ಅತ್ಯಾಚಾರ ಆರೋಪ ಕೇಸ್ ಖುಲಾಸೆ, ಬಲಿಪಶು ಮಾಡಿದ್ರು: ಡಿ.ಎನ್. ಜೀವರಾಜ್
KannadaprabhaNewsNetwork | Published : Oct 11 2023, 12:45 AM IST
ಅತ್ಯಾಚಾರ ಆರೋಪ ಕೇಸ್ ಖುಲಾಸೆ, ಬಲಿಪಶು ಮಾಡಿದ್ರು: ಡಿ.ಎನ್. ಜೀವರಾಜ್
ಸಾರಾಂಶ
ಅತ್ಯಾಚಾರ ಆರೋಪ ಕೇಸ್ ಖುಲಾಸೆ, ಬಲಿಪಶು ಮಾಡಿದ್ರು: ಡಿ.ಎನ್. ಜೀವರಾಜ್
ಚುನಾವಣೆಯಲ್ಲಿ ಗೆಲ್ಲಲು ಕೀಳುಮಟ್ಟದ ರಾಜಕಾರಣ ಮಾಡಿದ್ದಾರೆ. ಈ ಪ್ರಕರಣದಲ್ಲಿನ ನಟರಿಗೆ ಶಿಕ್ಷೆಯಾಗಿದೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಭಗವಂತನ ನ್ಯಾಯಾಲಯದಲ್ಲಿ ಶಿಕ್ಷೆಯಾಗಲಿದೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ನನ್ನ ವಿರುದ್ಧ ಹಾಕಲಾಗಿದ್ದ ಅತ್ಯಾಚಾರ ಆರೋಪದ ಕೇಸ್ ಖುಲಾಸೆಯಾಗಿದೆ. ಈ ಕೇಸ್‌ನಿಂದ ನನ್ನ ರಾಜಕೀಯ ಜೀವನಕ್ಕೆ ಹಿನ್ನೆಡೆಯಾಯ್ತು, ನನ್ನನ್ನು ಬಲಿಪಶು ಮಾಡಿದರು ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಹೇಳಿದರು. ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಅತ್ಯಾಚಾರದ ಸುಳ್ಳು ಆಪಾದನೆ ಮಾಡಿ ಮಾನಹಾನಿಗೆ ಯತ್ನಿಸಿದ ಇಬ್ಬರು ಆರೋಪಿಗಳಿಗೆ ಎನ್ಆರ್ ಪುರ ನ್ಯಾಯಾಲಯ ತಲಾ 2 ವರ್ಷ ಶಿಕ್ಷೆ ಮತ್ತು ದಂಡ ವಿಧಿಸಿದೆ. ಇದು ಸತ್ಯಕ್ಕೆ ಸಂದ ಜಯವಾಗಿದೆ ಎಂದರು. ನಮ್ಮ ವಿರುದ್ಧ ಸುಳ್ಳು ಆಪಾದನೆ ಮಾಡಿ, ನಮ್ಮ ಚಾರಿತ್ರ್ಯವಧೆಗೆ ಯತ್ನಿಸಿದ ಎನ್ಆರ್ ಪುರ ಈಚೆಕೆರೆ ಗ್ರಾಮದ ಮನು ಮತ್ತು ಮಡಬೂರಿನ ಅರಣ್ಯಾನಿ ಎಂಬುವವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ ಎಂದರು. ಚಾರಿತ್ರ್ಯವಧೆ ಮಾಡಿದರೆ ಮಾತ್ರ ನಮ್ಮನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯ ಎಂದು ಯೋಚಿಸಿದ ಕೆಲವರು ನಮ್ಮ ಜೊತೆಯೇ ಇದ್ದ ಮನು ಎಂಬ ಕಾರ್ಯಕರ್ತನನ್ನು ಬಳಸಿಕೊಂಡು ಇಲ್ಲಸಲ್ಲದ ಕೆಟ್ಟ ಆರೋಪ ಮಾಡಿದ್ದಲ್ಲದೆ, ಪ್ರಾರಂಭದಲ್ಲಿ 5 ಕೋಟಿ ರು.ಗೆ ಬೇಡಿಕೆ ಇಟ್ಟರು. ನಂತರ 2 ಕೋಟಿಗೆ ಇಳಿಸಿದರು. ಕೊನೆಗೆ 22 ಲಕ್ಷ ರು.ಗಳಿಗೆ ಬೇಡಿಕೆ ಇಟ್ಟರು. ಹಣ ಕೊಡದಿದ್ದರೆ ಮಾನಹಾನಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ವಿವರಿಸಿದರು. ಇದರ ವಿರುದ್ಧ ನಾನು 2013 ಆಗಸ್ಟ್ 20 ರಂದು ಬೆಂಗಳೂರಿನ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಆದರೆ, 2013 ನ. 8 ರಂದು ಮನು ಮತ್ತು ಅರಣ್ಯಾನಿ ಅವರು ಎನ್ಆರ್ ಪುರ ಪೊಲೀಸ್ ಠಾಣೆಯಲ್ಲಿ ನನ್ನನ್ನೂ ಸೇರಿಸಿ ಎನ್ಆರ್ ಪುರ ತಾಪಂ ಮಾಜಿ ಅಧ್ಯಕ್ಷ ಆಶೀಷ್ ಕುಮಾರ್ ಮತ್ತೋರ್ವ ತಾಪಂ ಮಾಜಿ ಅಧ್ಯಕ್ಷ ನಾಗರಾಜ್ ಎಂಬ 3 ಮಂದಿ ವಿರುದ್ಧ ಅತ್ಯಂತ ನೋವುಂಟು ಮಾಡುವಂತಹ ಕೆಟ್ಟ ಕೇಸು