ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಿಚಿತ ಮಹಿಳೆಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಸಾಮೂಹಿಕ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದಡಿ ‘ಕರ್ನಾಟಕ ರಾಷ್ಟ್ರ ಸಮಿತಿ’ (ಕೆಆರ್‌ಎಸ್) ಪಕ್ಷದ ಮುಖಂಡನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೋಲಾರ ಮೂಲದ 34 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬೆಳ್ತೂರು ನಿವಾಸಿ ಶ್ರೀನಿವಾಸ್ ನಾಯಕ್‌ನನ್ನು ಬಂಧಿಸಲಾಗಿದೆ. ಈತನ ಸಹಚರ ಕೃಷ್ಣ ಸೇರಿ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಶ್ರೀನಿವಾಸ್ ನಾಯಕ್ ವಿವಾಹಿತನಾಗಿದ್ದು, ದಾಂಪತ್ಯದಲ್ಲಿ ಬಿರುಕಾಗಿ ಕೆಲ ವರ್ಷಗಳ ಹಿಂದೆ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡು ಒಂಟಿಯಾಗಿ ನೆಲೆಸಿದ್ದ. ಜೀವನೋಪಾಯಕ್ಕಾಗಿ ಕಾಡುಗೋಡಿ ಬಳಿ ಗ್ರಾಮ ಒನ್ ಕಚೇರಿ ನಡೆಸುತ್ತಿದ್ದ. ಜತೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಹದೇವಪುರ ವಿಧಾನಸಭಾ ಕ್ಷೇತ್ರದ ಯುವ ಘಟಕದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದ. ದೂರುದಾರ ಸಂತ್ರಸ್ತೆಯು ಈ ಹಿಂದೆ ಆರೋಪಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.ಆರಂಭದಲ್ಲಿ ಇಬ್ಬರು ಸಲುಗೆಯಿಂದ ಇದ್ದರು. ಇತ್ತೀಚೆಗೆ ಇಬ್ಬರ ನಡುವೆ ವೈಮನಸು ಮೂಡಿದ್ದರಿಂದ ಸಂತ್ರಸ್ತೆಯು ಕೆಲಸ ತೊರೆದಿದ್ದರು. ಬಳಿಕ ಪರಮೇಶ್ ಎಂಬಾತನ ಜತೆಗೆ ಸ್ನೇಹ ಬೆಳೆಸಿದ್ದರು. ಇದನ್ನು ಸಹಿಸದ ಆರೋಪಿಯು ಇತ್ತೀಚೆಗೆ ಪರಮೇಶ್ ಜತೆಗೂ ಜಗಳ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.
ಅಶ್ಲೀಲವಾಗಿ ನಿಂದನೆಸಂತ್ರಸ್ತೆಯು ಜುಲೈ 1ರಂದು ಕಾಡುಗೋಡಿ ಮೆಟ್ರೊ ನಿಲ್ದಾಣ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆರೋಪಿ ಶ್ರೀನಿವಾಸ್ ಹಾಗೂ ಸಚಹರ ಕೃಷ್ಣ ಮತ್ತು ಮತ್ತೊಬ್ಬ ಸಂತ್ರಸ್ತೆಯನ್ನು ತಡೆದು ಅಶ್ಲೀಲವಾಗಿ ನಿಂದಿಸಿದ್ದಾರೆ. ಆಗ ಕೃಷ್ಣ ಎಂಬಾತ ‘ನಾವು ಮೂವರು ನಿನ್ನ ಮೇಲೆ ಸಾಮೂಹಿಕ ಆತ್ಯಾಚಾರ ಮಾಡಿ ರೈಲ್ವೆ ಟ್ರ್ಯಾಕ್‌ಗೆ ಎಸೆಯುತ್ತೇವೆ’ ಬೆದರಿಸಿದ್ದಾರೆ. ‘ನಿನ್ನ ವೈಯಕ್ತಿಕ ಫೋಟೋ ಹಾಗೂ ವಿಡಿಯೋಗಳು ನಮ್ಮ ಬಳಿಯಿದ್ದು ಯೂಟ್ಯೂಬ್‌ನಲ್ಲಿ ಹರಿಬಿಡುತ್ತೇನೆ. ಸುಳ್ಳು ದೂರು ನೀಡಿ ಜೈಲಿಗೆ ಕಳುಹಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಓರ್ವನ ಬಂಧಿಸಿ, ತಲೆಮರೆಸಿಕೊಂಡಿರುವ ಆರೋಪಿಗಳಿಬ್ಬರ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.