ಸಾರಾಂಶ
ಧಾರವಾಡ:
ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಕೋಲ್ಕತ್ತಾದ ಕಿರಿಯ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಘಟನೆಯನ್ನು ಖಂಡಿಸಿ ಮಂಗಳವಾರ ನಗರದ ಸನ್ಮತಿ ರಸ್ತೆಯಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆ ಕೆಎಂಎಸ್) ಪ್ರತಿಭಟನೆ ನಡೆಸಿತು.ಸಂಘಟನೆಯ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ, ಕೆಲಸದ ಸ್ಥಳಗಳಲ್ಲಿ ಮಹಿಳೆಯ ಸುರಕ್ಷತೆಯ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಾಮಾಜಘಾತುಕ ಶಕ್ತಿಗಳು ಈ ಘಟನೆಯ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲೆ ದಾಳಿ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸುವ ಮತ್ತು ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಮತ್ತು ಪ್ರತಿಭಟನಾಕಾರರ ಮನಸ್ಸಿನಲ್ಲಿ ಭಯದ ಭಾವನೆ ಹುಟ್ಟಿಸಲಾಗುತ್ತಿದೆ. ಈ ಕೃತ್ಯ ಎಸಗಿಸುವ ಅಪರಾಧಿಗಳನ್ನು ರಕ್ಷಿಸಲು ಗೂಂಡಾಗಳು ನಡೆಸಿರುವ ಈ ಉದ್ದೇಶಪೂರ್ವಕ ಮತ್ತು ವ್ಯವಸ್ಥಿತ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ಆಸ್ಪತ್ರೆಯ ಅಧಿಕಾರಿಗಳು ಸಹ ಈ ಘಟನೆಗೆ ತಕ್ಷಣ ಪ್ರತಿಕ್ರಿಯಿಸಿಲ್ಲ ಎಂದರು.ಜಿಲ್ಲಾ ಕಾರ್ಯದರ್ಶಿ ಶರಣಬಸವ ಗೋನವಾರ ಮಾತನಾಡಿ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳಿಗೆ ಮಾಧ್ಯಮಗಳಲ್ಲಿ ನಿರಂತರವಾಗಿ ಮತ್ತು ಅವ್ಯಾಹತವಾಗಿ ಅಶ್ಲೀಲತೆ ಮತ್ತು ಕ್ರೌರ್ಯಗಳ ಪ್ರದರ್ಶನ, ಇಂಟರ್‌ನೆಟ್, ಮೊಬೈಲ್‌ಗಳ ಮೂಲಕ ಪೋರ್ನೋಗ್ರಫಿಕ್ ವೆಬ್‌ಸೈಟ್‌ಗಳನ್ನು ಹರಿಬಿಡುತ್ತಿರುವುದು, ದುರಭ್ಯಾಸಗಳಿಗೆ ವ್ಯಸನಿಗಳನ್ನಾಗಿಸುತ್ತಿರುವುದು ಕಾರಣವಾಗಿವೆ. ಸರ್ಕಾರಗಳು ಉದ್ಯೋಗ ಸೃಷ್ಟಿಸದೆ ಇರುವುದರಿಂದ ಉದ್ಭವಿಸಿರುವ ನಿರುದ್ಯೋಗದ ಕಾರಣದಿಂದ ಕುಟುಂಬ, ಸಮಾಜದಿಂದ ತಿರಸ್ಕಾರಕ್ಕೊಳಪಟ್ಟು ದಾರಿ ಕಾಣದೆ ಹತಾಶರಾಗುವ ಯುವಜನರು ವ್ಯವಸ್ಥಿತ ಪಿತೂರಿಯ ಮೂಲಕ ಇಂತಹ ಅನಾರೋಗ್ಯಕರ ದುಶ್ವಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಹನುಮೇಶ ಹುಡೇದ, ಗೋವಿಂದ ಕೃಷ್ಣಪ್ಪನವರು, ಬಸ್ಸಪ್ಪ ಜೋಗಿ, ಉಳವಪ್ಪ ಅಂಗಡಿ, ಮಲ್ಲಪ್ಪ ಮನ್ಸೂರ, ರಸುಲ್ ನದಾಫ್, ರಾಣಪ್ಪ ಸಾವಂತನೂರ ಇದ್ದರು.