ದಾಖಲಿಸಿದರು. ಅಂದಿನ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಸಮಗ್ರ ತನಿಖೆ ನಡೆಸಿದ ಸಿಐಡಿ ಪೊಲೀಸರು ಜೀವರಾಜ್, ಇತರರ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎನ್ನುವ ತೀರ್ಮಾನಕ್ಕೆ ಬಂದು 2014 ರಲ್ಲಿ ಎನ್ಆರ್ ಪುರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿತು ಎಂದು ಮಾಹಿತಿ ನೀಡಿದರು. ನಂತರ ಮನು ಮತ್ತು ಜೊತೆಗಾರರು ಕೋರ್ಟ್‌ನಲ್ಲಿ ಬಿ ರಿಪೋರ್ಟ್ ತಪ್ಪು ಎಂದು ಚಾಲೆಂಜ್ ಮಾಡಿದರು. ಆದರೆ ಅದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಅದಕ್ಕೂ ನ್ಯಾಯಾಲಯದಲ್ಲಿ ಸೋಲಾಯಿತು. ಇದಾದ ಬಳಿಕ ಕೆಲವು ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿ ಇದೇ ಪ್ರಕರಣದ ಮೇಲೆ ಮಾತನಾಡಲಾರಂಭಿಸಿದರು. ಇದರ ಪರಿಣಾಮ ನಾನೂ ಸೇರಿದಂತೆ ಆಶೀಷ್ ಕುಮಾರ್, ನಾಗರಾಜ್ ಅವರ ಕುಟುಂಬ ಸಾರ್ವಜನಿಕವಾಗಿ ಹಿಂಸೆ ಅನುಭವಿಸಿದ ಜೊತೆಗೆ ನಾನು ಎರಡು ಬಾರಿ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಆದರೆ, ನಾವು ಸಲ್ಲಿಸಿದ ದೂರು ಮಾತ್ರ ಹಾಗೆಯೇ ಇತ್ತು. ಅದು ಏಕೆ ಎನ್ನುವುದು ಗೊತ್ತಾಗಲಿಲ್ಲ. ನಮ್ಮ ಸೋಲಿನ ನಂತರ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿ, ಜಿ.ಪರಮೇಶ್ವರ್ ಗೃಹ ಸಚಿವರಾದ ಮೇಲೆ ಈ 3 ಪ್ರಕರಣಗಳು ಸಿಐಡಿಯಿಂದ ಚಾರ್ಜ್‌ಶೀಟ್ ಆಗಿಬಂತು. 2018 ರಿಂದ 2023 ರ ವರೆಗೆ ಎನ್‌ಆರ್ ಪುರ ಕೋರ್ಟ್‌ನಲ್ಲಿ ಸುಧೀರ್ಘ ವಾದ ನಡೆದು ದಾಖಲೆಗಳ ಪರಿಶೀಲನೆ ನಂತರ ಇದೇ ತಿಂಗಳು 5 ರಂದು 65 ಪುಟಗಳ ತೀರ್ಪು ನೀಡಿ ಸುಳ್ಳು ಆಪಾದನೆ ಮಾಡಿದ ಮನು ಮತ್ತು ಅರಣ್ಯಾನಿ ಇಬ್ಬರಿಗೂ 2 ವರ್ಷ ಸಜೆ, 5000 ರು. ದಂಡ ವಿಧಿಸಲಾಗಿದೆ ಎಂದು ವಿವರಿಸಿದರು. ಪ್ರಕರಣದಲ್ಲಿ ನನಗೆ ಜಯವಾಗಿದೆ ಎನ್ನುವ ಸಂತೋಷ ಇದೆ. ಆದರೂ ನನಗಾಗಿರುವ ನೋವು ಇನ್ನೊಬ್ಬರಿಗೆ ಆಗಬಾರದು ಎನ್ನುವ ಕಾರಣಕ್ಕೆ ಇಷ್ಟು ವರ್ಷ ಹೋರಾಟ ನಡೆಸಿದ್ದೇನೆ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಚುನಾವಣೆ ಪ್ರಚಾರ ಮಾಡಿದ ಕಾಂಗ್ರೆಸ್ ಮುಖಂಡರು ಈಗ ಏನು ಉತ್ತರ ಕೊಡುತ್ತಾರೋ ಗೊತ್ತಿಲ್ಲ. ನನ್ನ ಸೋಲಿಗೆ ಇದೇ ಪ್ರಕರಣ. ಆದರೆ ಪ್ರಕರಣದಲ್ಲಿ ನಿರ್ದೇಶಕರು, ನಿರ್ಮಾಪಕ ಪಾತ್ರ ವಹಿಸಿದವರಿಗೆ ಭಗವಂತನ ನ್ಯಾಯಾಲಯದಲ್ಲಿ ಶಿಕ್ಷೆ ಆಗಲಿದೆ. ಕಾದು ನೋಡುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಆಶೀಷ್ ಕುಮಾರ್, ನಾಗರಾಜ್ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವರಾಜ ಶೆಟ್ಟಿ ಹಾಜರಿದ್ದರು. 10 ಕೆಸಿಕೆಎಂ 2 ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆಶೀಷ್‌ಕುಮಾರ್, ದೇವರಾಜ್ ಶೆಟ್ಟಿ, ನಾಗರಾಜ್ ಇದ್ದರು.