಪಕವಾಗಿ ಬಳಕೆಯಾಗಲಿ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.
ನಗರದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ನಗರದ ಪ್ರಮುಖ ಸರ್ಕಲ್‌ಗಳ ಅಭಿವೃದ್ಧಿಗಾಗಿ ₹50 ಲಕ್ಷ, ನಗರ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ₹30 ಲಕ್ಷ, ನಗರಸಭೆ ವ್ಯಾಪ್ತಿಯಲ್ಲಿ ಆಯ್ದ ಸ್ಥಳಗಳಲ್ಲಿ ಜನರ ಅನುಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ₹15 ಲಕ್ಷ, ನಗರಸಭೆ ಹೈಸ್ಕೂಲ್ ಅಭಿವೃದ್ಧಿಗಾಗಿ ₹30 ಲಕ್ಷ, ಉದ್ಯಾನ ಅಭಿವೃದ್ಧಿಗಾಗಿ ₹3 ಕೋಟಿ, ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆ ವೆಚ್ಚಕ್ಕೆ ಅನುದಾನ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಘೋಷಿಸಲಾಗಿದೆ. ಆದರೆ ಇವುಗಳಿಗೆ ಮೀಸಲಿಟ್ಟ ಅನುದಾನ ಬಳಕೆಯಾಗಬೇಕು ಎನ್ನುವ ಅಭಿಪ್ರಾಯ ಕೇಳಿಬಂದಿದೆ.ಸಿಸಿ ಕ್ಯಾಮೆರಾ: ಕಳೆದ ಸಾಲಿನ ಬಜೆಟ್‌ನಲ್ಲಿಯೂ ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವ ಉದ್ದೇಶದಿಂದ ಅನುದಾನ ಮೀಸಲಿಡಲಾಗಿತ್ತು. ಆದರೆ ಈಗಾಗಲೇ ಹಿಂದೆ ನಗರದಲ್ಲಿ ಅಳವಡಿಕೆ ಮಾಡಿರುವ ಸಿಸಿ ಕ್ಯಾಮೆರಾಗಳ ನಿರ್ವಹಣೆಯ ಒಳಜಗಳದಿಂದ ನಿಂತಿದೆ. ಮತ್ತೆ ಹೊಸದಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡದೇ ಇರುವುದರಿಂದ ಕಳೆದ ವರ್ಷದ ಅನುದಾನ ಬಳಕೆಯಾಗಿಲ್ಲ. ಮತ್ತೆ ಈ ವರ್ಷ ₹30 ಲಕ್ಷ ಅನುದಾನ ನೀಡಲಾಗಿದೆ.
ಇನ್ನು 2024-25ನೇ ಸಾಲಿನ ಬಜೆಟ್‌ನಲ್ಲಿ ನಾಯಿಗಳ ಸಂತಾನಹರಣ ಚಿಕಿತ್ಸೆಗಾಗಿ ಸುಮಾರು ₹25 ಲಕ್ಷ ಅನುದಾನ ಮೀಸಲಿಡಲಾಗಿದ್ದು, ಅದರಲ್ಲಿ ₹16.24 ಲಕ್ಷ ಖರ್ಚು ಮಾಡಲಾಗಿದೆ. ಮತ್ತೆ ಈ ವರ್ಷವೂ ಅನುದಾನ ನೀಡಲಾಗಿದ್ದು, ಈ ವರ್ಷವಾದರೂ ಸಂಪೂರ್ಣ ಬಳಕೆ ಮಾಡುವ ಮೂಲಕ ನಾಯಿಗಳ ಹಾವಳಿ ತಪ್ಪಿಸಲಾಗುವುದೇ ಎಂಬ ಪ್ರಶ್ನೆ ಮೂಡಿದೆ.