ಸಾರಾಂಶ
ಗಂಗಾವತಿ: ತಾಲೂಕಿನ ವಿರೂಪಾಪುಗಡ್ಡೆಯಲ್ಲಿ ಇರುವ ಗೆಸ್ಟ್‌ಹೌಸ್ ಒಂದರಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಇಲ್ಲಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಲ್ಲದೆ ಸಂತ್ರಸ್ತೆಗೆ ತಲಾ ₹3 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.ಮಂಗಳವಾರ ನ್ಯಾಯಾಲಯದ ಕಚೇರಿಯಲ್ಲಿ ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮೀ ಎಸ್. ಪ್ರಕರಣದ ಮಾಹಿತಿ ನೀಡಿದ್ದಾರೆ.ಗಂಗಾವತಿ ತಾಲೂಕಿನ ವಿರೂಪಾಪುರ ಗಡ್ಡೆಯ ಹೇಮಾ ಗೆಸ್ಟ್‌ಹೌಸ್‌ನಲ್ಲಿ 2015 ಆ. 22ರಂದು ಪಶ್ಚಿಮ ಬಂಗಾಳದ 30 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆದಿತ್ತು. ಹೈದರಾಬಾದ್‌ನ ಸಾಫ್ಟ್‌ವೇರ್ ಎಂಜಿನಿಯರ್, ಉತ್ತರ ಪ್ರದೇಶದ ಮೂಲದ ರೊಹಿತ್ ಮಂಗಲಿಕ್ ಮತ್ತು ಹೈದರಾಬಾದ್‌ನಲ್ಲಿ ಡಿಇ, ಶಾ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ರಾಜಸ್ಥಾನ ಮೂಲದ ರಾಜಕುಮಾರ ಸೈನಿ ಅತ್ಯಾಚಾರ ಮಾಡಿದ್ದರು.ಈ ಇಬ್ಬರು ಪಶ್ಚಿಮ ಬಂಗಾಳದ ಮಹಿಳೆಯನ್ನು ಪ್ರವಾಸಕ್ಕೆ ಕರೆತಂದಿದ್ದರು. ವಿರೂಪಾಪುರಗಡ್ಡೆಯ ಹೇಮಾ ಗೆಸ್ಟ್ ಹೌಸ್‌ನಲ್ಲಿ ಮಹಿಳೆಗೆ ಸಾಫ್ಟ್ ಡ್ರಿಂಕ್ಸ್‌ನಲ್ಲಿ ನಶೆ ಬರುವ ಮದ್ಯ ಕುಡಿಸಿ ಇಬ್ಬರು ಅತ್ಯಾಚಾರ ಮಾಡಿದ್ದರು.ಈ ಕೃತ್ಯದ ಬಗ್ಗೆ ಸಾಕ್ಷಿ ಆಧಾರಗಳನ್ನು ಆಧರಿಸಿ ತನಿಖಾಧಿಕಾರಿಯಾಗಿದ್ದ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಪ್ರಭಾಕರ ಧರ್ಮಟ್ಟಿ ಅವರು ನ್ಯಾಯಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಈ ಪ್ರಕರಣವನ್ನು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 2024 ಫೆ. 26ರಂದು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಅರೋಪಿಗಳು ತಪ್ಪಿತಸ್ಥರೆಂದು ತೀರ್ಪು ನೀಡಿ, ಕಲಂ 376(ಡಿ) ಅಪರಾಧಕ್ಕೆ 20 ವರ್ಷಗಳ ಕಾಲ ಕಠಿಣ ಕಾರಾಗೃಹ ವಾಸದ ಶಿಕ್ಷೆ ನೀಡಿದ್ದಾರೆ. ಸಂತ್ರಸ್ತ ಮಹಿಳೆಗೆ ಪರಿಹಾರ ರೂಪದಲ್ಲಿ ಆರೋಪಿಗಳಿಬ್ಬರೂ ತಲಾ ₹3 ಲಕ್ಷದಂತೆ ಒಟ್ಟು ₹6 ಲಕ್ಷವನ್ನು ಮೂರು ತಿಂಗಳ ಒಳಗಾಗಿ ನೀಡಬೇಕು. ಒಂದು ವೇಳೆ ಪರಿಹಾರ ನೀಡದೆ ಇದ್ದರೆ 5 ವರ್ಷ ಹೆಚ್ಚುವರಿ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿ ತೀರ್ಪು ನೀಡಿದ್ದಾರೆ.ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮೀ ಅವರು ಸಂತ್ರಸ್ತೆ ಪರವಾಗಿ ವಾದ ಮಂಡಿಸಿದ್ದು, ಗ್ರಾಮೀಣ ಠಾಣೆಯ ಸಿಬ್ಬಂದಿ ವೆಂಕಟೇಶ ಮತ್ತು ಬಸವರಾಜ್ ಅವರು ಪ್ರಕರಣದ ವಿಚಾರಣೆ ವೇಳೆ ಸಾಕ್ಷಿಗಳನ್ನು ಹಾಜರು ಪಡಿಸಿದ್ದರೆಂದು ತಿಳಿಸಿದರು.