ಸಂಖ್ಯಾಬಲ ಇಲ್ಲದಿದ್ದರೂ ಕೈವಶವಾದ ರಾಣಿಬೆನ್ನೂರು ನಗರಸಭೆ

| Published : Jan 29 2025, 01:33 AM IST

ಸಂಖ್ಯಾಬಲ ಇಲ್ಲದಿದ್ದರೂ ಕೈವಶವಾದ ರಾಣಿಬೆನ್ನೂರು ನಗರಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ನಗರಸಭೆಯಲ್ಲಿ ಸಂಖ್ಯಾಬಲದ ಕೊರತೆಯಿದ್ದರೂ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಚಂಪಾ ಬಿಸಲಹಳ್ಳಿ ಅಧ್ಯಕ್ಷರಾಗಿ ಹಾಗೂ ಕೆಪಿಜೆಪಿ ಪಕ್ಷದ ನಾಗರಾಜ ಪವಾರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ರಾಣಿಬೆನ್ನೂರು: ಸ್ಥಳೀಯ ನಗರಸಭೆಯಲ್ಲಿ ಸಂಖ್ಯಾಬಲದ ಕೊರತೆಯಿದ್ದರೂ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಚಂಪಾ ಬಿಸಲಹಳ್ಳಿ ಅಧ್ಯಕ್ಷರಾಗಿ ಹಾಗೂ ಕೆಪಿಜೆಪಿ ಪಕ್ಷದ ನಾಗರಾಜ ಪವಾರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರಸಭೆಯಲ್ಲಿ ಬಿಜೆಪಿ 15, ಕೆಪಿಜೆಪಿಯ (ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ) 10, ಕಾಂಗ್ರೆಸ್ 09 ಹಾಗೂ ಓರ್ವ ಪಕ್ಷೇತರ ಸೇರಿದಂತೆ 35 ಸದಸ್ಯರಿದ್ದು, ಶಾಸಕರು ಹಾಗೂ ಸಂಸದರ ಮತ ಸೇರಿ ಒಟ್ಟು 37 ಸದಸ್ಯರ ಸಂಖ್ಯಾಬಲವಿದೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕವಿತಾ ಹೆದ್ದೇರಿ ಹಾಗೂ ಕಾಂಗ್ರೆಸ್ಸಿನಿಂದ ಚಂಪಾ ಬಿಸಲಹಳ್ಳಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಗುರುರಾಜ ತಿಳವಳ್ಳಿ ಹಾಗೂ ಕೆಪಿಜೆಪಿಯಿಂದ ನಾಗರಾಜ ಪವಾರ ನಾಮಪತ್ರ ಸಲ್ಲಿಸಿದ್ದರು. ಚಂಪಾ ಬಿಸಲಹಳ್ಳಿ -16, ಕವಿತಾ ಹೆದ್ದೇರಿ-13 ಮತಗಳನ್ನು ಪಡೆದರು. 3 ಮತಗಳ ಅಂತರದಿಂದ ಚಂಪಾ ಗೆಲುವಿನ ನಗೆಬೀರಿದರು. ಈ ವೇಳೆ ಬಿಜೆಪಿ ಸದಸ್ಯರಾದ ಸುಮಂಗಲಾ ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ತ್ರಿವೇಣಿ ಪವಾರ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಗೈರು ಹಾಜರಾಗಿದ್ದರು. ಬಿಜೆಪಿಯ ಕಸ್ತೂರಿ ಚಿಕ್ಕಬಿದರಿ ತಟಸ್ಥವಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆಪಿಜೆಪಿಯ ನಾಗರಾಜ ಪವಾರ 18 ಮತಗಳನ್ನು ಪಡೆದು, 8 ಮತಗಳ ಅಂತರದಿಂದ ಬಿಜೆಪಿಯ ಗುರುರಾಜ ತಿಳವಳ್ಳಿ ಅವರನ್ನು ಪರಾಭವಗೊಳಿಸಿದರು. ಈ ವೇಳೆಯೂ ಬಿಜೆಪಿ ಸದಸ್ಯರುಗಳಾದ ಸುಮಂಗಲಾ ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ತ್ರಿವೇಣಿ ಪವಾರ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಗೈರು ಹಾಜರಾಗಿದ್ದರು. ಬಿಜೆಪಿಯ ಕಸ್ತೂರಿ ಚಿಕ್ಕಬಿದರಿ, ಪಾಂಡುರಂಗ ಗಂಗಾವತಿ, ರತ್ನವ್ವ ಪೂಜಾರ, ಹೊನ್ನಮ್ಮ ಕಾಟಿ, ಕೆಪಿಜೆಪಿಯ ಹುಚ್ಚಪ್ಪ ಮೆಡ್ಲೇರಿ, ಸಿದ್ದಪ್ಪ ಬಾಗಿಲರ ತಟಸ್ಥವಾಗಿದ್ದರು. ಅಸ್ವಸ್ಥಗೊಂಡ ಸದಸ್ಯೆ: ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯೆ ನೀಲಮ್ಮ ಮಾಕನೂರ ಅಸ್ವಸ್ಥಗೊಂಡರು. ತಕ್ಷಣವೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಹೀಗಾಗಿ ಅವರನ್ನು ಗೈರು ಹಾಜರಿ ಎಂದು ಪರಿಗಣಿಸಲಾಯಿತು.

ಉಪ ವಿಭಾಗಾಧಿಕಾರಿ ಚನ್ನಪ್ಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನಗರಸಭೆ ಪೌರಾಯುಕ್ತ ಎಫ್.ಐ.ಇಂಗಳಗಿ ಉಪಸ್ಥಿತರಿದ್ದರು.