ರಾಜಕಾಲುವೆ ಅಭಿವೃದ್ಧಿಗಾಗಿ ₹75 ಲಕ್ಷ ಅನುದಾನವಿದೆ. ನಗರದಲ್ಲಿ ಮಳೆಯಾದರೆ ಸಾಕು ತಗ್ಗು ಪ್ರದೇಶದಲ್ಲಿ ನೀರು ನಿಂತು ಸಾರ್ವಜನಿಕರು ತೊಂದರೆ ಎದುರಿಸಬೇಕಾಗಿದೆ. ಆದ್ದರಿಂದ ಮಳೆಗಾಲ ಆರಂಭವಾಗುವ ಮುನ್ನ ಮೀಸಲಿಟ್ಟ ಅನುದಾನದಲ್ಲಿ ರಾಜಕಾಲುವೆ ಅಭಿವೃದ್ಧಿ ಕೆಲಸವಾಗಬೇಕಾಗಿದೆ. ಇನ್ನು ನಗರದ ಅಭಿವೃದ್ಧಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಅನುದಾನ, ಯುಜಿಡಿ ಕಾಮಗಾರಿ, ಕುಡಿಯುವ ನೀರು ನಿರ್ವಹಣೆ, ನಗರಸಭೆ ಆಸ್ತಿಯ ಅತಿಕ್ರಮಣ ತಪ್ಪಿಸಿ ಸಿಎ ಸೈಟ್‌ಗಳನ್ನು ಗುರುತಿಸಲು ಬೇಲಿ ಹಾಕಲು ಅನುದಾನ ಸೇರಿದಂತೆ ಇತರ ಅಗತ್ಯ ಕಾರ್ಯಗಳಿಗೆ ಅನುದಾನ ನೀಡಲಾಗಿದೆ. ಅವುಗಳ ಸಹ ಆದಷ್ಟು ತ್ವರಿತಗತಿಯಲ್ಲಿ ತೆಗೆದುಕೊಳ್ಳಲಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಘೋಷಣೆ ಜಾರಿಯಾಗಲಿ: ಕಳೆದ ವರ್ಷವೂ ನಗರಸಭೆ ವತಿಯಿಂದ ಮಂಡಿಸಲಾದ ಬಜೆಟ್‌ನಲ್ಲಿ ಹಲವಾರು ಘೋಷಣೆಗಳನ್ನು ಮಾಡಲಾಗಿತ್ತು. ಆದರೆ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿರಲಿಲ್ಲ. ಈ ಬಾರಿಯಾದರೂ ಬಜೆಟ್ ಘೋಷಣೆಗಳು ಸಂಪೂರ್ಣವಾಗಿ ಜಾರಿಯಾಗುವಂತಾಗಬೇಕು ಎಂದು ರಾಣಿಬೆನ್ನೂರು ನಗರ ಹಿತರಕ್ಷಣಾ ಸಮಿತಿ ಸದಸ್ಯ ಜಗದೀಶ ಅಂಕಲಕೋಟಿ ಹೇಳಿದರು.ಎಲ್ಲ ಅಂಶಗಳಿಗೆ ಆದ್ಯತೆ: ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ನಗರದ ಅಭಿವೃದ್ಧಿಗಾಗಿ ಅನೇಕ ವಿಷಯಗಳಿಗೆ ಅನುದಾನ ಮೀಸಲಿಡಲಾಗಿದೆ. ಬಜೆಟ್‌ನಲ್ಲಿ ನಂತರದಲ್ಲಿ ಒಂದೊಂದು ವಿಷಯಗಳಿಗೆ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಕೆಲಸ ಮಾಡಲಾಗುತ್ತದೆ. ಹಂತ ಹಂತವಾಗಿ ಬಜೆಟ್‌ನಲ್ಲಿರುವ ಎಲ್ಲ ಅಂಶಗಳಿಗೆ ಆದ್ಯತೆ ನೀಡಲಾಗುವುದು ಎಂದು ರಾಣಿಬೆನ್ನೂರು ನಗರಸಭೆ ಪೌರಾಯುಕ್ತ ಫಕ್ಕಿರಪ್ಪ ಇಂಗಳಗಿ ಹೇಳಿದರು.