ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಐವರ ಬಂಧನ

| Published : Jul 11 2024, 01:36 AM IST / Updated: Jul 11 2024, 01:27 PM IST

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಐವರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳನ್ನು ಹಾಗೂ ಇನ್ನೊಬ್ಬಾಕೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಆರೋಪದ ಮೇಲೆ ಮೂವರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ 

 ಮಡಿಕೇರಿ :  ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳನ್ನು ಹಾಗೂ ಇನ್ನೊಬ್ಬಾಕೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಆರೋಪದ ಮೇಲೆ ಮೂವರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಕುಟ್ಟದ ನಾಥಂಗಾಲ ಗ್ರಾಮದ ನವೀಂದ್ರ (24), ಅಕ್ಷಯ್ (27) ಹಾಗೂ ಕೇರಳ ರಾಜ್ಯ ತೋಲ್ಪಟ್ಟಿ ನಡುಂದನ ಕಾಲೋನಿಯ ರಾಹುಲ್ (21), ಮನು (23), ಸಂದೀಪ (27) ಬಂಧಿತ ಆರೋಪಿಗಳು.

ಪ್ರಕರಣದ ವಿವರ:

ಮಂಗಳವಾರ ಮಧ್ಯಾಹ್ನ 3.15ರ ವೇಳೆಗೆ ಕುಟ್ಟದಿಂದ ನಾಗರಹೊಳೆ ಕಡೆ ಹೋಗುವ ರಸ್ತೆಯಲ್ಲಿ ಇಬ್ಬರು ಬಾಲಕಿಯರು ತಮ್ಮ ಪರಿಚಯಸ್ಥ ಇಬ್ಬರು ಯುವಕರ ಸಹಿತ   ಐದು ಮಂದಿ ತೆರಳುತ್ತಿದ್ದರು. ಈ ಸಂದರ್ಭ ಕುಟ್ಟ ಕಡೆಯಿಂದ ಬರುತ್ತಿದ್ದ ಕಾರನ್ನು ನಿಲ್ಲಿಸಿದ್ದು, ಕಾರಿನಲ್ಲಿ ಇದ್ದ ಅಪರಿಚಿತ ಇಬ್ಬರು ವ್ಯಕ್ತಿಗಳೊಂದಿಗೆ ನಾಗರಹೊಳೆ ಕಡೆಗೆ ಬಿಡುವಂತೆ ಈ ಐದು ಮಂದಿ ಕೇಳಿದ್ದರು. ಕಾರಿನಲ್ಲಿ ಏಳು ಜನ ಪ್ರಯಾಣಿಸಿದ್ದು, ಸ್ವಲ್ಪ ದೂರ ತೆರಳಿದ ನಂತರ ರಸ್ತೆ ಬದಿಯ ಕಾಫಿ ತೋಟದ ಬಳಿ ಕಾರನ್ನು ನಿಲ್ಲಿಸಿ ಕಾರಿನಲ್ಲಿ ಅಪರಿಚಿತ ಇಬ್ಬರೂ ವ್ಯಕ್ತಿಗಳು ಓರ್ವ ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರ ಮಾಡಿದ್ದಾರೆ.

ಆಕೆಯ ಜೊತೆಯಲ್ಲಿ ಬಂದಿದ್ದ ಮೂವರು ಹುಡುಗರು ಮತ್ತೊಬ್ಬಳು ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿರುವ ಕುರಿತು ದೂರು ಸ್ವೀಕರಿಸಿದ್ದು ಕುಟ್ಟ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯರ ಜೊತೆಗಿದ್ದ ಯುವಕರೇ ಪೂರ್ವನಿಯೋಜಿತವಾಗಿ ಕೃತ್ಯ ನಡೆಸಿದ್ದು, ಅವರೇ ಕರೆ ಮಾಡಿ ಕಾರಿನಲ್ಲಿ ಇಬ್ಬರನ್ನು ಅದೇ ಮಾರ್ಗದಲ್ಲಿ ಕರೆಸಿದ್ದಾಗಿ ಬಳಿಕ ತಿಳಿದುಬಂದಿದೆ.

ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ವಿರಾಜಪೇಟೆ ಉವಿಭಾಗದ ಡಿವೈಎಸ್ಪಿ ಆರ್. ಮೋಹನ್ ಕುಮಾರ್, ಕುಟ್ಟ ವೃತ್ತ ಸಿಪಿಐ ಸಿ. ಎ.ಮಂಜಪ್ಪ, ಕುಟ್ಟ ಪೊಲೀಸ್ ಠಾಣೆ ಪಿಎಸ್ಐ ಮಹದೇವ ಹೆಚ್.ಕೆ. ಸಿಬ್ಬಂದಿಗಳು, ಅಪರಾಧ ಪತ್ತೆ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷ್ಯಧಾರಗಳನ್ನು ಕಲೆಹಾಕಿದರು. ದೂರುದಾರರು ನೀಡಿದ ಮಾಹಿತಿ ಅನ್ವಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಮತ್ತು ತಾಂತ್ರಿಕ ಸಿಬ್ಬಂದಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣ ದಾಖಲಾದ 12 ಗಂಟೆಯಲ್ಲಿ 5 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.