ವಿಧವೆ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸುರಪುರ ತಾಲೂಕಿನ ಶ್ರೀನಿವಾಸಪುರ ಗ್ರಾಮದ ಮೌನೇಶ ಬೊಮ್ಮನಹಳ್ಳಿ ಎಂಬಾತನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 27 ಸಾವಿರ ರು. ದಂಡ ವಿಧಿಸಿ ಯಾದಗಿರಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಶೋರಾಪುರ ಪೀಠದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಶನಿವಾರ ತೀರ್ಪು ನೀಡಿದರು.

ಕನ್ನಡಪ್ರಭ ವಾರ್ತೆ ಸುರಪುರ

2023ರ ಜು.27ರಂದು ರಾತ್ರಿ 8ರ ವೇಳೆ ಮಹಿಳೆಯೊಬ್ಬಳು ಬಹಿರ್ದೆಸೆಗೆಂದು ಹೊಲದ ಕಡೆ ತೆರಳುತ್ತಿದ್ದಾಗ ಆರೋಪಿ ಮೌನೇಶ ಆಕೆಯನ್ನು ತಡೆದು ಅತ್ಯಾಚಾರಗೈದಿದ್ದಾನೆ ಎಂದು ಆರೋಪಿಸಲಾಗಿತ್ತು. ಸಂತ್ರಸ್ತೆ ತಾನು ವಿಧವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ಬೇಡಿಕೊಂಡರೂ ಆರೋಪಿ ಕೃತ್ಯ ಎಸಗಿದ್ದ. ಆಕೆ ಸಹಾಯಕ್ಕಾಗಿ ಚೀರಾಡುತ್ತಿದ್ದಾಗ ಸಂಬಂಧಿಕರು ಬರುತ್ತಿರುವುದನ್ನು ಗಮನಿಸಿದ ಆರೋಪಿ, ಈ ವಿಷಯ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಈ ಕುರಿತು ಸಂತ್ರಸ್ತೆ ಹುಣಸಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪಿಎಸ್‌ಐ ಚಿದಾನಂದ ಹಾಗೂ ಸಿಪಿಐ ದೌಲತ್‌ ಎಸ್. ಕುರಿ ಅವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ಸುರಪುರದ ಸರ್ಕಾರಿ ಆಭಿಯೋಜಕ ಹಯಾಳಪ್ಪ ಬಳಬಟ್ಟಿ ವಾದ ಮಂಡಿಸಿದ್ದರು.