ಕೊಲೆ ಖಂಡಿಸಿ ಆಸ್ಪತ್ರೆಗಳು ಒಪಿಡಿ ಬಂದ್

| Published : Aug 18 2024, 01:45 AM IST

ಸಾರಾಂಶ

ಕೆ.ಆರ್. ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಜೆಎಸ್ಎಸ್ ಆಸ್ಪತ್ರೆ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವನ್ನು ಮುಚ್ಚಲಾಗಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಕೊಲ್ಕತ್ತಾದ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಮಾಡಿರುವುದನ್ನು ವಿರೋಧಿಸಿ ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಹೊರ ರೋಗಿಗಳ ವಿಭಾಗವನ್ನು ಶನಿವಾರ ಬಂದ್ ಮಾಡುವ ಮೂಲಕ ವೈದ್ಯರು ಶನಿವಾರ ಪ್ರತಿಭಟಿಸಿದರು.ಈ ಬಗ್ಗೆ ಮಾಹಿತಿ ಕೊರತೆಯಿಂದ ಗ್ರಾಮೀಣ ಭಾಗದಿಂದ ಅನಾರೋಗ್ಯದಿಂದ ಆಗಮಿಸಿದ್ದ ಸಾರ್ವಜನಿಕರು ವೈದ್ಯರನ್ನು ಭೇಟಿಯಾಗಲು ಸಾಧ್ಯವಾಗದೆ ಪರದಾಡಿದರು.ಕೆ.ಆರ್. ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಜೆಎಸ್ಎಸ್ ಆಸ್ಪತ್ರೆ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವನ್ನು ಮುಚ್ಚಲಾಗಿತ್ತು. ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.ಪ್ರತಿಭಟನಾ ಮೆರವಣಿಗೆಮೈಸೂರು ಜಿಲ್ಲಾ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ಸಂಘದವರು ದಸರಾ ವಸ್ತುಪ್ರದರ್ಶನ ಮೈದಾನದಿಂದ ಹಾರ್ಡಿಂಜ್ ವೃತ್ತದ ಮೂಲಕ ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅತ್ಯಾಚಾರ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಹಾಗೂ ಪ್ರಕರಣ ತನಿಖೆಗೆ ಒತ್ತಾಯಿಸಿ ಪ್ರತಿಭಟಿಸಿದಾಗ ಬಂಧಿಸಿದ್ದ ವೈದ್ಯರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.ಸಂಘದ ಅಧ್ಯಕ್ಷೆ ಡಾ.ಎನ್. ಸುನಂದಾ ನೇತೃತ್ವ ವಹಿಸಿದ್ದರು.ನಿವಾಸಿ ವೈದ್ಯರ ಪ್ರತಿಭಟನೆಮೈಸೂರು ವೈದ್ಯಕೀಯ ಕಾಲೇಜಿನ ನಿವಾಸಿ ವೈದ್ಯರ ಸಂಘದವರು ಕೆ.ಆರ್. ಆಸ್ಪತ್ರೆ ಆವರಣದಲ್ಲಿ ಶನಿವಾರವೂ ಪ್ರತಿಭಟಿಸಿದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನೆಗೆ ಬೆಂಬಲ ಸೂಚಿಸಿದರು.ಕೇಂದ್ರ ಸರ್ಕಾರವು ಕೇಂದ್ರ ಆರೋಗ್ಯ ರಕ್ಷಣಾ ಕಾಯ್ದೆಗೆ ಒಪ್ಪಿಗೆ ಸೂಚಿಸಿದ್ದು, ಅದನ್ನು ಜಾರಿಗೆ ತರಬೇಕು ಎಂದು ಸಂಘದ ಅಧ್ಯಕ್ಷ ಡಾ. ಮನೀಶ್ ಹಾಗೂ ಸದಸ್ಯರು ಆಗ್ರಹಿಸಿದರು. ಮೈಸೂರು ವೈದ್ಯಕೀಯ ಕಾಲೇಜು ಡೀನ್ ಮತ್ತು ನಿರ್ದೇಶಕಿ ಡಾ.ಕೆ.ಆರ್. ದಾಕ್ಷಾಯಿಣಿ ಹಾಗೂ ವೈದ್ಯಾಧಿಕಾರಿಗಳು ಇದ್ದರು.